ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಕ್ಕಪಾಠ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಅ. 27
ರಾಜ್ಯದ ಜನತೆಯ ಹಿತಾಸಕ್ತಿ ಕಡೆಗಣಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನತೆ ತಕ್ಕಪಾಠ ಕಲಿಸಲಿದ್ದಾರೆಂದು ಮಾಜಿ ಸಚಿವ ಹಾಗೂ ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಳಕಪ್ಪ ಬಂಡಿ ಹೇಳಿದರು.
ಅವರು ಸ್ಥಳೀಯ ಜಿ.ಕೆ. ಬಂಡಿ ಗಾರ್ಡನ್‌ನಲ್ಲಿ ಶನಿವಾರ ಜರುಗಿದ ರೋಣ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.
ದೇಶದ ಜನತೆ ಕಾಂಗ್ರೆಸ್ ದುರಾಢಳಿತದಿಂದ ಬೇಸತ್ತಿದ್ದಾರೆ. ಬರುವ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರದ ಗದ್ದುಗೆ ಏರಿ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಪಟ್ಟ ಅಲಂಕರಿಸುವುದು ಖಚಿತ. ಈ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು ಸಂಘಟಿತರಾಗಿ ಪಕ್ಷ ಬಲಗೊಳಿಸಿ ಎಂದರು.
ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಎಂ.ಎಸ್. ಕರಿಗೌಡರ ಮಾತನಾಡಿ, ಕೇಂದ್ರದ ಯುಪಿಎ ಸರ್ಕಾರ ಕಳೆದ 9 ವರ್ಷಗಳಲ್ಲಿ ನಡೆಸಿದ ಭ್ರಷ್ಟಾಚಾರವೇ ಈ ಒಕ್ಕೂಟ ಪಕ್ಷದ ಸೋಲಿಗೆ ಕಾರಣವಾಗಲಿದೆ. ಜತೆಗೆ ರಾಜ್ಯದ ಜನರ ಸಂಕಷ್ಟಗಳಿಗೆ ಸ್ಪಂದಿಸದೆ, ಆಂತರಿಕ ಕಚ್ಚಾಟದಲ್ಲಿ ತೊಡಗಿ ಜನವಿರೋಧಿ ನೀತಿ ಅನುಸರಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೂ ಆಪತ್ತು ಕಾದಿದೆ. ಈ ನಿಟ್ಟಿನಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಜಿ. ಬಂಡಿ ನೇತೃತ್ವದಲ್ಲಿ ಪಕ್ಷ ಸಂಘಟಿಸಲು ಮುಂದಾಗೋಣ. ಲೋಕಸಭಾ ಚುನಾವಣೆಗೆ ಪಕ್ಷದ ವರಿಷ್ಠರು ಸೂಚಿಸಿದ ಅಭ್ಯರ್ಥಿ ಗೆಲುವಿಗೆ ಶ್ರಮಿಸೋಣ ಎಂದರು. ಅಶೋಕ ನವಲಗುಂದ, ಎಚ್.ಎಸ್. ಸೋಂಪೂರ ಮಾತನಾಡಿದರು. ಜಿಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ, ತಾಪಂ ಅಧ್ಯಕ್ಷೆ ಲಲಿತಾ ಪೂಜಾರ, ತಾಲೂಕು ಅಧ್ಯಕ್ಷ ಸೋಮಶೇಖರ ಚನ್ನಳ್ಳಿ, ನಗರ ಘಟಕ ಅಧ್ಯಕ್ಷ ಭಾಸ್ಕರ ರಾಯಬಾಗಿ, ಪುರಸಭೆ ಅಧ್ಯಕ್ಷೆ ಕವಿತಾ ಜಾಲಿಹಾಳ, ಉಪಾಧ್ಯಕ್ಷೆ ಅಕ್ಕಮ್ಮ ಜಾನಾಯಿ, ಸ್ಥಾಯಿ ಸಮಿತಿ ಮುಖ್ಯಸ್ಥ ಅಶೋಕ ವನ್ನಾಲ, ಸಿದ್ದಪ್ಪ ಬಂಡಿ, ಪ್ರಭು ಚವಡಿ, ಶರಣಪ್ಪ ರೇವಡಿ, ಎಪಿಎಂಸಿ ಅಧ್ಯಕ್ಷ ಪರಶುರಾಮ ಹಂಡಿ, ಪರಶುರಾಮ ಚಿಲಝರಿ, ಎಸ್.ವಿ. ಸಂಕನೂರ, ಬಿ.ಎಂ. ಸಜ್ಜನ, ಪಿ.ಸಿ. ಪೊಲೀಸ್‌ಪಾಟೀಲ, ಗುರುರಾಜ ಕುಲಕರ್ಣಿ, ಚಂದ್ರಶೇಖರ ಚಳಗೇರಿ ಮುಂತಾದವರು ಉಪಸ್ಥಿತರಿದ್ದರು.