ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಯೋಜನೆಗಳ ಶೀಘ್ರ ಜಾರಿಗೆ ಕ್ರಮ ಕೈಗೊಳ್ಳಿ

Rashmi Kasaragodu
Updated On : 27 Oct 2013, 1:04 am


ಕನ್ನಡಪ್ರಭ ವಾರ್ತೆ, ಗದಗ, ಅ. 26
ಇಲಾಖೆಗಳು ತಮಗೆ ನೀಡಿದ ಯೋಜನಾ ಅನುದಾನವನ್ನು ಜನವರಿ-ಮಾರ್ಚ್ ತಿಂಗಳ ಅವಧಿಯಲ್ಲಿ ವೆಚ್ಚ ಮಾಡುವ ಪರಿಪಾಠ ಬಿಟ್ಟು, ಜನವರಿ ತಿಂಗಳೊಳಗಾಗಿ ಶೇ. 75ರಷ್ಟು ಅನುದಾನ ಖರ್ಚಾಗುವಂತೆ ಯೋಜನೆಗಳ ಶೀಘ್ರ ಜಾರಿಗೆ ಕ್ರಮ ಜರುಗಿಸಲು ರಾಜ್ಯದ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ. ಮದನಗೋಪಾಲ ಸೂಚಿಸಿದರು.
ಅವರು ಗದಗ ಜಿಪಂ ಸಭಾಭವನದಲ್ಲಿ ಶನಿವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು. ಯಾವುದೇ ಖರೀದಿ, ಟೆಂಡರ್ ಹಾಗೂ ಕಾಮಗಾರಿಗಳ ಗುಣಮಟ್ಟಗಳ ಕುರಿತಂತೆ ಒತ್ತಡಕ್ಕೆ ಮಣಿಯಬಾರದು. ನಿಯಮಗಳನ್ವಯ ಜನಹಿತವೇ ಮುಖ್ಯ ಗುರಿಯಾಗಿಸಿಕೊಂಡು ಕಾರ್ಯನಿರ್ವಹಿಸಬೇಕು. ಕಟ್ಟಡ, ರಸ್ತೆ ಕಾಮಗಾರಿಗಳ ಟೆಂಡರ್ ಆದ ಮೇಲೆ ಅವುಗಳ ಗುಣಮಟ್ಟ ಹಾಗೂ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ನೋಡಿಕೊಳ್ಳುವುದು ಆಯಾ ಇಲಾಖೆ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಜಿಲ್ಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಯಾವುದೇ ಸರ್ಕಾರಿ ಕಟ್ಟಡಗಳು ಖಾಲಿ ಬಿಡದೇ ಅಲ್ಲಿಗೆ ಕಚೇರಿಗಳನ್ನು ವರ್ಗಾಯಿಸಬೇಕು. ಕನಕ ಹತ್ತಿ ಬೀಜಗಳು ಕಳಪೆ ಇರುವ ಕುರಿತು ಜಿಲ್ಲೆಯ ಮುಂಡರಗಿ, ಗದಗ ಹಾಗೂ ಶಿರಹಟ್ಟಿ ವ್ಯಾಪ್ತಿಯಿಂದ ಈವರೆಗೆ 2102 ರೈತರು ದೂರು ನೀಡಿದ್ದು, 3 ಸಾವಿರ ಹೆಕ್ಟೇರ್ ಭೂಮಿ ಒಳಗೊಂಡಿದೆ. ಕನಕ ಹತ್ತಿ ಕುರಿತಂತೆ ಧಾರವಾಡ ಕೃಷಿ ವಿವಿ ತಜ್ಞರ ಸಮಿತಿ ಅ. 19 ರಂದು ಬಂದು ದಾಖಲೆ ಸಂಗ್ರಹಿಸಿದ್ದು, ಆ ಕುರಿತು ನಿಗಾವಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದರು. ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಮಾತನಾಡಿ, ಈಗ ಸಾಂಕ್ರಾಮಿಕ ರೋಗಗಳು ಪ್ರಾರಂಭಗೊಳ್ಳುವ ಕಾಲ. ಈಗಿನಿಂದಲೇ ಡೆಂಘೀ, ಮಲೇರಿಯಾ, ಚಿಕೂನ್ ಗುನ್ಯಾ ಮುಂತಾದ ಸಾಂಕ್ರಾಮಿಕ ರೋಗ ತಡೆಗೆ ಸಾರ್ವಜನಿಕರು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಮತ್ತು ಸ್ವಚ್ಛತಾ ಕಾರ್ಯಗಳ ಕುರಿತು ಪ್ರತಿ ವಾರ್ಡ್ ಹಾಗೂ ಗ್ರಾಮಗಳಲ್ಲಿ ಜಾಗೃತಿ ಮೂಡಿಸಬೇಕು. ಸಮಾಜ ಕಲ್ಯಾಣ ಇಲಾಖೆಯ 7 ಮೆಟ್ರಿಕ್ ಪೂರ್ವ, ಹಾಗೂ 8 ಮೆಟ್ರಿಕ್ ನಂತರ ವಿದ್ಯಾರ್ಥಿನಿಲಯಗಳ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವಣೆ ಸಲ್ಲಿಸಬೇಕು ಹಾಗೂ ಹಿಂದುಳಿದ ವರ್ಗ ಇಲಾಖೆಯ 11 ವಿದ್ಯಾರ್ಥಿ ನಿಲಯಗಳಿಗೆ ಬೇಕಾದ ನಿವೇಶನ ಒದಗಿಸಲು ಅಗತ್ಯದ ಪಟ್ಟಿಯನ್ನು ಸಂಬಂಧಿತ ತಹಸೀಲ್ದಾರ್ಗೆ ಒದಗಿಸಬೇಕು. ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ 1503 ಮನೆಗಳಿಗೆ ಹಾನಿಯಾಗಿದೆ. 2995 ಎಕರೆ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದ್ದು ಸಂಬಂಧಿತರಿಗೆ ಪರಿಹಾರ ವಿತರಿಸಲಾಗುತ್ತಿದೆ. ಭೀಷ್ಮ ಕೆರೆಯ ಆವರಣದ ಸೌಂದರ್ಯೀಕರಣ ಹಾಗೂ ಗಿಡಮರ ಬೆಳೆಸುವುದನ್ನು ಅರಣ್ಯ ಹಾಗೂ ತೋಟಗಾರಿಕೆ ಇಲಾಖೆಗಳು 2 ತಿಂಗಳೊಳಗಾಗಿ ಪೂರ್ಣಗೊಳಿಸಬೇಕು. ಡಾ. ಬಿ.ಆರ್. ಅಂಬೇಡ್ಕರ್ ಭವನದ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು. ಜಿಲ್ಲಾ ರಂಗಮಂದಿರದ ಉಳಿದ ಅನುದಾನ ರು. 2.06 ಕೋಟಿ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು. ಗದಗ-ಬೆಟಗೇರಿ ನಗರ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆಗೆ 4 ವರ್ಷದ ಹಿಂದೆ ಒದಗಿಸಿದ ರು. 15 ಕೋಟಿ ಅನುದಾನವನ್ನು ಇನ್ನೂ ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಈ ಕುರಿತು ತಕ್ಷಣ ಕ್ರಮ ಜರುಗಿಸಬೇಕು. ಮುಂಡರಗಿಗೆ ಪ್ರತಿ 2 ದಿನಕ್ಕೆ ನೀರು ಪೂರೈಸಲಾಗುತ್ತಿದೆ. ನರಗುಂದ ಕೆರೆ ಸೋರಿಕೆ ಕಾರಣದಿಂದ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ರೋಣ ಹಾಗೂ ಗಜೇಂದ್ರಗಡ ನಗರ ಪ್ರದೇಶಕ್ಕೆ ನೀರು ಒದಗಿಸಲು ರು. 69 ಕೋಟಿಗಾಗಿ ಪ್ರಸ್ತಾವನೆ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದರು. ಸಿಇಒ ವಿ.ಜಿ. ತುರಮರಿ ವಸತಿ ಯೋಜನೆ, ನಿರ್ಮಲ ಭಾರತ ಅಭಿಯಾನ ಹಾಗೂ ಇತರೆ ಜಿಪಂ ಯೋಜನೆಗಳ ಕುರಿತು ವಿವರ ನೀಡಿದರು. ಅಪರ ಜಿಲ್ಲಾಧಿಕಾರಿ ನಾಗರಾಜ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮುಖ್ಯಸ್ಥರು ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement