ನ. 1ರಂದು ನಿವೃತ್ತ ಸರ್ಕಾರಿ ನೌಕರರ ಸಭೆ
ಗದಗ: ನಗರದ ಹುಡ್ಕೊ ಕಾಲನಿಯಲ್ಲಿರುವ ಸಚ್ಚಿದಾನಂದ ಮಠದ ಸಭಾಂಗಣದಲ್ಲಿ ನ. 1ರ ಬೆಳಗ್ಗೆ 11 ಗಂಟೆಗೆ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಸಭೆಯನ್ನು ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಸಿ. ಗಾಣಿಗೇರ ಅಧ್ಯಕ್ಷತೆ ಹಾಗೂ ಗೌರವಾಧ್ಯಕ್ಷ ಬಿ.ಎಸ್. ನಾಯ್ಕರ, ಜಿಲ್ಲಾ ಹಿರಿಯ ನಾಗರಿಕರ ಉಪ ಸಮಿತಿ ಅಧ್ಯಕ್ಷ ಜಿ.ಎಸ್. ಹಿರೇಮಠ ಅವರ ಉಪಸ್ಥಿತಿಯಲ್ಲಿ ಆಯೋಜಿಸಲಾಗಿದೆ. ಸಭೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ ಹಾಗೂ ನಿವೃತ್ತ ಹಿರಿಯ ನಾಗರಿಕರ ಕುಂದು ಕೊರತೆಗಳ ಬಗ್ಗೆ ಚರ್ಚಿಸುವುದರ ಜತೆಗೆ ಈಚೆಗೆ ರಾಜ್ಯ ವಿಜ್ಞಾನ ಪರಿಷತ್‌ಗೆ ಅಧ್ಯಕ್ಷರಾಗಿ ಆಯ್ಕೆಗೊಂಡ ಪ್ರಾಚಾರ್ಯ ಪ್ರೊ. ಎಸ್.ವಿ. ಸಂಕನೂರ ಅವರನ್ನು ಸನ್ಮಾನಿಸುವ ಕಾರ್ಯಕ್ರಮವಿದ್ದು, ಹಾಗೂ ವಿಶೇಷ ಆಮಂತ್ರಿತರಾಗಿ ಎ.ಎನ್. ನಾಗರಳ್ಳಿ, ಎಸ್.ಎನ್. ಖಾಜಿ, ಜಿ.ಎಂ. ಯಾನಮಶೆಟ್ಟಿ, ಕೆ.ಐ. ಕುರಗೋಡ, ಎಸ್.ಐ. ಯಾಳಗಿ ಆಗಮಿಸುವರು. ಕಾರಣ ವಿವಿಧ ಇಲಾಖೆಯ ನಿವೃತ್ತ ನೌಕರರು, ಹಿರಿಯ ನಾಗರಿಕರು, ಕಟ್ಟಡ ಸಮಿತಿ ಹಾಗೂ ಶಹರ, ತಾಲೂಕು ಘಟಕಗಳ ಪದಾಧಿಕಾರಿಗಳು ಭಾಗವಹಿಸಬೇಕೆಂದು ಜಿಲ್ಲಾ ಕಾರ್ಯದರ್ಶಿ ಬಿ.ಬಿ. ಹೂಗಾರ ಹಾಗೂ ರಾಜಶೇಖರ ಕರಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಯ್ಕೆ
ನರಗುಂದ: ಗದಗ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ತಾಲೂಕಿನ ಭೈರನಹಟ್ಟಿ ಗ್ರಾಮದ ಚಂದ್ರು ದಂಡಿನ ಅವರನ್ನು ಆಯ್ಕೆಗೊಳಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಸಚಿವ ಕಳಕಪ್ಪ ಬಂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ತಮಟೆ ಚಳವಳಿ
ರೋಣ: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ವರದಿ ಜಾರಿಗೆ ಒತ್ತಾಯಿಸಿ ಅ. 31 ರಂದು ಬೃಹತ್ ತಮಟೆ ಚಳವಳಿ ಹಮ್ಮಿಕೊಳ್ಳಲಾಗಿದೆ. ಚಳವಳಿಯು ಪಟ್ಟಣದ ಸಿದ್ಧಸಾದು ಅಜ್ಜನವರ ಮಠದಿಂದ ಬೆಳಗ್ಗೆ 10 ಗಂಟೆಗೆ ಆರಂಭಗೊಂಡು ತಹಸೀಲ್ದಾರ್ ಕಚೇರಿಗೆ ತೆರಳಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ. ಚಳವಳಿಯಲ್ಲಿ ತಾಲೂಕಿನ ಸಮಸ್ತ ಗ್ರಾಮಗಳ ಅಸ್ಪೃಶ್ಯ ಹಾಗೂ ಪ್ರಗತಿಪರ ಬಂಧುಗಳು ಪಾಲ್ಗೊಳ್ಳಬೇಕೆಂದು ಎಂದು ನ್ಯಾ. ಎ.ಜೆ. ಸದಾಶಿವ ಆಯೋಗ ವರದಿ ಅನುಷ್ಠಾನ ಹೋರಾಟ ಸಮಿತಿ ರೋಣ ತಾಲೂಕು ಸಂಚಾಲಕ ಪ್ರಕಾಶ ಹೊಸಳ್ಳಿ ತಿಳಿಸಿದ್ದಾರೆ.
ಇಂದು ಕಬಡ್ಡಿ ಪಂದ್ಯಾವಳಿ
ರೋಣ: ತಾಲೂಕಿನ ಅಮರಗೋಳ ಗ್ರಾಮದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಮದೇವಿ ಗೆಳೆಯರ ಬಳಗದ ವತಿಯಿಂದ 40 ಕೆಜಿ ತೂಕದ ಒಳಗಿನವರಿಗಾಗಿ ಅ. 30 ರಂದು ಬೆಳಗ್ಗೆ 10 ಗಂಟೆಗೆ ಕಬಡ್ಡಿ ಪಂದ್ಯಾವಳಿಯನ್ನು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಏರ್ಪಡಿಸಲಾಗಿದೆ. ಪಂದ್ಯಾವಳಿಯನ್ನು ಹುನಗುಂಡಿ ಗ್ರಾಪಂ ಉಪಾಧ್ಯಕ್ಷ ಬಸವಂತಪ್ಪ ತಳವಾರ ನೆರವೇರಿಸುವರು. ಸಿದ್ದಲಿಂಗಯ್ಯ ಹಿರೇಮಠ ಸಾನ್ನಿಧ್ಯ ವಹಿಸುವರು. ಅಥಿತಿಗಳಾಗಿ ಶ್ರೀಕಾಂತ ಪಾಯಣ್ಣವರ ಸೇರಿದಂತೆ ಮುಂತಾದವರು ಉಪಸ್ಥಿತರಿರುವರು ಎಂದು ಗ್ರಾಮದೇವಿ ಗೆಳೆಯರ ಬಳಗ ತಿಳಿಸಿದೆ.
---