ಜಿಲ್ಲೆಗೆ ಎರಡು ರಾಜ್ಯೋತ್ಸವ ಪ್ರಶಸ್ತಿ
ಗದಗ: ಜಿಲ್ಲೆಗೆ ಈ ಬಾರಿ ಎರಡು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು, ಎರಡೂ ಗದಗ ನಗರದಲ್ಲಿಯೇ ಲಭ್ಯವಾಗಿರುವುದು ವಿಶೇಷ. ನಗರದ ಪ್ಲೋರಿನಾಬಾಯಿ ಮತ್ತು ಬೆಟಗೇರಿಯ ಬಿ.ಬಿ. ಬಣ್ಣದ ಜಾನಪದ ಕಲಾಮೇಳಕ್ಕೆ ದೊರೆತಿದ್ದು, ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ಸಂಬಂಧಿಕರಲ್ಲಿ ಸಂತೋಷ ಮನೆ ಮಾಡಿತ್ತು. ನಾಟಕಗಳಲ್ಲಿ ಹಾಸ್ಯ ಪಾತ್ರಕ್ಕೆ ಜೀವ ತುಂಬುವ ಪ್ಲೋರಿನಾಬಾಯಿ 13ನೇ ವಯಸ್ಸಿನಲ್ಲಿ ನಾಟಕರಂಗ ಪ್ರವೇಶಿಸಿದ್ದರು. ಪ್ಲೋರಿನಾಬಾಯಿಯನ್ನು ರಾಜ್ಯ ಸರ್ಕಾರ ಗುರುತಿಸಿ ಗೌರವಿಸಿದ್ದು, ಕಲಾಸಕ್ತರಿಗೆ ಖುಷಿ ತಂದಿದೆ. ಅದೇ ರೀತಿ ಕಳೆದ 30 ವರ್ಷಗಳಿಂದ ಬೆಟಗೇರಿಯಲ್ಲಿ ಬಿ.ಬಿ. ಬಣ್ಣದ ಜಾನಪದ ಕಲಾಮೇಳ ದೊಡ್ಡಾಟ, ಜಾನಪದ ಕಲೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದ್ದು, ಈ ಸಂಸ್ಥೆಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದು ಜಿಲ್ಲೆಯ ಜನರಲ್ಲಿ ಸಂತಸ ತಂದಿದೆ.
ನೀರು ಪೂರೈಕೆ ಮಾಹಿತಿ
ಗದಗ: ನಗರದ ಸಿದ್ದರಾಮೇಶ್ವರ ನಗರದ ಭಾಗ 2, ಗಾಯಕವಾಡ ಲೈನ್, ಗಣೇಶ ಕಾಲೋನಿ, ಪುರದ ಲೈನ್, ಗಡ್ಡಿ ಲೈನ್, ಬಸಯ್ಯ ಡಾ. ಲೈನ್, ಬ್ಯಾಂಕರ್ಸ್ ಕಾಲೋನಿ, ಲೋದಿ ಲೈನ್, ಅಬ್ಬಿಗೇರಿ ಲೈನ್, ಸಿದ್ದಲಿಂಗ ಲೈನ್, ಖಟವಟೆಬೆಲ್ಲದ ಲೈನ್, ವಿರೇಶ್ವರ ನಗರ, ಜಾಗ್ರಂತಾಂಜನೇಯ ದೇವಸ್ಥಾನದ ಹತ್ತಿರ, ಮೇರವಾಡೆ ವಕೀಲರ ಲೈನ್, ಬೆಟಗೇರಿ ಉಳಿದ ಭಾಗಗಳು ಈ ಪ್ರದೇಶದಲ್ಲಿ ಗುರುವಾರ ನೀರು ಪೂರೈಕೆ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಅದ್ಧೂರಿ ರಾಜ್ಯೋತ್ಸವಕ್ಕೆ ಸಿದ್ಧತೆ
ಗಜೇಂದ್ರಗಡ: ಪಟ್ಟಣದ ಪುರಸಭೆಯಲ್ಲಿ ಇತ್ತೀಚಿಗೆ 58ನೇ ಕನ್ನಡ ರಾಜ್ಯೋತ್ಸವ ಆಚರಣೆ ಪೂರ್ವಭಾವಿ ಸಭೆ ನಡೆಯಿತು. ವಿವಿಧ ಕನ್ನಡಪರ ಸಂಘಟನೆಗಳ ಶಿಕ್ಷಣ ಸಂಸ್ಥೆ, ಹಾಗೂ ಗಣ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಕವಿತಾ ಜಾಲಿಹಾಳ ಮಾತನಾಡಿ, ಪ್ರತಿವರ್ಷದಂತೆ ಈ ಬಾರಿ ನ. 1ರಂದು ವಿಶೇಷತೆಯಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಗುವುದು. ನ. 1ರಂದು ಬೆಳಗ್ಗೆ 9 ನಾಡ ಧ್ವಜಾರೋಹಣ ನಡೆಯಲಿದೆ. ಬಳಿಕ ಪುರಸಭೆಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸ್ತಬ್ಧ ಚಿತ್ರ, ಅಟೋರಿಕ್ಷಾ, ಕ್ರೂಷರ್, ಟೆಂಪೋಗಳ ಮೇಲೆ ಭುವನೇಶ್ವರಿ ಜತೆಗೆ ನಾಡು ನುಡಿಗಾಗಿ ಶ್ರಮಿಸಿದ ನೇತಾರರ ಭಾವಚಿತ್ರ ಮೆರವಣಿಗೆ ಹಾಗೂ ಪಟ್ಟಣದ ವಿವಿಧ ಶಾಲಾ ಮಕ್ಕಳಿಂದ ರೂಪಕ ಮೆರವಣಿಗೆ, ಸಂಜೆ 6ಕ್ಕೆ ಕಟ್ಟಿಬಸವೇಶ್ವರ ರಂಗ ಮಂದಿರದಲ್ಲಿ ನಡೆಯುವ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಸನ್ಮಾನ ಹಾಗೂ ಚೈತ್ರಾ ಮೆಲೋಡಿಸ್ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಇದೇ ಸಂದರ್ಭದಲ್ಲಿ ಸಭೆಯಲ್ಲಿ ಪಾಲ್ಗೊಂಡಿದ್ದ ಸಂಘಟನೆಗಳ ಮುಖಂಡರು ಆಚರಣೆಗೆ ಸಲಹೆ ನೀಡಿದರು. ಉಪಾಧ್ಯಕ್ಷೆ ಅಕ್ಕಮ್ಮ ಜಾನಾಯಿ, ಸ್ಥಾಯಿ ಸಮಿತಿ ಮುಖ್ಯಸ್ಥ ಅಶೋಕ ವನ್ನಾಲ, ವಿಪಕ್ಷ ನಾಯಕ ಶಿವರಾಜ ಘೋರ್ಪಡೆ, ಮುಖ್ಯಾಧಿಕಾರಿ ಕೆ.ಐ. ನಾಗನೂರ, ಶರಣಪ್ಪ ರೇವಡಿ, ಪ್ರಭು ಚವಡಿ, ಚಂದ್ರಶೇಖರ ಚಳಗೇರಿ, ಕರವೇಯ ಮುರ್ತುಜಾ ಒಂಟಿ, ಪ್ರಶಾಂತ ಕಲಾಲ, ಪ್ರಕಾಶ ಅಂಬೋರೆ, ಜಯಕರ್ನಾಟಕ ಸಂಘಟನೆಯ ಎಂ.ಬಿ. ತೊರಗಲ್, ಪಿ.ಎನ್.ದೊಡ್ಡಮನಿ, ಜಿ.ಎನ್. ಕಾಳೇ, ಎಂ.ಬಿ. ಒಂಟಿ, ಮಹೇಶ ನಿಡಶೇಸಿ ಪಾಲ್ಗೊಂಡಿದ್ದರು.
ಆಸ್ತಿ ಮಾರಾಟ: ಸತ್ಯಕ್ಕೆ ದೂರ
ಶಿರಹಟ್ಟಿ: ತಾಲೂಕಿನ ಛಬ್ಬಿ ಗ್ರಾಮದ ಕರಿಯಮ್ಮ ದೇವಿ ದೇವಸ್ಥಾನಕ್ಕೆ ಮೀಸಲಿಟ್ಟ ಜಾಗವನ್ನು ಅಧಿಕಾರ ದುರ್ಬಳಕೆ ಮಾಡಿಕೊಂಡು ಮಾರಾಟ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿ ಜಾನು ಲಮಾಣಿ ಹೇಳಿಕೆ ನೀಡಿರುವುದು ಶುದ್ದ ಸುಳ್ಳು ಎಂದು ಗ್ರಾಪಂ ಅಧ್ಯಕ್ಷ ಹನಮಂತಗೌಡ ಪಾಟೀಲ ಸ್ಪಷ್ಟೀಕರಣ ನೀಡಿದ್ದಾರೆ. ಈ ಕುರಿತು ಲಿಖಿತ ಹೇಳಿಕೆ ನೀಡಿ, ಕರಿಯಮ್ಮ ದೇವಿ ದೇವಸ್ಥಾನಕ್ಕೆ ಸಂಬಂಧಿಸಿದ ಜಮೀನನ್ನು ದುರ್ಬಳಕೆ ಮಾಡಿಕೊಂಡಿರುವುದಾಗಿ ಸುಳ್ಳು ಹೇಳಿಕೆ ನೀಡಿ ನಮ್ಮ ತೇಜೋವಧೆಗೆ ಮುಂದಾಗಿದ್ದಾರೆ ಎಂದು ದೂರಿದ್ದಾರೆ. ನಮ್ಮ ಸ್ವಂತ ಮಾಲ್ಕಿ ಜಮೀನಿನಲ್ಲಿಯೇ ಸಾರ್ವಜನಿಕ ಉಪಯೋಗಕ್ಕೆಂದು 2 ಗುಂಟೆ ದಾನವಾಗಿ ನೀಡಲಾಗಿದೆ. ಇದರಲ್ಲಿಯೇ ಕುಡಿಯುವ ನೀರಿನ ಟ್ಯಾಂಕ್ ಕಟ್ಟಲಾಗಿದೆ ಹಾಗೂ ಯುವಕ ಮಂಡಳಕ್ಕೆ ಜಾಗ ನೀಡಲಾಗಿದೆ. ಸತ್ಯಾಸತ್ಯತೆ, ವಾಸ್ತವಿಕತೆ ತಿಳಿದು ಹೇಳಿಕೆ ನೀಡಬೇಕು. ಅವರು ನೀಡಿರುವ ಹೇಳಿಕೆ ರಾಜಕೀಯ ದುರುದ್ದೇಶದಿಂದ ಕೂಡಿದೆ. ಸಂಬಂಧಿಸಿದ ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ತಪ್ಪಿದ್ದರೆ ಕ್ರಮಕ್ಕೆ ಮುಂದಾಗಲಿ ಎಂದು ನಿಂಗನಗೌಡ ಫಕ್ಕೀರಗೌಡ ಪಾಟೀಲ, ಮಲ್ಲನಗೌಡ ಪಾಟೀಲ, ಹನಮಂತಗೌಡ ಪಾಟೀಲ, ಮಲ್ಲಿಕಾರ್ಜುನಗೌಡ ಪಾಟೀಲ, ಶಂಕರಗೌಡ ಪಾಟೀಲ ತಿಳಿಸಿದ್ದಾರೆ.
ನ. 1ರಂದು ರಾಜೋತ್ಸವ
ಬೆಟಗೇರಿ: ಇಲ್ಲಿನ ಸಾರ್ವಜನಿಕರು, ಶಿಕ್ಷಣ ಇಲಾಖೆ, ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ನ. 1ರಂದು ಕರ್ನಾಟಕ ರಾಜೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಮಧ್ಯಾಹ್ನ 3.30ಕ್ಕೆ ಬೆಟಗೇರಿಯ ಲೊಯಲಾ ಪ್ರೌಢ ಶಾಲೆಯಲ್ಲಿ ಬೆಟಗೇರಿಯ ಎಲ್ಲ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ, ಬಹುಮಾನ ವಿತರಣಾ ಕಾರ್ಯಕ್ರಮ ಜರುಗಲಿದೆ. ಲೊಯಲಾ ಪ್ರೌಢಶಾಲೆ ಮುಖ್ಯಾಧ್ಯಾಪಕಿ ಸಿಸ್ಟರ್ ನೀನಾ ಉದ್ಘಾಟಿಸುವರು. ಶಾಲಾ, ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಬೆಟಗೇರಿಯ ರಾಜೋತ್ಸವ ಸಮಿತಿ ಅಧ್ಯಕ್ಷ ಗಣೇಶಸಿಂಗ್ ಬ್ಯಾಳಿ ತಿಳಿಸಿದ್ದಾರೆ.