ಶುದ್ಧ ನೀರು-ಆಹಾರದಿಂದ ಉತ್ತಮ ಆರೋಗ್ಯ
ಗದಗ: ಶುದ್ಧ ನೀರು, ಪ್ರೊಟೀನಯುಕ್ತ ಆಹಾರ ಸೇವನೆಯಿಂದ ನಾವು ಆರೋಗ್ಯವಂತಾರಾಗಿರುತ್ತೇವೆ. ಹೆಚ್ಚು ನೀರಿನ ಸೇವನೆ, ಒಳ್ಳೆಯ ವಿಚಾರ ಹಾಗೂ ಪ್ರತಿಯೊಬ್ಬರೂ ಆರೋಗ್ಯದಿಂದಿರಲು ವ್ಯಾಯಾಮ ಅವಶ್ಯ ಎಂದು ಡಾ. ಕೆ.ಎಂ. ಅಯ್ಯನಗೌಡ್ರ ಹೇಳಿದರು.
ಅವರು ಶನಿವಾರ ಬೆಟಗೇರಿಯ ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆಯಲ್ಲಿ ಇಕೋಕ್ಲಬ್ ಅಡಿಯಲ್ಲಿ ಏರ್ಪಡಿಸಿದ್ದ ಆರೋಗ್ಯ ಸ್ವಚ್ಛತೆ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಹಿರೇಗೌಡರ ಮಾತನಾಡಿ, ನಾವು ಆರೋಗ್ಯವಂತರಾಗಿ ಇರಬೇಕಾದರೆ ದುಶ್ಚಟಗಳಿಂದ ದೂರವಿದ್ದು, ಯಾವುದೇ ರೋಗಗಳಿಗೆ ನಮ್ಮ ದೇಹದಲ್ಲಿ ಅವಕಾಶ ನೀಡದಂತೆ ಎಚ್ಚರಿಕೆಯಿಂದ ಇರಬೇಕು.
ಪ್ರತಿ ನಿತ್ಯ ವ್ಯಾಯಾಮ, ಯೋಗ, ಧ್ಯಾನ ಇವುಗಳನ್ನು ಕ್ರಮ ಬದ್ಧತೆಯಿಂದ ಮಾಡುತ್ತಾ ಹೋದಾಗ ನಾವು ಸದೃಢರಾಗುತ್ತೇವೆ ಎಂದರು. ಕಾರ್ಯಕ್ರಮದಲ್ಲಿ ಕನ್ನಡ ಬರಹ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ನಾಗರಾಜ ಸಂಜೀವಪ್ಪ ಪ್ರಥಮ, ಮೈಲಾರಪ್ಪ ಹೊಸಮನಿ ದ್ವಿತೀಯ, ಅಂದಪ್ಪ ಕುಮಾರ ತೃತೀಯ ಸ್ಥಾನ ಪಡೆದು ಬಹುಮಾನಗಳನ್ನು ಸ್ವೀಕರಿಸಿದರು. ಸಿ.ಎಂ. ಮಾರನಬಸರಿ ಸ್ವಾಗತಿಸಿದರು. ಎಚ್.ಎನ್. ಬ್ಯಾಳಿ ನಿರೂಪಿಸಿದರು. ವಿ.ಜಿ. ಕಾಂಬಳೇಕರ ವಂದಿಸಿದರು.