ಅ. 23ರಂದು ಉಚಿತ ಸಾಮೂಹಿಕ ವಿವಾಹ
ಕನ್ನಡಪ್ರಭ ವಾರ್ತೆ, ಗದಗ, ಸೆ. 1
ಬಿ. ಶ್ರೀರಾಮುಲು ಅಭಿಮಾನಿ ಬಳಗದ ನೇತೃತ್ವದಲ್ಲಿ ಯಶಸ್ವಿ 7ನೇ ವರ್ಷದ ಬೃಹತ್ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಅಕ್ಟೋಬರ್ 23ರಂದು ಬೆಳಗ್ಗೆ 11 ಗಂಟೆಗೆ ನಗರದ ವಿದ್ಯಾದಾನ ಸಮಿತಿಯ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀರಾಮುಲು ಅಭಿಮಾನಿ ಬಳಗದ ಕಾರ್ಯದರ್ಶಿ ಎಸ್.ಎಚ್. ಶಿವನಗೌಡರ ಹೇಳಿದರು.
ಅವರು ಭಾನುವಾರ ನಗರದಲ್ಲಿರುವ ಮಾಜಿ ಸಚಿವ ಹಾಗೂ ಶಾಸಕ ಶ್ರೀರಾಮುಲು ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
6 ವರ್ಷಗಳಿಂದ ಸತತವಾಗಿ ಶ್ರೀರಾಮುಲು ಅಭಿಮಾನಿ ಬಳಗದ ನೇತೃತ್ವದಲ್ಲಿ ಯಶಸ್ವಿ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ನಡೆಸುತ್ತಾ ಬರಲಾಗುತ್ತಿದೆ. ಈಗಾಗಲೇ ಪ್ರಥಮ ವರ್ಷದಲ್ಲಿ 650 ಜೋಡಿ, ದ್ವಿತೀಯ ವರ್ಷದಲ್ಲಿ 2000 ಜೋಡಿ, ತೃತೀಯ ವರ್ಷದಲ್ಲಿ 1800 ಜೋಡಿ, ಚತುರ್ಥ ವರ್ಷದಲ್ಲಿ 1001 ಜೋಡಿ, 5ನೇ ವರ್ಷದಲ್ಲಿ 751 ಜೋಡಿ, 6ನೇ ವರ್ಷದಲ್ಲಿ 800 ಜೋಡಿ ವಿವಾಹಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಈ ವರ್ಷ 1000 ಜೋಡಿ ವಿವಾಹಗಳನ್ನು ನಡೆಸುವ ಉದ್ದೇಶ ಹೊಂದಲಾಗಿದೆ. ಮದುವೆ ಮಾಡುವುದು ಪಾಲಕರಿಗೆ ಹೊರೆಯಾಗಬಾರದೆಂಬ ದೃಷ್ಟಿಯಿಂದ ಹಾಗೂ ವರದಕ್ಷಿಣೆಯಂಬ ಸಾಮಾಜಿಕ ಪಿಡುಗನ್ನು ತೊಲಗಿಸಲು ಮತ್ತು ಸರಳ ವಿವಾಹಗಳಿಗೆ ಉತ್ತೇಜನ ನೀಡಬೇಕೆಂಬ ಸದುದ್ದೇಶದಿಂದ ಗದಗನಲ್ಲಿ 7ನೇ ಬಾರಿಗೆ ಬೃಹತ್ ಪ್ರಮಾಣದಲ್ಲಿ ಈ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಧು-ವರರಿಗೆ ಉಚಿತವಾಗಿ ಬಟ್ಟೆ, ಬಾಸಿಂಗ, ಬಂಗಾರದ ತಾಳಿ, ಬೆಳ್ಳಿಯ ಕಾಲುಂಗುರ ಹಾಗೂ ಆದರ್ಶ ವಿವಾಹ ಯೋಜನೆಯಡಿ ರು. 10 ಸಾವಿರ ಪ್ರೋತ್ಸಾಹಧನವನ್ನು ಒದಗಿಸಲಾಗುವುದು.
ಈ ವಿವಾಹ ಕಾರ್ಯಕ್ರಮ ಕಾನೂನಿನ ಚೌಕಟ್ಟಿನಲ್ಲಿ ನಡೆಸಲಾಗುವುದರಿಂದ ವರನಿಗೆ 21 ವರ್ಷ ಹಾಗೂ ವದುವಿಗೆ 18 ವರ್ಷ ಪೂರ್ತಿಯಾಗಿರಬೇಕು. ಯಾವುದೇ ಕಾರಣಕ್ಕೂ 2ನೇ ವಿವಾಹಕ್ಕೆ ಅವಕಾಶವಿರುವುದಿಲ್ಲ. ವಧು-ವರರ ವಯಸ್ಸನ್ನು ದೃಢೀಕರಿಸಲು ಪ್ರಮಾಣ ಪತ್ರವನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ಕಡ್ಡಾಯವಾಗಿ ಒದಗಿಸಬೇಕು. ಗದಗ ಜಿಲ್ಲೆ ಮತ್ತು ಸುತ್ತಮುತ್ತಲಿನ ಎಲ್ಲ ಜಿಲ್ಲೆಯ ಜನರು ಈ ಕಾರ್ಯಕ್ರಮದ ಸದುಪಯೋಗ ಪಡೆದು ವಿವಾಹ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ವಿವಾಹ ನೊಂದಣಿಯು ಸೆ. 13 ರಿಂದ ಅ. 3 ರವರೆಗೆ ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ ಶ್ರೀರಾಮುಲು ಸ್ವ-ಗೃಹ, ಹೊಸ ಬಸ್ ನಿಲ್ದಾಣದ ಹತ್ತಿರ ಗದಗ ಮೊ. 9686774486, 9686774484 ಇಲ್ಲಿಗೆ ಸಂಪರ್ಕಿಸುವಂತೆ ತಿಳಿಸಿದ್ದಾರೆ.
ನಗರಸಭೆ ಸದಸ್ಯ ಮಂಜುನಾಥ ಮುಳಗುಂದ, ಸಂತೋಷ ಮೇಲಗಿರಿ, ಶ್ರೀನಿವಾಸ ಕರಿ, ರಾಘವೇಂದ್ರ ಯಳವತ್ತಿ, ನಾಗಲಿಂಗ ಐಲಿ, ಬಸಣ್ಣ ಬೆಳದಡಿ, ಮಹೇಶಗೌಡ ಮೇಟಿ, ಪ್ರೊ. ಕೆ.ಎಚ್. ಬೇಲೂರ, ಮೋಲಾನಾ ಮಾನ್ವಿ ಮುಂತಾದವರು ಉಪಸ್ಥಿತರಿದ್ದರು.