ದೊಡ್ಡಮೇಟಿ ಸ್ಮಾರಕ ಸ್ಥಾಪಿಸಲಿ
ನರೇಗಲ್ಲ: ಬ್ರಿಟಿಷರ ಕಪಿಮುಷ್ಟಿಯಿಂದ ಭಾರತವನ್ನು ಬಿಡುಗಡೆಗೊಳಿಸಲು ಹೋರಾಡಿ, ಕರ್ನಾಟಕವನ್ನು ಒಂದು ಗೂಡಿಸಲು ತಮ್ಮದೇ ಆದ ರೀತಿಯ ಹೋರಾಟದ ಚಾಪು ಮೂಡಿಸಿದ ಕರ್ನಾಟಕ ಏಕೀಕರಣ ರೂವಾರಿ ಅಂದಾನಪ್ಪ ದೊಡ್ಡಮೇಟಿಯವರ ಜಕ್ಕಲಿಯಲ್ಲಿರುವ ಅವರ ಸಮಾಧಿ ಮಾತ್ರ ಇಂದಿಗೂ ಅನಾಥವಾಗಿದ್ದು, ನಾಡು ಕಟ್ಟಿದವರನ್ನು ಜಿಲ್ಲಾಡಳಿತ, ತಾಲೂಕು ಆಡಳಿತ ಸಂಪೂರ್ಣ ನಿರ್ಲಕ್ಷಿಸಿದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.
ದೊಡ್ಡಮೇಟಿಯವರು ಹೆಚ್ಚು ಓದದಿದ್ದರೂ ಅರಿವಿನ ಕಣ್ಣುಗಳಿಂದ ಜ್ಞಾನ ಗಳಿಸಿ ತಮ್ಮ ಬಾಳು ಬೆಳಗಿಸಿಕೊಂಡರು. ದೇಶಾಭಿಮಾನವನ್ನು ಕರ್ನಾಟಕದ ತುಂಬೆಲ್ಲ ಪರಿಮಳದಂತೆ ಎಲ್ಲೆಡೆ ಪಸರಿಸುವ ಕಾರ್ಯ ಮಾಡಿದರು. ಕರ್ನಾಟಕದ ಏಕೀಕರಣ ಚಳವಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಇವರು ಮೊದಲ ಬಾರಿಗೆ 1930 ರಲ್ಲಿ ಪರದೇಶಿ ಬಟ್ಟೆಗಳನ್ನು ಜಕ್ಕಲಿ ಗ್ರಾಮದಲ್ಲಿ ಸುಟ್ಟು, ದೇಶಾಭಿಮಾನದ ಜ್ವಾಲೆಯನ್ನು ಹೊತ್ತಿಸಿ ಭಾರತೀಯ ಖಾದಿ ಬಟ್ಟೆಗಳನ್ನು ತೊಟ್ಟು ಆಂದೋಲನದಲ್ಲಿ ಭಾಗಿಯಾದರು.
ಗ್ರಾಮದಲ್ಲಿ ಜರುಗಿದ ಈ ಘಟನೆಯಿಂದ ಗ್ರಾಮದ ಯುವಕರ ಎದೆಯಲ್ಲಿ ದೇಶಾಭಿಮಾನದ ಕಿಡಿ ಹೊತ್ತಿತು. ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಭಾಗವಹಿಸಿ ಹೋರಾಟ ಆರಂಭಿಸಿದ ನಂತರ 1947 ರಲ್ಲಿ ದೇಶ ಸ್ವಾತಂತ್ರ್ಯವಾದ ಬಳಿಕ ಕರ್ನಾಟಕದಲ್ಲಿ ಸಂಸ್ಥಾನಗಳ ವಿಲೀನಕರಣಕ್ಕೆ ಮೊದಲು ಒಪ್ಪದವರು ಜಮಖಂಡಿಯ ಪಟುವರ್ಧನ ಮಹಾರಾಜರು. ಕನ್ನಡಿಗರೂ ತಮಗೊಂದು ಪ್ರತ್ಯೇಕ ರಾಜ್ಯ ಬೇಕೆಂದು ಪ್ರಸ್ತಾವನೆ ಇಟ್ಟಿದ್ದರಿಂದ ಕರ್ನಾಟಕ ಹೈದರಾಬಾದ್, ಮುಂಬೈ, ಮೈಸೂರು, ಮದ್ರಾಸ್, ಕೊಡಗು ಹೀಗೆ 5 ಪ್ರಾಂತಗಾಳಾಗಿ ಹಂಚಿ ಹೋಗಿದ್ದ ಕನ್ನಡಿಗರನ್ನು ಒಂದುಗೂಡಿಸುವ ಕಾರ್ಯ ಕಷ್ಟವಾದರೂ ಸಹಿತ ಅನೇಕ ನಾಯಕರು, ಕನ್ನಡಾಭಿಮಾನಿಗಳು ಅಂದಾನಪ್ಪ ದೊಡ್ಡಮೇಟಿಯವರ ಮುಂದಾಳತ್ವದಲ್ಲಿ ಹೋರಾಟ ಮಾಡಿದರು.
ಸಮಾಧಿಗೆ ಕಾಯಕಲ್ಪ ಬೇಕಿದೆ: ಕನ್ನಡ ನಾಡನ್ನು ಒಂದುಗೂಡಿಸಿ ದೇಶದಲ್ಲಿ ಕನ್ನಡಕ್ಕೆ ಸೂಕ್ತ ಸ್ಥಾನಮಾನ ತಂದುಕೊಟ್ಟ ದೊಡ್ಡಮೇಟಿಯವರ ಸಮಾಧಿಗೆ ಯಾವುದೇ ಕಾಯಕಲ್ಪವಾಗದೇ ಅನಾಥವಾಗಿದೆ. ಕನ್ನಡಕ್ಕಾಗಿ ಶ್ರಮಿಸಿದ ವ್ಯಕ್ತಿಗೆ ಸೂಕ್ತ ಗೌರವ ಸಿಗಬೇಕಿದೆ.