4ರಿಂದ ಗದಗ ಉತ್ಸವ-2013
ಗದಗ: ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಗದಗ, ಜಿಲ್ಲಾ ಕೈಗಾರಿಕಾ ಕೇಂದ್ರ, ಗದಗ ಜಿಪಂ, ಗ್ರಾಮೀಣ ಮತ್ತು ಸಣ್ಣ ಉದ್ದಿಮೆ ವಿಭಾಗ (ಖಾಗ್ರಾ), ನಬಾರ್ಡ್ ಗದಗ ಹಾಗೂ ಮಹೇಶ್ವರಿ ವಿವಿಧೋದ್ದೇಶಗಳ ಮಹಿಳಾ ಮಂಡಳದ ನೇತೃತ್ವದಲ್ಲಿ ಜ. ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಸೆ. 4ರಿಂದ 8 ರವರೆಗೆ ಗದಗ ಉತ್ಸವ, ಕೈಗಾರಿಕಾ ವಸ್ತು ಪ್ರದರ್ಶನ ಹಾಗೂ ಮಾರಾಟ, ಶ್ರೇಷ್ಠ ವರ್ತಕ, ಶ್ರೇಷ್ಠ ಉದ್ಯಮಿ ಹಾಗೂ ಶ್ರೇಷ್ಠ ಮಳಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಕೈಗಾರಿಕಾ ವಸ್ತು ಪ್ರದರ್ಶನ ಸಮಿತಿಯ ಚೇರ್ಮನ್ ಸಂಗಮೇಶ ದುಂದೂರ ಹೇಳಿದರು.
ಅವರು ಭಾನುವಾರ ನಗರದ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಗದಗ ಜಿಲ್ಲೆಯಲ್ಲಿ ಸಣ್ಣಪುಟ್ಟ ಗುಡಿ ಕೈಗಾರಿಕೆಗಳು, ಮಹಿಳೆಯರ ಕರಕುಶಲ ವಸ್ತುಗಳ ಉತ್ತೇಜನ ನೀಡುವ ಸದುದ್ದೇಶದಿಂದ ಗದಗ ಉತ್ಸವದಲ್ಲಿ ಕೈಗಾರಿಕಾ ವಸ್ತು ಪ್ರದರ್ಶನ ಹಾಗೂ ಮಾರಾಟವನ್ನು ಹಮ್ಮಿಕೊಳ್ಳಲಾಗಿದೆ. 11 ವರ್ಷಗಳಿಂದ ಈ ಉತ್ಸವವನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಇದು 12ನೇ ವರ್ಷದ ಕಾರ್ಯಕ್ರಮವಾಗಿದೆ. ಈಗಾಗಲೇ ಜ. ತೋಂಟದ ಕಲ್ಯಾಣ ಕೇಂದ್ರದಲ್ಲಿ 80 ಸ್ಟಾಲ್ಗಳನ್ನು ನಿರ್ಮಿಸಲಾಗಿದೆ. ಈ ಮಳಿಗೆಗಳಲ್ಲಿ ಶೇ. 50ರಷ್ಟು ಮಳಿಗೆಗಳನ್ನು ಗೃಹ ಉದ್ದಿಮೆದಾರರಿಗೆ ಉಚಿತವಾಗಿ ನೀಡಲಾಗುವುದು. 5 ದಿನಗಳವರೆಗೆ ನಡೆಯುವ ಈ ವಸ್ತು ಪ್ರದರ್ಶನದ ಜತೆಗೆ ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಈ ವಸ್ತು ಪ್ರದರ್ಶನವನ್ನು 10-15 ಸಾವಿರ ಜನರು ವೀಕ್ಷಣೆ ಮಾಡುವ ಸಂಭವವಿದೆ. ಸುಮಾರು ರು. 1 ಕೋಟಿಗೂ ಅಧಿಕ ವಹಿವಾಟು ಆಗುವ ನಿರೀಕ್ಷೆ ಹೊಂದಲಾಗಿದೆ.
ಸೆ. 4 ರಂದು ಸಂಜೆ 5 ಗಂಟೆಗೆ ಜ. ತೋಂಟದ ಕಲ್ಯಾಣ ಕೇಂದ್ರದಲ್ಲಿ ಕಾರ್ಯಕ್ರಮದ ಉದ್ಘಾಟನೆ ಜರುಗಲಿದ್ದು, ಉದ್ಘಾಟನೆಯನ್ನು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ನೆರವೇರಿಸುವರು. ಅಧ್ಯಕ್ಷತೆಯನ್ನು ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ರಾಜಶೇಖರ ಶಿರೂರ ವಹಿಸುವರು. ಅತಿಥಿಗಳಾಗಿ ಸಂಸದ ಶಿವಕುಮಾರ ಉದಾಸಿ, ಶಾಸಕರಾದ ಬಿ.ಆರ್. ಯಾವಗಲ್, ಜಿ.ಎಸ್. ಪಾಟೀಲ, ರಾಮಕೃಷ್ಣ ದೊಡ್ಡಮನಿ, ಜಿಪಂ ಅಧ್ಯಕ್ಷ ಎಂ.ಎಸ್. ಪಾಟೀಲ, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ ಬೆಂಗಳೂರಿನ ಆರ್. ಶಿವಕುಮಾರ, ಎನ್.ಪಿ. ಜವಳಿ, ಆರ್.ಐ. ಕುಂಬಾರ, ಲೋಕಸಭಾ ಸದಸ್ಯ ಪಿ.ಸಿ. ಗದ್ದಿಗೌಡರ, ವಿಪ ಸದಸ್ಯ ಬಸವರಾಜ ಹೊರಟ್ಟಿ, ಶ್ರೀನಿವಾಸ ಮಾನೆ ಪಾಲ್ಗೊಳ್ಳುವರು. 8ರಂದು ಶ್ರೇಷ್ಠ ವರ್ತಕ, ಶ್ರೇಷ್ಠ ಉದ್ಯಮಿ, ಶ್ರೇಷ್ಠ ಮಳಿಗೆ ಪ್ರಶಸ್ತಿ ಪ್ರದಾನ ಹಾಗೂ ಸಂಸ್ಥೆಯ ಮಾಜಿ ಅಧ್ಯಕ್ಷ ಎಸ್.ಬಿ. ಸಂಕಣ್ಣವರ ಹಾಗೂ ಅಶೋಕ ನಿಲುಗಲ್ಲ ಅವರಿಗೆ ಜೀವಮಾನ ಸಾಧನೆ ಪುರಸ್ಕಾರ ಮತ್ತು ಎಚ್.ವಿ. ಶಾನಭೋಗ ಅವರಿಗೆ ಸೇವಾ ಪುರಸ್ಕಾರ ಸಮಾರಂಭ ಜರುಗಲಿದೆ. ಅಧ್ಯಕ್ಷತೆಯನ್ನು ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ರಾಜಶೇಖರ ಶಿರೂರ ವಹಿಸುವರು. ಅತಿಥಿಗಳಾಗಿ ಮಾಜಿ ಸಚಿವ ಹಾಗೂ ನಿರಾಣಿ ಗ್ರೂಪ್ ಆಫ್ ಇಂಡಸ್ಟ್ರೀಜ್ ವ್ಯವಸ್ಥಾಪಕ ಮುರಗೇಶ ನಿರಾಣಿ, ಎಸ್ಪಿ ಡಾ. ಎಸ್.ಡಿ. ಶರಣಪ್ಪ, ಕೆ. ಶರವಣನ್ಕುಮಾರ, ಜಿಪಂ ಸಿಇಒ ವೀರಣ್ಣ ತುರಮರಿ ಸೇರಿದಂತೆ ಜಿಲ್ಲಾಧಿಕಾರಿಗಳು ಉಪಸ್ಥಿತರಿರುವರು ಎಂದರು. ಸಂಸ್ಥೆಯ ಅಧ್ಯಕ್ಷ ರಾಜಶೇಖರ ಶಿರೂರ, ಉಪಾಧ್ಯಕ್ಷ ದೇವದಾಸ ಕಾಮತ, ಕಾರ್ಯದರ್ಶಿ ಬಸವರಾಜ ಅಯ್ಯನಗೌಡ್ರ, ವಿಜಯಕುಮಾರ ಹಿರೇಮಠ, ಎಚ್.ವಿ. ಶಾನಭೋಗ, ಅರವಿಂದ ಪಟೇಲ, ಎಸ್.ಕೆ. ಕುರಡಗಿ ಮುಂತಾದವರು ಉಪಸ್ಥಿತರಿದ್ದರು.