ಬಾರದ ಅಧಿಕಾರಿಗಳು: ಫಲಾನುಭವಿಗಳ ಪರದಾಟ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಅ. 27
ಸರ್ಕಾರದ ಯೋಜನೆಗಳನ್ನು ಜನರಿಗೆ ಸುಲಭವಾಗಿ ತಲುಪಿಸುವ ದೃಷ್ಟಿಯಿಂದ ಜನರ ಸಮಸ್ಯೆಗಳ ಪಟ್ಟಿ ಮಾಡಿ, ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಉದ್ದೇಶದಿಂದ ಸ್ಥಳದಲ್ಲಿಯೇ ಪರಿಹಾರ ದೊರಕಿಸಿಕೊಡಲು ಸರ್ಕಾರ ಪಿಂಚಣಿ ಅದಾಲತ್ ಕಾರ್ಯಕ್ರಮ ಜಾರಿಗೆ ತಂದಿದ್ದು, ಆದರೆ, ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಫಲಾನುಭವಿಗಳ ಗೋಳಾಟ ಮಾತ್ರ ತಪ್ಪದಂತಾಗಿದೆ.
ಮೊದಲೇ ನಿಗಧಿಯಾದಂತೆ ಶನಿವಾರ ಬೆಳಗ್ಗೆ 11 ಗಂಟೆಗೆ ಪಿಂಚಣಿ ಅದಾಲತ್ ಕಾರ್ಯಕ್ರಮ ಪ್ರಾರಂಭವಾಗಬೇಕಿತ್ತು. ಫಲಾನುಭವಿಗಳಿಗೆ ತಿಳಿಸಿದ ಪ್ರಕಾರ ಬೆಳಗ್ಗೆ 9 ಗಂಟೆಗೆ ಸುಮಾರು 50ಕ್ಕೂ ಹೆಚ್ಚು ಫಲಾನುಭವಿಗಳು ತಹಸೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ಹಾಜರಿದ್ದರು. ಅಧಿಕಾರಿಗಳು ಬರುವ ದಾರಿ ಕಾದು ವೃದ್ಧರು, ಅಂಗವಿಕಲರು, ವಿಧವೆಯರು ಹೈರಾಣಾಗಿ ಹೋದರಲ್ಲದೆ ಮೋಡಕವಿದ ವಾತಾವರಣ ಹಾಗೂ ಜಿಟಿಜಿಟಿ ಮಳೆಯಲ್ಲಿಯೇ ಕುಳಿತು ಬೇಸರದಿಂದ ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿದರು. ಜಿಲ್ಲಾಧಿಕಾರಿಗಳ ಕಚೇರಿಯ ಯೋಜನಾ ನಿರ್ದೇಶಕ ದೇಸಾಯಿ ಈ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅರ್ಹ ಫಲಾನುಭವಿಗಳಿಂದ ಅರ್ಜಿ ಪಡೆದು, ಪರಿಶೀಲನೆ ನಡೆಸಿ ಸ್ಥಳದಲ್ಲಿಯೇ ಅವರಿಗೆ ಪಿಂಚಣಿ ಆದೇಶ ನೀಡಬೇಕಿತ್ತು. ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಯೋಜನೆ ಅಡಿಯಲ್ಲಿ ವೃದ್ಧಾಪ್ಯ, ಅಂಗವಿಕಲ, ವಿಧವಾ ಮತ್ತು ಸಂದ್ಯಾ ಸುರಕ್ಷಾ ಫಲಾನುಭವಿಗಳು ಬರುತ್ತಿದ್ದು, ಇವರ ನ್ಯೂನ್ಯತೆ ತಪಾಸಣೆಗೆ ತಾಲೂಕು ಆಸ್ಪತ್ರೆ ವೈದ್ಯರು, ಉಪಖಜಾನೆ ಇಲಾಖೆಯ ಅಧಿಕಾರಿಗಳು ಹಾಜರಿರಬೇಕು. ಇವರ ಗೈರು ಹಾಜರಿಯೂ ಫಲಾನುಭವಿಗಳಿಗೆ ನಿರಾಸೆ ಮೂಡಿಸಿತು.
3 ತಿಂಗಳ ಹಿಂದೆ ಜು. 9 ರಂದು ಉಪ ವಿಭಾಗಾಧಿಕಾರಿ ಇಸ್ಲಾವುದ್ದೀನ ಗದ್ಯಾಳ ಅವರ ಅಧ್ಯಕ್ಷತೆಯಲ್ಲಿ ನಡೆದ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಎಲ್ಲ ಅಧಿಕಾರಿಗಳು ಹಾಜರಿದ್ದರು. ಶನಿವಾರ ಜರುಗಿದ ಪಿಂಚಣಿ ಅದಾಲತ್ ಕಾರ್ಯಕ್ರಮಕ್ಕೆ ಜಿಲ್ಲೆಯ ಹಿರಿಯ ಅಧಿಕಾರಿಗಳಾದಿಯಾಗಿ ಯಾರೂ ಬರಲೇ ಇಲ್ಲ. ಫಲಾನುಭವಿಗಳು ವಿಚಾರಿಸಿದರೆ ಜಿಲ್ಲಾಧಿಕಾರಿಗಳು ಸಭೆ ಕರೆದಿದ್ದು, ತಹಸೀಲ್ದಾರ್ ಅಲ್ಲಿಗೆ ಹೋಗಿದ್ದಾರೆ ಕಾಯಿರಿ ಎಂದು ಹೇಳುತ್ತಿರುವುದು ಸಾಮಾನ್ಯವಾಗಿತ್ತು.
ಬಾರದ ಪಿಂಚಣಿ: ಜು. 9 ರಂದು ನಡೆದ ಕಾರ್ಯಕ್ರಮದಲ್ಲಿ ಉಪ ವಿಭಾಗಾಧಿಕಾರಿ ಇಸ್ಲಾವುದ್ದೀನ ಗದ್ಯಾಳ ಅಂದು ಫಲಾನುಭವಿಗಳಿಗೆ ಪಿಂಚಣಿ ಆದೇಶ ಪತ್ರ ನೀಡಿದ್ದು, ಇಲ್ಲಿಯವರೆಗೂ ಕೆಲವರಿಗೆ ಪಿಂಚಣಿ ಬಾರದೇ ಇರುವುದರಿಂದ ಅಧಿಕಾರಿಗಳು ನೀಡಿದ ಆದೇಶ ಪ್ರತಿ ಹಿಡಿದುಕೊಂಡು ಫಲಾನುಭವಿಗಳು ನಿತ್ಯ ಉಪಖಜಾನೆಗೆ ಹಾಗೂ ತಹಸೀಲ್ದಾರ್ ಕಾರ್ಯಾಲಯಕ್ಕೆ ತಿರುಗಾಡುತ್ತಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ವಿಧವಾ ವೇತನದ ಫಲಾನುಭವಿ ಪಟ್ಟಣದ ವಿಜಯ ನಗರದ ನಿವಾಸಿ ಕಸ್ತೂರಿಬಾಯಿ ಶಿಂಧೆ ತಮ್ಮ ಅಳಲು ತೋಡಿಕೊಂಡರು.
ಹೆಬ್ಬಾಳ ಗ್ರಾಮದ ನಿವಾಸಿಗಳಾದ ಪಾರವ್ವ ಬಲುಚಗಿ, ಬಸಮ್ಮ ಹಿರೇಮಠ, ಯಲ್ಲಮ್ಮ ಕಲಾರಿ, ಪಾರ್ವತೆವ್ವ ನೆಗಳೂರ, ಮಾಯವ್ವ ನಡುವಿನಕೇರಿ, ಶಾಂತವ್ವ ನೆಗಳೂರ, ಕರೀಂಸಾಬ್ ನದಾಫ, ಯಲ್ಲಪ್ಪ ಬಾರಕೇರ, ಖಾನಸಾಬ್ ನದಾಫ್ ಇವರು ಅನೇಕ ವರ್ಷಗಳಿಂದ ಪಿಂಚಣಿಗಾಗಿ ಅಲೆದಾಡಿ ಸಾವಿರಾರು ಹಣ ಖರ್ಚು ಮಾಡಿದರೂ ಪಿಂಚಣಿ ಬರುತ್ತಿಲ್ಲ. ಸಾಯುವ ಹಂತಕ್ಕೆ ಬಂದರೂ ಸರ್ಕಾರದ ಯೋಜನೆ ನಮಗೆ ತಲುಪಿಲ್ಲ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಅವರು ಅಸಮಾಧಾನ ಹೊರಹಾಕಿದರು.
ಇದೇ ಗ್ರಾಮದ ಗುಡ್ಡಪ್ಪ ಬಾರಕೇರ 3 ವರ್ಷಗಳಿಂದ ತಹಸೀಲ್ದಾರ್ ಕಾರ್ಯಾಲಯಕ್ಕೆ ಅಲೆದಾಡಿ ಅಧಿಕಾರಿಗಳು ಸರಿಯಾದ ಮಾಹಿತಿ ನೀಡದೇ ಇರುವುದರಿಂದ ಮಧ್ಯವರ್ತಿಗಳಿಗೆ ಹಣ ನೀಡಿ ಹಲವಾರು ಬಾರಿ ಪಿಂಚಣಿಗೆ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಇಂತಹ ಇನ್ನು ಅನೇಕ ಫಲಾನುಭವಿಗಳು ಶನಿವಾರ ಅಧಿಕಾರಿಗಳ ಸಮ್ಮುಖದಲ್ಲಿ ತಮ್ಮ ಸಮಸ್ಯೆ ಹೇಳಿ ಅರ್ಜಿ ಸಲ್ಲಿಸಲು ಬಂದರೆ ಅಧಿಕಾರಿಗಳು ಬರಲೇ ಇಲ್ಲ. ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮಧ್ಯಹ್ನ 3 ಗಂಟೆಗೆ ಉಪ ತಹಸೀಲ್ದಾರ್ ವಿ.ಎ. ಮುಳಗುಂದಮಠ ಅವರಲ್ಲಿ ಅರ್ಜಿ ನೀಡಿ ತಮ್ಮ ಗ್ರಾಮಕ್ಕೆ ತೆರಳಿದರು.
- ಮಹದೇವಪ್ಪ ಎಂ. ಸ್ವಾಮಿ