ಅಭಿವೃದ್ಧಿಗೆ ಮೂಲಭೂತ ಸೌಲಭ್ಯ ಅವಶ್ಯ
ಲಕ್ಷ್ಮೇಶ್ವರ: ಜಿಲ್ಲೆಯಲ್ಲಿಯೇ ಲಕ್ಷ್ಮೇಶ್ವರ ಪಟ್ಟಣ ದಿನದಿಂದ ದಿನಕ್ಕೆ ಶೈಕ್ಷಣಿಕ, ಆರ್ಥಿಕ, ರಾಜಕೀಯ ಹಾಗೂ ಔದ್ಯೋಗಿಕವಾಗಿ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು, ಅದಕ್ಕನುಗುಣವಾಗಿ ಇಲ್ಲಿನ ಸಾರ್ವಜನಿಕರ ಬೇಡಿಕೆ ಹಾಗೂ ಹಿತದೃಷ್ಟಿಯಿಂದ ಮೂಲಭೂತ ಸೌಕರ್ಯಗಳು ಹೆಚ್ಚುತ್ತಿರುವುದು ಪಟ್ಟಣದ ಅಭಿವೃದ್ಧಿಗೆ ಪೂರಕವಾಗಿವೆ ಎಂದು ಸಮೀಪದ ಮುಕ್ತಿಮಂದಿರದ ವಿಮಲ ರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯರು ಅಭಿಪ್ರಾಯಪಟ್ಟರು.
ಅವರು ಸೋಮವಾರ ಪಟ್ಟಣದ ಪಂಪ ವೃತ್ತದ ಸಿಂಧೂರ ಬಿಲ್ಡಿಂಗ್ನಲ್ಲಿ ಕೆನರಾ ಬ್ಯಾಂಕಿನ ನೂತನ ಶಾಖೆ ಉದ್ಘಾಟಿಸಿ ಮಾತನಾಡಿದರು. ಯಾವುದೇ ಬ್ಯಾಂಕ್ಗಳ ವ್ಯವಹಾರಾಭಿವೃದ್ಧಿ ಮುಖ್ಯವಾಗಿ ಬ್ಯಾಂಕ್ ನೀಡುವ ಸೌಲಭ್ಯಗಳ ಜತೆಗೆ ಅಲ್ಲಿನ ಪ್ರಬಂಧಕ ಹಾಗೂ ವ್ಯವಸ್ಥಾಪಕ ಸಿಬ್ಬಂದಿ ವರ್ಗದವರು ಗ್ರಾಹಕರೊಂದಿಗೆ ನಡೆದುಕೊಳ್ಳುವ ಸಂಬಂಧದ ಮೇಲೆ ಅವಲಂಬಿಸಿರುತ್ತದೆ. ಆದ್ದರಿಂದ ಬ್ಯಾಂಕಿನ ಸಿಬ್ಬಂದಿ ಗ್ರಾಹಕರೊಂದಿಗೆ ಉತ್ತಮ ಸಹಕಾರ, ಸೇವಾ ಮನೋಭಾವ ಹಾಗೂ ಅನ್ಯೋನ್ಯತೆಯಿಂದ ನಡೆದುಕೊಳ್ಳಬೇಕು ಎಂದರು.
ಅಭಿವೃದ್ಧಿಗೆ ಸಹಕರಿಸಿ ಹುಬ್ಬಳ್ಳಿ ಕೇಂದ್ರ ಕಚೇರಿ ಉಪ ಮಹಾಪ್ರಬಂಧಕ ಎಸ್.ಡಿ. ಬಿರಾದಾರ ಮಾತನಾಡಿ, ಪಟ್ಟಣದ ತೀವ್ರಗತಿ ಬೆಳವಣಿಗೆಯನ್ನು ಗಮನದಲ್ಲಿರಿಸಿಕೊಂಡು, ಲಕ್ಷ್ಮೇಶ್ವರ ಹಾಗೂ ಸುತ್ತಲಿನ ಗ್ರಾಮಗಳ ಜನರಿಗೆ ಉತ್ತಮ ಸೇವೆ ಸೌಲಭ್ಯಗಳನ್ನು ನೀಡುವ ಉದ್ದೇಶದಿಂದಲೇ ಕೆನರಾ ಬ್ಯಾಂಕಿನ ಶಾಖೆಯನ್ನು ಉದ್ಘಾಟಿಸಲಾಗಿದೆ. ಹುಬ್ಬಳ್ಳಿ ವೃತ್ತದಲ್ಲಿ 212ನೇ ಶಾಖೆ ಇದಾಗಿದ್ದು, ರೈತರಿಗೆ, ಮಹಿಳಾ ಸಂಘಗಳಿಗೆ, ಗೃಹ ಕೈಗಾರಿಕೆಗಳಿಗೆ, ಶಿಕ್ಷಣಕ್ಕಾಗಿ ಹೀಗೆ ಅನೇಕ ಕ್ಷೇತ್ರಗಳಿಗೆ ಅವಶ್ಯಕತೆಗಳಿಗೆ ಅನುಗುಣವಾಗಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ಆರ್ಟಿಜಿಎಸ್ ವಿಮಾ ಸೌಲಭ್ಯ, ಎಟಿಎಂ ಸೌಲಭ್ಯಗಳನ್ನು ನೀಡಲಾಗುತ್ತದೆ. ಗ್ರಾಹಕರು ಬ್ಯಾಂಕಿನೊಂದಿಗೆ ವ್ಯವಹಾರ ಪ್ರಾರಂಭಿಸಿ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.
ಶಿರಹಟ್ಟಿ ಬ್ಯಾಂಕಿನ ವ್ಯವಸ್ಥಾಪಕ ಎ.ಟಿ. ಮಾರಣ್ಣವರ, ವಿ.ಎಲ್. ಪೂಜಾರ ಮಾತನಾಡಿದರು. ವ್ಯಾಪಾರಸ್ಥ ಮಲ್ಲಣ್ಣ ಮಹಾಂತಶೆಟ್ಟರ, ಎಪಿಎಂಸಿ ಅಧ್ಯಕ್ಷ ಕುಬೇರಪ್ಪ ಮಹಾಂತಶೆಟ್ಟರ, ಆನಂದ ಮೆಕ್ಕಿ, ಎಸ್.ಎಫ್. ಶಿಗ್ಲಿ, ಆರ್.ಎಫ್. ಪುರಾಣಿಕಮಠ, ಸಿದ್ದಲಿಂಗಯ್ಯ, ಎನ್.ಎಂ. ವಾಲಿ, ಎಸ್.ವಿ. ಅಂಗಡಿ, ಶಿವಪುತ್ರಯ್ಯ ಶಿಗ್ಲಿಮಠ, ಬಿ.ಎಫ್. ಪಾಟೀಲ, ಶಿವು ಕೋರದಾಳ ಹಾಜರಿದ್ದರು. ಅರ್ಜುನ್ ಸ್ವಾಗತಿಸಿದರು. ಸಂಗಮೇಶ ಪಿಡ್ಡ ನಾಯಕರ ನಿರೂಪಿಸಿ, ವಂದಿಸಿದರು.
ನಿವೇದಿತಾರ ಬದುಕು ಮಾದರಿ: ಜಯಶ್ರೀ ಉಗಲಾಟದ
ಗದಗ: ನಿವೇದಿತಾ ಸಾಮಾನ್ಯ ಮಹಿಳೆಯಂತೆ ಬದುಕು ಸಾಗಿಸದೇ ರಾಷ್ಟ್ರಕ್ಕೆ ಮಾದರಿಯಾಗುವಂತೆ ದೀನ ದಲಿತರ ಬದುಕಿಗೆ ದಾರಿ ದೀಪವಾಗಿದ್ದರು ಎಂದು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಜಯಶ್ರೀ ಉಗಲಾಟದ ಹೇಳಿದರು. ಅವರು ಮಂಗಳವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಿವೇದಿತಾರ 104ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಶಹರ ಘಟಕದ ಅಧ್ಯಕ್ಷೆ ಅಶ್ವಿನಿ ಜಗತಾಪರವರು, ನಿವೇದಿತಾರವರು ಸ್ವಾಮಿ ವಿವೇಕಾನಂದರ ಹಾಗೂ ರಾಮಕೃಷ್ಣ ಪರಮಹಂಸರ ಹಾಗೂ ತಾಯಿ ಶಾರದಾ ಮಾತೆಯವರ ಪ್ರಭಾವಕ್ಕೆ ಒಳಗಾಗಿ ಅವರ ಅನುಯಾಯಿಯಾಗಿದ್ದು ವಿದೇಶಿ ಮಹಿಳೆಯಾದರೂ ಭಾರತದ ಬಗ್ಗೆ ಅಪಾರ ಗೌರವ ಹೊಂದಿದ್ದರು ಎಂದರು. ಕೆಎಸ್ಆರ್ಟಿಸಿ ಮಾಜಿ ಅಧ್ಯಕ್ಷ ಎಂ.ಎಸ್. ಕರಿಗೌಡ್ರ, ನಿವೇದಿತಾರವರು ಭಾರತದಲ್ಲಿನ ಆಧ್ಯಾತ್ಮದ ಚಿಂತನೆ ಹಾಗೂ ಆದರ್ಶದ ಪ್ರಭಾವಕ್ಕೊಳಗಾಗಿ ಸನ್ಯಾಸತ್ವ ಸ್ವೀಕರಿಸಿ ಭಾರತದಲ್ಲಿನ ಬಡವರ ಬಗ್ಗೆ ಅಪಾರ ಕಾಳಜಿ ವಹಿಸಿದ್ದರು ಎಂದರು. ಪಾರ್ವತಿ ಮರಿಗೌಡ್ರ, ಎಂ.ಎಂ. ಹಿರೇಮಠ ಮಾತನಾಡಿದರು. ಸುಶೀಲಾ ಶೀರಿ, ಗೈಬುಸಾಬ ಕಲೆಬಾವಿ, ಶ್ರೀನಿವಾಸ ಹುಬ್ಬಳ್ಳಿ, ಪದ್ಮಾ ಯಗಪಲ್ಲಿ, ಕಮಲಾ ಸೋಮರೆಡ್ಡಿ, ರೇಣುಕಾ ಬೆಳವಟಗಿ, ಅಂದಮ್ಮ ಹೊಟ್ಟಿನ, ಜಯಶ್ರೀ ಬದಿ, ಲೀಲಾ, ನಿರ್ಮಲಾ ಕೊಳ್ಳಿ, ಉಪ್ಪಿನ, ಸಾವಿತ್ರಿ, ಗಂಗಮ್ಮ ಹಿರೇಮಠ, ಪುಷ್ಪಾ ಮಾಡಲಗೇರಿ, ಲಕ್ಷ್ಮೇಶ್ವರಮಠ ಭಾಗವಹಿಸಿದ್ದರು. ಪ್ರೇಮಾ ಕಡೇಮನಿ ನಿರೂಪಿಸಿದರು. ಶಾರದಾ ಸಜ್ಜನರ ವಂದಿಸಿದರು.