ಭುವನೇಶ್ವರಿ ಪರಿಕಲ್ಪನೆ ನೀಡಿದ್ದೇ ಜಕ್ಕಲಿ
ನರೇಗಲ್ಲ: ಕರ್ನಾಟಕದ ಭುವನೇಶ್ವರಿ ಚಿತ್ರಣ, ಕನ್ನಡಾಂಬೆಯ ಗುರುತನ್ನು ನೀಡಿದ ಕೀರ್ತಿ ಹಿರಿಯ ಸಾಹಿತಿ ಹಾಗೂ ಹೋರಾಟಗಾರ ಅಂದಾನಪ್ಪ ದೊಡ್ಡಮೇಟಿ ಅವರಿಗೆ ಸಲ್ಲುತ್ತದೆ.
ಭುವನೇಶ್ವರಿದೇವಿಗೆ ಅಂತಿಮ ರೂಪ ನೀಡಿದ ನರೇಗಲ್ಲ ಸಮೀಪದ ಜಕ್ಕಲಿ ಗ್ರಾಮದಲ್ಲಿ ಭುವನೇಶ್ವರಿ ದೇವಿಗೆ ಅಂತಿಮ ರೂಪ ನೀಡಿದಾಗಿನಿಂದಲೂ ಅಂದರೆ, 59 ವರ್ಷಗಳಿಂದ ನಿತ್ಯ ದೇವಿಗೆ ಜ್ಯೋತಿ ಬೆಳಗಿಸಿ ಪೂಜೆ ಸಲ್ಲಿಸುತ್ತಾ ಬರುತ್ತಿದ್ದಾರೆ.
ಮನಸ್ಸಿನಲ್ಲಿ ಭಕ್ತಿಭಾವ ಸಂಚಾರಗೊಂಡು ಮುಖಮಂಡಲದಲ್ಲಿ ಕರ್ನಾಟಕದುದ್ದಕ್ಕೂ ತೇಲಿ, ತಳುಕಿ ಒಂದೇ ರೀತಿಯಲ್ಲಿ ಚಂದ್ರಮಂಡಲಗಳ ರೀತಿಯಲ್ಲಿ ತಾಯಿ ಭುವನೇಶ್ವರಿ ಚಿತ್ರವನ್ನು ಅಂದಾನಪ್ಪ ದೊಡ್ಡಮೇಟಿಯವರ ಕನಸಿನ ಕರ್ನಾಟಕ ಮಾತೆಯ ಪರಿಕಲ್ಪನೆಯ ಚಿತ್ರವನ್ನು ಗದುಗಿನ ಕಲಾಮಂದಿರದ ಕಲಾವಿದ ಸಿ.ಎನ್. ಪಾಟೀಲ ದೊಡ್ಡಮೇಟಿಯವರ ಮನದಾಳದಲ್ಲಿ ಅಡಗಿರುವ ಕಲ್ಪನೆಗೆ ರೂಪ ನೀಡಿದರು. ಭುವನೇಶ್ವರಿ ತಾಯಿಯ ಚಿತ್ರವನ್ನು ತಾಯಿಯ ಆಶೀರ್ವಾದದೊಂದಿಗೆ 11ನೇ ಜನವರಿ 1953 ರಂದು ಜಕ್ಕಲಿಯ ಅನ್ನದಾನೇಶ್ವರ ಮಠದ ಪ್ರಶಾಂತ ವಾತಾವರಣದಲ್ಲಿ ನಿರ್ಮಿಸಲಾಯಿತು.
ಕರ್ನಾಟಕ ಏಕೀಕರಣದಲ್ಲಿ ಜಕ್ಕಲಿ ಗ್ರಾಮದ ಪಾತ್ರ: ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಹಲವಾರು ಸಂಸ್ಥಾನಗಳಿಂದ ಬೇರೆ ಬೇರೆ ಭಾಗಗಳಾಗಿ ಆಡಳಿತ ನಡೆಸುತ್ತಿದ್ದ ಕರ್ನಾಟಕವನ್ನು ಒಂದುಗೂಡಿಸಿ ಏಕೀಕರಣ ಮಾಡುವ ನಿಟ್ಟಿನಲ್ಲಿ, ಹಿಂದೆ ಧಾರವಾಡ ಜಿಲ್ಲೆಯ ವ್ಯಾಪ್ತಿಗೆ ಬರುತ್ತಿದ್ದ ಈಗಿನ ಗದಗ ಜಿಲ್ಲೆ ರೋಣ ತಾಲೂಕಿನ ಜಕ್ಕಲಿ ಗ್ರಾಮದ ಪಾತ್ರ ಪ್ರಮುಖ. ಈ ಗ್ರಾಮದ ಅಂದಾನಪ್ಪ ದೊಡ್ಡಮೇಟಿ ಕರ್ನಾಟಕ ಏಕೀಕರಣ ಚಳವಳಿಯ ರೂವಾರಿ.
ಬ್ರಿಟಿಷರು ನಡೆಸುತ್ತಿದ್ದ ಆಡಳಿತ ಪದ್ಧತಿ ಅಸಮಂಜಸ ಮತ್ತು ಅನಾನುಕೂಲ ವ್ಯವಸ್ಥೆಯಾಗಿತ್ತೆಂದು, ಒಂದು ಭಾಷೆಯನ್ನಾಡುವ ಜನ ಒಂದು ರಾಜ್ಯವಾಗಿರಬೇಕೆಂಬ ಉದ್ದೇಶದಿಂದ ಕನ್ನಡಿಗರ ಏಕೀಕರಣಕ್ಕೆ ಮುಂದಾದರು. ದೊಡ್ಡಮೇಟಿಯವರು ಮೊದಲ ಬಾರಿಗೆ ಮುಂಬೈ ಶಾಸನ ಸಭೆಯಲ್ಲಿ ಕನ್ನಡದಲ್ಲಿ ಮಾತನಾಡಿ, ಭಾಷಾವಾರು ಪ್ರಾಂತ್ಯಗಳ ನಿರ್ಮಾಣಕ್ಕೆ ಸಹಾಯ ಮಾಡಿದರು. ಇದರ ಪರಿಣಾಮ ಮೊದಲು ಜಮಖಂಡಿ ಸಂಸ್ಥಾನ ವಿಲೀನವಾಗುವ ಮೂಲಕ ಕರ್ನಾಟಕ ಏಕೀಕರಣವಾಯಿತು.
ಭುವನೇಶ್ವರಿ ದೇವಿಯ ಸಹಸ್ರ ನಾಮಗಳು: ಕರ್ನಾಟಕ ಮಹಿಮೆ ಸ್ತೋತ್ರದಲ್ಲಿರುವಂತೆ ಕನ್ನಡ ದೇವಿಯನ್ನು 16 ವಿಧದಲ್ಲಿ ಸ್ತುತಿಸುತ್ತಾರೆ. ಭುವನೇಶ್ವರಿ, ಪರಾಶಕ್ತಿ, ವಶ್ವರಿ, ಮಹೇಶ್ವರಿ, ಮಹಾಕಾಳಿ, ಮಹಾಲಕ್ಷ್ಮೀ, ಮಹಾಸರಸ್ವತಿ, ಮೂಕಾಂಬಿಕಾ, ರತ್ನಗರ್ಭ, ಶ್ರೀದುರ್ಗೆ, ಇಂದ್ರಾಣಿ, ವಾರಾಹಿ, ಅಧಿತಿ, ಕೌಮಾರಿ, ಕುಂಡಲಿನಿ, ತ್ರಿಪುರಸುಂದರಿ ಹಾಗೂ ಸಾವಿತ್ರಿ ಎಂಬ ನಾಮಗಳಿಂದ ಕರೆಯಲ್ಪಡುತ್ತಿದ್ದಾಳೆ.
ವಿಶೇಷ ಪೂಜೆ: ಜಕ್ಕಲಿ ಗ್ರಾಮದಲ್ಲಿನ ಭುವನೇಶ್ವರಿ ದೇವಿಯ ಚಿತ್ರಕ್ಕೆ ಮಹಾನವಮಿಯ ದಿನದಂದು ಮಂಟಪ ನಿರ್ಮಿಸಿ, ಅಲಂಕಾರ ಮಾಡಿ ತಾಯಿಯ ನಿಜವಾದ ಚಿತ್ರಕ್ಕೆ ಗ್ರಾಮದ ಜನರೆಲ್ಲರೂ ಮೊದಲು ಬನ್ನಿ ಕೊಡುವ ಮೂಲಕ ಮಹಾನವಮಿಯನ್ನು ಆರಂಭಿಸುವುದನ್ನು ಈಗಲೂ ನಡೆಸಿಕೊಂಡು ಬರುತ್ತಿದ್ದಾರೆ. ಗ್ರಾಮದ ಜನರೆಲ್ಲರೂ ಸೇರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ.
-ನಿಂಗರಾಜ ಬೇವಿನಕಟ್ಟಿ