ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸದಸ್ಯರ ಗೈರು: ತಾಪಂ ಸಾಮಾನ್ಯ ಸಭೆ ರದ್ದು

Lingaraj Badiger
Updated On : 1 Nov 2013, 11:11 am

ಕನ್ನಡಪ್ರಭ ವಾರ್ತೆ, ರೋಣ, ಅ. 31
ಸ್ಥಳೀಯ ತಾಪಂ ಸಭಾಭವನದಲ್ಲಿ ಗುರುವಾರ ಜರುಗಬೇಕಿದ್ದ ತಾಪಂ ಸಾಮಾನ್ಯ ಸಭೆಯು ಸದಸ್ಯರು ಗೈರಾಗಿದ್ದರಿಂದ ಕೋರಂ ಭರ್ತಿಯಾಗದೆ ಸಭೆ ರದ್ದಾಯಿತು.
ಇದೇ ರೀತಿ 5 ತಿಂಗಳಿನಿಂದ ಸಾಮಾನ್ಯ ಸಭೆ ನಡೆಯದ್ದರಿಂದ ವಿವಿಧ ಇಲಾಖೆಯ ಅನುದಾನಕ್ಕೆ ಅನುಮೋದನೆ ದೊರೆಯದೇ ಕಾರ್ಯಗಳು ನೆನೆಗುದಿಗೆ ಬೀಳುವಂತಾಗಿದೆ.
ಸಭೆಯಲ್ಲಿ ತಾಲೂಕಿನ ಎಲ್ಲ ಇಲಾಖೆಯ ಮುಖ್ಯ ಅಧಿಕಾರಿಗಳು ಉಪಸ್ಥಿತರಿದ್ದರು. ಆದರೆ, 5 ತಿಂಗಳಿನಿಂದ ಸಭೆಯು ಒಂದಿಲ್ಲೊಂದು ನೆಪವೊಡ್ಡಿ ಮುಂದೂಡುತ್ತಲೇ ಬರಲಾಗಿದೆ. ಈ ಹಿಂದೆ ಕೆಲ ಇಲಾಖೆಯ ಮುಖ್ಯ ಅಧಿಕಾರಿಗಳು ಗೈರಾಗಿದ್ದರಿಂದ ಕೆಲ ಸದಸ್ಯರ ಆಕ್ಷೇಪಣೆಯಿಂದ ಸಭೆ ರದ್ದಾಗಿದ್ದವು. ಈ ಬಾರಿಯಾದರೂ ನಡೆಯಬಹುದು ಎಂಬ ನಿರೀಕ್ಷೆಯಲ್ಲಿ ಬಂದಿದ್ದ ಅಧಿಕಾರಿಗಳಿಗೆ ಮತ್ತೆ ನಿರಾಸೆಯುಂಟಾಯಿತು.  
8 ಸದಸ್ಯರ ಹಾಜರ್
ಒಟ್ಟು 19 ಸದಸ್ಯರುಳ್ಳ ತಾಪಂ ಸಭೆ ನಡೆಯಲು ಕೋರಂಗೆ 10 ಸದಸ್ಯರು ಅಗತ್ಯವಿದ್ದು, ಅದರಲ್ಲಿ ಕೇವಲ 8 ಸದಸ್ಯರು ಸಭೆಗೆ ಹಾಜರಿದ್ದರು. ಬೆಳಗ್ಗೆ 11 ಗಂಟೆಗೆ ಪ್ರಾರಂಭಗೊಳ್ಳಬೇಕಿದ್ದ ಸಭೆಯು ಮಧ್ಯಾಹ್ನ 1.15 ಗಂಟೆಯವರೆಗೆ ಸದಸ್ಯರ ಬರುವಿಕೆಗಾಗಿ ಕಾಯಲಾಯಿತು.
ಕೆಲ ಸದಸ್ಯರು ಸಭೆ ನಡೆಯುವ ಸ್ಥಳದ ಹತ್ತಿರ ಬಂದಿದ್ದರೂ, ಸಭೆಗೆ ಹಾಜರಾಗಲು ಆಗಮಿಸಲಿಲ್ಲ. ಇದರಿಂದ ಬೇಸತ್ತು ಕೊನೆಗೆ ತಾಪಂ ಇಒ ಎಸ್.ಎಂ. ಪಿಡಶೆಟ್ಟಿ, ಅಧ್ಯಕ್ಷತೆ ವಹಿಸಿದ್ದ ತಾಪಂ ಅಧ್ಯಕ್ಷೆ ಲಲಿತಾ ಪೂಜಾರ ಮಾತನಾಡಿ, ಸಭೆ ಜರುಗಲು ಕೋರಂ ಭರ್ತಿಯಾಗದೇ ಇರುವ ಕಾರಣ ಸಭೆಯನ್ನು ಮುಂದೂಡಲಾಗುವುದು. ಮುಂದೆ ಹೀಗಾಗದಂತೆ ನೋಡಿಕೊಳ್ಳಲಾಗುವುದು ಎಂದು ಅಧಿಕಾರಿಗಳಲ್ಲಿ ವಿನಂತಿಸಿದರು. ಮುಂದಿನ ದಿನಾಂಕನ್ನು ನಿಗದಿಪಡಿಸಿ ತಿಳಿಸಲಾಗುವುದು ಎಂದರು.
ಬೇಸರ ವ್ಯಕ್ತಪಡಿಸಿದ ಅಧಿಕಾರಿಗಳು
ವಿವಿಧ ರೀತಿಯಿಂದ ಕೂಡಿದ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಭೆಯಲ್ಲಿ ಅನುಮೋದನೆ ಪಡೆಯಲು ಬಂದಿದ್ದ ವಿವಿಧ ಇಲಾಖೆ ಅಧಿಕಾರಿಗಳು ಪದೇ ಪದೇ ಸಭೆ ರದ್ದಾಗುವುದನ್ನು ಕಂಡು ಅಸಮಾಧಾನಗೊಂಡರು.
ಒಟ್ಟು 19 ಸದಸ್ಯರಲ್ಲಿ ತಾಪಂ ಅಧ್ಯಕ್ಷೆ ಲಲಿತಾ ಪೂಜಾರ, ಉಪಾಧ್ಯಕ್ಷೆ ರುದ್ರವ್ವ ತಾಳಿ, ಸದಸ್ಯೆ ಸುಮಂಗಲಾ ಹಿರೇಮಠ, ಗಾಯತ್ರಿ ನಾಗನೂರ, ಅಂದಪ್ಪ ಬಿಚ್ಚೂರ, ಧರ್ಮಣ್ಣ ಭೂಸಗೌಡ್ರ, ಬಸನಗೌಡ ಶಿರಗುಂಪಿ ಮತ್ತು ಶಂಕ್ರವ್ವ ಪಾಟೀಲ ಮಾತ್ರ ಸಭೆಯಲ್ಲಿ ಹಾಜರಿದ್ದರು.

ಪಕ್ಷದ ಸದಸ್ಯರಿಂದಲೇ ಅವಮಾನ: ಲಲಿತಾ
ರೋಣ: ನಾನು ಹಿಂದುಳಿದ ವರ್ಗದ ಮಹಿಳೆಯಾಗಿದ್ದರಿಂದ ನನಗೆ ಈವರೆಗೂ ಸಹಕಾರ ನೀಡಿಲ್ಲ. ಅಲ್ಲದೇ, ನನಗೆ ಅವಮಾನ ಮಾಡುವ ಮೂಲ ಉದ್ದೇಶದಿಂದಲೇ ನಮ್ಮ ಪಕ್ಷದ (ಬಿಜೆಪಿ) ತಾಪಂ ಸದಸ್ಯರೇ ಸ್ಥಳೀಯ ತಾಪಂ ಸಭಾಭವನದಲ್ಲಿ ಗುರುವಾರ ಜರುಗಬೇಕಿದ್ದ ತಾಪಂ ಸಾಮಾನ್ಯ ಸಭೆಗೆ ಗೈರಾಗಿದ್ದಾರೆಂದು ತಾಪಂ ಅಧ್ಯಕ್ಷೆ ಲಲಿತಾ ಪೂಜಾರ ಆರೋಪಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ಹಿಂದುಳಿದ ಮಹಿಳೆ ಎಂಬ ಕಾರಣದಿಂದ ನಾನು ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳನ್ನು ಒಪ್ಪದೇ ನನ್ನ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಗೆ ಗೈರಾಗುತ್ತಾರೆ. ಇದರಿಂದ ತೀವ್ರ ಬೇಸರವಾಗಿದೆ. ಸಭೆಗೆ ಬಾರದಿದ್ದ ಸದಸ್ಯರನ್ನು ಪೋನ್ ಮೂಲಕ ಸಂಪರ್ಕಿಸಿ ಬರುವಂತೆ ವಿನಂತಿಸಿದರೂ ನಾನಾ ಕಾರಣಗಳನ್ನು ಹೇಳುತ್ತಾ ಜಾರಿಕೊಳ್ಳುತ್ತಾರೆ. ಈವರೆಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುತ್ತಾ ಬಂದಿದ್ದೇನೆ. ಬಿಜೆಪಿ ಸದಸ್ಯರ ಬೆಂಬಲದಿಂದ ಅಧ್ಯಕ್ಷೆಯಾಗಿ ಆಯ್ಕೆಗೊಂಡ ನನಗೆ ನಮ್ಮ ಪಕ್ಷದ(ಬಿಜೆಪಿ) ಸದಸ್ಯರಿಂದಲೇ ಅವಮಾನವಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿ ಸದಸ್ಯರೇ ಈ ರೀತಿ ಮಾಡುತ್ತಿರುವ ಕುರಿತು, ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸುತ್ತಿಲ್ಲ. ಸಭೆ ನಡೆಯದಂತೆ ಉದ್ದೇಶ ಪೂರ್ವಕವಾಗಿ ಸಭೆಗೆ ಗೈರಾಗುತ್ತಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕಳಕಪ್ಪ ಬಂಡಿ ಹಾಗೂ ವಿವಿಧ ಮುಖಂಡರಿಗೆ ದೂರು ನೀಡುತ್ತೇನೆ. ಮುಂದಿನ ಕ್ರಮ ಕೈಗೊಳ್ಳುವುದು ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement