ಮಹಿಳೆಯರು ಆರ್ಥಿಕ ಸಬಲರಾಗಿ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಸೆ. 1
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಮಹಿಳೆಯರು ಸ್ವಾವಲಂಬಿ ಜೀವನದ ಜತೆಗೆ ಆರ್ಥಿಕವಾಗಿ ಸಬಲರಾಗಬೇಕೆಂದು ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಅವರು ಭಾನುವಾರ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶಿರಹಟ್ಟಿ ವಲಯದ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಆಶ್ರಯದಲ್ಲಿ ಜರುಗಿದ ವಲಯದ ಒಕ್ಕೂಟಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಮಹಿಳೆಯರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸುಧಾರಣೆ ಹೊಂದಿ ದೇಶದ ಮುಂಚೂಣಿಗೆ ಬರಲು ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳಿಗೆ ಎಲ್ಲ ರೀತಿಯ ಸಹಾಯ ಮಾಡುತ್ತಿದೆ. ಯೋಜನೆಯ ಸಹಾಯ ಪಡೆದುಕೊಂಡು ಬದುಕು ಕಟ್ಟಿಕೊಳ್ಳಲು ಸಲಹೆ ನೀಡಿದರು. ಮಹಿಳೆಯರಿಗೆ ಸಮಾನತೆ ನೀಡಿ ಅಭಿವೃದ್ಧಿ ಕಾರ್ಯಕ್ಕೆ ಮುಂದಾದ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಕಾರ್ಯ ಶ್ಲಾಘನೀಯ. ಜೀವನದಲ್ಲಿ ಪರಿವರ್ತನೆಯಾದರೆ ಬದುಕು ಬಂಗಾರವಾಗಲು ಸಾಧ್ಯ. ದುಶ್ಚಟ ದೂರಮಾಡಿ ಆರೋಗ್ಯ ಕಾಪಾಡಿಕೊಂಡು ಹಣ ಉಳಿತಾಯ ಮಾಡಬೇಕು. ಮಹಿಳೆಯರು ಈ ದಿಸೆಯಲ್ಲಿ ಸಾಗಬೇಕು. ಕುಟುಂಬದ ಹಾಗೂ ಸಮಾಜದ ಶಕ್ತಿಯಾಗಿರುವ ಮಹಿಳೆಯರಲ್ಲಿ ಆತ್ಮಸ್ಥೈರ್ಯ ಹಾಗೂ ಮನೋಬಲ ಹೆಚ್ಚಿಸುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಸಶಕ್ತ ಹಾಗೂ ಸುಶಿಕ್ಷಿತ ಸಮಾಜ ನಿರ್ಮಾಣದ ಕನಸು ಹೊತ್ತಿರುವ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಸಂಘದ ಕಾರ್ಯ ಶ್ಲಾಘನೀಯ ಎಂದರು.
ಜಿಲ್ಲಾ ನಿರ್ದೇಶಕ ಜಯಂತ ಪೂಜಾರಿ ಮಾತನಾಡಿ, ಗ್ರಾಮೀಣ ಪ್ರದೇಶದ ಸ್ವ-ಸಹಾಯ ಸಂಘಗಳು ದೇಶದ ಅಭಿವೃದ್ಧಿಗೆ ಪೂರಕವಾಗಲಿ. ಪ್ರತಿಯೊಬ್ಬರೂ ಮೊಟ್ಟ ಮೊದಲು ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳಿ. ಜತೆಗೆ ಉಳಿತಾಯದತ್ತ ಗಮನ ಹರಿಸಿ. ಸುಖ ದುಡಿಮೆಯಿಂದ ಬರಬೇಕು. ಅದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಜತೆಗೆ ಸಮಾಜಕ್ಕಾಗಿ ಕಿಂಚಿತ್ತಾದರೂ ಸೇವೆ ಮಾಡುವ ಗುಣ ಬೆಳೆಸಿಕೊಳ್ಳಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಞಾನಜ್ಯೋತಿ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ದೀಪಾ ಪಾಶ್ಚಾಪುರ ವಹಿಸಿದ್ದರು. ತಾಪಂನ ಮಾಜಿ ಅಧ್ಯಕ್ಷ ಅಶೋಕ ಪಲ್ಲೇದ, ಪಪಂ ಮಾಜಿ ಅಧ್ಯಕ್ಷ ಹುಮಾಯೂನ ಮಾಗಡಿ, ತಾಲೂಕು ಕಸಾಪ ಅಧ್ಯಕ್ಷ ಕೆ.ಎ.ಬಳಿಗೇರ ಮಾತನಾಡಿದರು. ಯಳವತ್ತಿ ಗ್ರಾಪಂ ಅಧ್ಯಕ್ಷ ಫಕ್ಕೀರಗೌಡ ಪಾಟೀಲ, ವೀರಣ್ಣ ಮಜ್ಜಗಿ ಮುಂತಾದವರು ಉಪಸ್ಥಿತರಿದ್ದರು. ಅಶೋಕ ಕುಮಾರ ಸ್ವಾಗತಿಸಿದರು. ನಾಗಪ್ಪ ಹಸಬಿ ನಿರೂಪಿಸಿದರು. ಕೆ.ದಿವಾಕರ ವಂದಿಸಿದರು.