ಪೌರಕಾರ್ಮಿಕರ ಸಮಸ್ಯೆ ಪರಿಹರಿಸಿ
ಗದಗ: ಪೌರಕಾರ್ಮಿಕರ ಹಾಗೂ ಗದಗ-ಬೆಟಗೇರಿ ಅವಳಿ ನಗರದ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಜೈ ಭೀಮಾ ಸೇನಾ ರಾಜ್ಯ ಸಂಘರ್ಷ ಸಮಿತಿ ವತಿಯಿಂದ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಲಾಯಿತು.
ಗದಗ-ಬೆಟಗೇರಿ ನಗರಸಭೆಯಲ್ಲಿ ಕಾರ್ಯನಿರ್ವಹಿಸಿ ಗದಗ ನಗರವನ್ನು ಸುಂದರಗೊಳಿಸುವಲ್ಲಿ ಪ್ರಧಾನ ಪಾತ್ರವಹಿಸುತ್ತಿರುವ ಪೌರಕಾರ್ಮಿಕರ ಗೋಳು ಹೇಳತೀರದಾಗಿದೆ. ಸುರಕ್ಷಾ ಕವಚವಿಲ್ಲದೆ ಪ್ರತಿದಿನ ನಗರ ಸಚ್ಛಗೊಳಿಸುವ ಕೆಲಸ ಮಾಡುತ್ತಾರೆ. ಅದಲ್ಲದೇ ಸ್ಲಂ ಏರಿಯಾಗಳಲ್ಲಿ ಜೀವನ ನಡೆಸುತ್ತಿರುವುದರಿಂದ ಸಾಂಕ್ರಾಮಿಕ ರೋಗದ ಭೀತಿ ಇವರನ್ನು ಕಾಡುತ್ತಿದೆ. ಇವರಿಗೆ ಸರ್ಕಾರದ ಯೋಜನೆಗಳ ಮಾಹಿತಿಯಿರದ ಕಾರಣ ಇವರಿಗೆ ಸರ್ಕಾರಿ ಯೋಜನೆಗಳು ತಲಪುವಂತೆ ಮಾಡಬೇಕು. ಗದಗ-ಬೆಟಗೇರಿ ಅವಳಿ ನಗರದಲ್ಲಿ ಕಾಡುತ್ತಿರುವ ಕುಡಿವ ನೀರಿನ ತೊಂದರೆ, ಸೂಕ್ತ ರಸ್ತೆ, ರಾತ್ರಿ ವಿದ್ಯುತ್ ಸಮಸ್ಯೆ, ನಗರಸಭೆ ದುರಾಡಳಿತ, ಹೊಸ ಜಿಲ್ಲಾಸ್ಪತ್ರೆಯನ್ನು ಮಲ್ಲಸಮುದ್ರಕ್ಕೆ ಸ್ಥಳಾಂತರಿಸಿದ್ದು, ಮೂಲಭೂತ ಸೌಲಭ್ಯಗಳ ಕೊರತೆ ಕುರಿತು ಮುಖ್ಯಮಂತ್ರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಯಿತು.
ಜೈಭೀಮ ಸೇನಾ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಹುಬ್ಬಳ್ಳಿ, ರಾಜ್ಯ ಸಂಘಟನಾ ಸಂಚಾಲಕ ಅಶೋಕ ಹಾದಿಮನಿ, ಗದಗ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಪರಾಪುರ, ವಿಜಯ ಕಲ್ಮನಿ, ದೀಪಕ ಕಲ್ಮನಿ, ಮಂಜುನಾಥ ತೌಜಲ, ಪರಶುರಾಮ ಸಂಗಾಪುರ, ಓಬಳೇಶ ಯಶವಂತಪುರ, ವಿಜಯ ತಳಗೇರಿ, ಮಂಜುನಾಥ ಪರಾಪೂರ, ಕೃಷ್ಣಾ ಸಂಗಾಪುರ, ಹೇಮಂತ ಹುಬ್ಬಳ್ಳಿ, ಮುತ್ತು ಭರಮಗೌಡ್ರ, ಪರಶುರಾಮ ಸೀತಿಮನಿ, ಮಂಜುನಾಥ ಕಲ್ಲೂರ, ಶಂಕರ ಹುಬ್ಬಳ್ಳಿ ಇದ್ದರು.