ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕಳಪೆ ಈರುಳ್ಳಿ ಬೀಜ: ರೈತನಿಗೆ ನಷ್ಟ

Vishwanath S
Updated On : 31 Oct 2013, 11:56 am

ಕನ್ನಡಪ್ರಭ ವಾರ್ತೆ, ರೋಣ, ಅ. 30
ಈರುಳ್ಳಿಗೆ ಸದ್ಯ ಮಾರುಕಟ್ಟೆಯಲ್ಲಿ ಬಂಪರ್ ಬೆಲೆಯಿದೆ. ಆದರೆ, ತಾಲೂಕಿನ ಬೆಳವಣಕಿ ಗ್ರಾಮದ ಕೆಲ ರೈತರಿಗೆ ಆ ಭಾಗ್ಯವಿಲ್ಲದಂತಾಗಿದೆ. ಇದಕ್ಕೆ ಕಾರಣ ಮಹಾರಾಷ್ಟ್ರ ಮೂಲದ ಗೆಲಾಂತ್ರಿ ಕಂಪನಿ ವಿತರಿಸಿದ ಕಳಪೆ ಈರುಳ್ಳಿ ಬೀಜ. ಬೀಜ ವಿತರಕರ ಎಡವಟ್ಟಿ (ಮೋಸ)ನಿಂದ ಲಕ್ಷಾಂತರ ಮೌಲ್ಯದ ಹಾನಿ ಅನುಭವಿಸುವಂತಾಗಿದೆ.
ಹೌದು, ಇಲ್ಲಿನ 20ಕ್ಕೂ ಹೆಚ್ಚು ರೈತರು ಬಾಗಲಕೋಟಿ ನಗರದಲ್ಲಿನ ಪಾಟೀಲ ಅಗ್ರೋ ಸೆಂಟರ್‌ನಿಂದ ಗೆಲಾಂತ್ರಿ ಕಂಪನಿಯ ಈರುಳ್ಳಿ ಬೀಜ ಖರೀದಿಸಿ ಸುಮಾರು 50 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬಿತ್ತನೆ ಮಾಡಿದ್ದಾರೆ. 3 ತಿಂಗಳಾದರೂ ಕೆಲವೆಡೆ ಬೀಜ ಮೊಳಕೆಯೊಡದಿಲ್ಲ. ಇನ್ನೂ ಕೆಲವೆಡೆ ತಪ್ಪಲಿದೆ ಗಡ್ಡೆಯಾಗಿಲ್ಲ. ಕ್ರಮಬದ್ಧತೆಯಿಂದ ಬಿತ್ತನೆ ಮಾಡಲಾಗಿದ್ದು, ಬೆಳೆಗೆ ಅಗತ್ಯವಿದ್ದ ಗೊಬ್ಬರವನ್ನು ಹಾಕಲಾಗಿದೆ. ಆದರೆ, ಬೆಳೆ ಮಾತ್ರ ಬಂದಿಲ್ಲ. ಸತತ ಬರದಿಂದ ತತ್ತರಿಸಿದ ರೈತರು ಈ ಬಾರಿ ಸುರಿದ ಮಳೆಯಿಂದ ಸಂತಸಗೊಂಡಿದ್ದರು. ಆದರೆ, ಈ ಸಂತಸಕ್ಕೆ ಕಂಪನಿ ತಣ್ಣಿರೇರಚಿದೆ. ಕಂಪನಿ ಮೋಸದಿಂದಾಗಿ ಮತ್ತೆ ಬೀದಿಗೆ ಬೀಳುವಂತಾಯಿತು ಎನ್ನುವುದು ಇಲ್ಲಿನ ರೈತರ ಅಳಲು.
ಎಕರೆಗೆ 15 ಸಾವಿರ ಖರ್ಚು: ಸಾಲ ಮಾಡಿ ಬೀಜ, ಗೊಬ್ಬರ ತಂದು ಬಿತ್ತಲಾಗಿದೆ. ಎಕರೆಗೆ ರು. 12 ರಿಂದ 15 ಸಾವಿರಗಳ ವರೆಗೆ ಖರ್ಚು ಮಾಡಲಾಗಿದೆ. ಈ ಬಾರಿ ಈರುಳ್ಳಿ ಬೆಲೆ ಉತ್ತಮವಾಗಿದ್ದು, ಕನಿಷ್ಠವೆಂದರೂ ಎಕರೆಗೆ 4 ಲಕ್ಷ ಆದಾಯ ಪಡೆಯಬಹುದಿತ್ತು ಎನ್ನುತ್ತಾರೆ ರೈತರು.
ಬಿತ್ತನೆ ಮಾಡಿದವರು: ಬೆಳವಣಕಿ ಗ್ರಾಮದ ಶ್ರೀಶೈಲಪ್ಪ ವಡ್ಡಟ್ಟಿ 4 ಎಕರೆ, ಮಂಜುನಾಥ ಚರೇದ 2 ಎಕರೆ, ವಾಸುದೇವ ಮುಜಂದಾರ 4 ಎಕರೆ, ಲಿಂಗರಾಜ ಅಂಗಡಿ 3 ಎಕರೆ, ಮೈಲಾರಪ್ಪ ಗುದ್ಲಿ 3 ಎಕರೆ, ಲಿಂಗಬಸಪ್ಪ ತಗ್ಗಿನಕೇರಿ 6 ಎಕರೆ, ಚನ್ನಪ್ಪ ಮರಿಗೌಡ್ರ 10 ಎಕರೆ, ಶಿವಪ್ಪ ಸಜ್ಜನರ 8 ಎಕರೆ ಹೀಗೆ 20ಕ್ಕೂ ಹೆಚ್ಚು ರೈತರು ಗೆಲಾಂತ್ರಿ ಈರುಳ್ಳಿ ಬೀಜವನ್ನು ಬಿತ್ತನೆ ಮಾಡಿದ್ದಾರೆ.
ಸ್ಪಂದಿಸುತ್ತಿಲ್ಲ: ಬಿತ್ತನೆ ಮಾಡಿದ 10 ದಿನದಲ್ಲಿಯೇ ಬೀಜ ವಿತರಕರ ಗಮನಕ್ಕೆ ತರಲಾಗಿದೆ. ಇಂದು, ನಾಳೆ, ಮುಂದಿನ ವಾರ ಬರುತ್ತೇವೆ ಎನ್ನುತ್ತ 3 ತಿಂಗಳವರೆಗೆ ಹೇಳುತ್ತಲೇ ಬಂದಿದ್ದಾರೆ ಹೊರತು ಇಲ್ಲಿ ವರೆಗೆ ಹೊಲಕ್ಕೆ ಬಂದಿಲ್ಲ. ನಿಮ್ಮ ಹೊಲದ್ದೆ ತೊಂದರೆ ಇರಬಹುದು. ನೀವು ಸರಿಯಾಗಿ ಬಿತ್ತನೆ ಮಾಡಿಲ್ಲ, ಸರಿಯಾಗಿ ಗೊಬ್ಬರ ಹಾಕಿಲ್ಲ ಎಂದು ನಮಗೆ ಸಮಜಾಯಿಸುತ್ತಾರೆ. ಬೀಜ ವಿಕರಕರೆ ಒತ್ತಾಯಿಸಿ ಬೀಜ ಕೊಟ್ಟಿದ್ದಾರೆ. ಇದರಿಂದ ನಮಗೆ ಬೇಸರವಾಗಿದೆ. ಕಂಪನಿಯಿಂದ ತಕ್ಕ ಪರಿಹಾರ ದೊರಕಿಸಬೇಕು ಎಂದು ಗೆಲಾಂತ್ರಿ ಕಂಪನಿ ಈರುಳ್ಳಿ ಬಿತ್ತಿದ ಶ್ರೀಶೈಲ ವಡ್ಡಟ್ಟಿ, ಲಿಂಗರಾಜ ಅಂಗಡಿ ಆಗ್ರಹಿಸಿದ್ದಾರೆ.
ವಿಜ್ಞಾನಿಗಳ ಭೇಟಿ: ಇಲ್ಲಿನ ರೈತರು ತಾಲೂಕು ತೋಟಗಾರಿಕೆ ಇಲಾಖೆಯಲ್ಲಿ ಸಲ್ಲಿಸಿದ ದೂರನ್ನಾದರಿಸಿ ಧಾರವಾಡ ಕೃಷಿ ವಿವಿ ವಿಜ್ಞಾನಿಗಳಾದ ಡಾ. ಎಸ್.ಪಿ. ಹಲಗಲಿಮಠ, ಡಾ. ಶಶಿಧರ ಟಿ.ಎಸ್., ಡಾ. ಎನ್.ಆರ್. ಧರ್ಮಟ್ಟಿ ಮತ್ತು ತಾಲೂಕು ತೋಟಗಾರಿಕೆ ಸಹಾಯಕ ನಿರ್ದೇಶಕ ಎಂ.ಎಂ. ತಾಂಬೋಟಿ ತಂಡ ಮಂಗಳವಾರ ಈರುಳ್ಳಿ ಬಿತ್ತನೆ ಮಾಡಿದ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿತು. ತಂಡವು ಮಣ್ಣು ಮತ್ತು ಕೆಲವೆಡೆ ನಾಟಿ ಮಾಡಿದ ಈರುಳ್ಳಿ ಸಸಿಗಳನ್ನು ಪರೀಕ್ಷೆಗೊಳಪಡಿಸಲು ತೆಗೆದುಕೊಂಡಿತು. ಈ ಸಂದರ್ಭದಲ್ಲಿ ಅಲ್ಲಿದ್ದ ರೈತರು ಬೀಜ ವಿತರಕರಿಂದಾದ ಮೋಸದ ಕುರಿತು ಅಳಲು ತೋಡಿಕೊಂಡು, ಪರಿಹಾರ ದೊರಕಿಸುವಂತೆ ಒತ್ತಾಯಿಸಿದರು.
ಕಳಪೆ ಬೀಜ
ಇಲ್ಲಿ ಬಿತ್ತನೆ ಮಾಡಿದ ಬೀಜ ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದೆ. ಬಿತ್ತನೆ ಮಾಡಿದಾಗಿನಿಂದ ಇಲ್ಲಿ ವರೆಗೂ(3 ತಿಂಗಳ) ಕೆಲವೆಡೆ ಮೊಳಕೆ ನಾಟಿವೆ. ಇನ್ನೂ ಕೆಲವೆಡೆ ಮೊಳಕೆ ಒಡದಿಲ್ಲ. ವಿತರಣೆ ಮಾಡಿದ ಬೀಜ ಒಂದೇ ತರನಾಗಿರದೆ ಮಿಶ್ರಣದಿಂದ ಕೂಡಿದೆ. ಶೇ. 10ರಷ್ಟು ಮಾತ್ರ ಮೊಳಕೆಯೊಡದಿದೆ. ಮೊಳಕೆಯಲ್ಲಿಯೇ ಲೋಪ ಕಂಡು ಬಂದ ತಕ್ಷಣ ರೈತರು ಇಲಾಖೆಗೆ ತಿಳಿಸಬೇಕಿತ್ತು. ಬೀಜ ಸಂಪೂರ್ಣ ಕಳಪೆ ಮಟ್ಟದ್ದಾಗಿದ್ದರಿಂದ ಬೀಜ ವಿತರಕ ಕಂಪನಿ ವಿರುದ್ಧ ದೂರು ದಾಖಲಿಸಲಾಗುವುದು.
 ಕೃಷಿ ವಿಜ್ಞಾನಿಗಳ ಪರಿಶೀಲನಾ ತಂಡ.
ಭೂಮಿ ಫಲವತ್ತಾಗಿದೆ. ಈರುಳ್ಳಿ ಜತೆಗೆ ಅಂತರ ಬೆಳೆಗಳಾಗಿ ಹತ್ತಿ, ಮೆಣಸಿನಕಾಯಿ ಬಿತ್ತನೆ ಮಾಡಲಾಗಿದೆ. ಅವುಗಳು ಚೆನ್ನಾಗಿ ಬೆಳದಿವೆ. ಇದೇ ಜಮೀನಿನಲ್ಲಿ ಬೇರೆ ಕಂಪನಿಯ ಈರುಳ್ಳಿ ಬೀಜ ಬಿತ್ತಿಲಾಗಿದ್ದು, ಅವುಗಳು ಸರಿಯಾಗಿ ಮೊಳಕೆಯೊಡದಿವೆ. ಗೆಲಾಂತ್ರಿ ಕಂಪನಿಯ ಬೀಜ ಮಾತ್ರ ಮೊಳಕೆಯೊಡೆದಿಲ್ಲ. ಇದರಿಂದ ಎಕರೆಗೆ ಲಕ್ಷಾಂತರ ಮೌಲ್ಯದ ಹಾನಿಯಾಗಿದ್ದು, ಸೂಕ್ತ ಪರಿಹಾರ ನೀಡಬೇಕು. ಇಲ್ಲದಿದ್ದಲ್ಲಿ ನಮ್ಮ ಬದುಕು ಬೀದಿಗೆ ಬೀಳುತ್ತದೆ.
- ಶ್ರೀಶೈಲ ವಡ್ಡಟ್ಟಿ, ವಾಸುದೇವ ಮುಜಾಂದಾರ, ಲಿಂಗರಾಜ ಅಂಗಡಿ, ಚನ್ನಪ್ಪ ಮರಿಗೌಡ್ರ,
ಗೆಲಾಂತ್ರಿ ಕಂಪನಿ ಬೀಜ ಬಿತ್ತಿ ಕಂಗಾಲಾದ ರೈತರು
ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ನಕಲಿ ಬೀಜಗಳನ್ನು ಪೂರೈಕೆ ಮಾಡಿದ್ದು, ರೈತರಿಗೆ ಮೋಸ ಮಾಡಿದ ಕಂಪನಿ ಮತ್ತು ಅಂಗಡಿ ಮಾಲೀಕನ ವಿರುದ್ದ ದೂರು ದಾಖಲಿಸಿ, ಹಾನಿಗೊಳಗಾದ ರೈತರಿಗೆ ಯೋಗ್ಯ ಪರಿಹಾರ ದೊರಕಿಸಿಕೊಡುವಲ್ಲಿ ಹೋರಾಟ ನಡೆಸಲಾಗುವುದು.
   ರೋಣ ತಾಪಂ ಸದಸ್ಯ


-ಪಿ.ಎಸ್. ಪಾಟೀಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement