ಸದ್ಭಾವನೆ, ಸೌಹಾರ್ದದಿಂದ ನವಭಾರತ ನಿರ್ಮಾಣ
ಗದಗ: ಸದ್ಭಾವನೆ ಹಾಗೂ ಸೌಹಾರ್ದತೆಯಿಂದ ನವ ಭಾರತ ನಿರ್ಮಾಣ ಸಾಧ್ಯ ಎಂದು ಹುಲಕೋಟಿಯ ಕೆ.ಎಚ್. ಪಾಟೀಲ ರ್ಸಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಶಿವಪ್ಪ ಕುರಿ ಹೇಳಿದರು.
ಅವರು ಈಚೆಗೆ ತಾಲೂಕಿನ ಹುಲಕೋಟಿ ಗ್ರಾಮದ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಸಾಂಸ್ಕೃತಿಕ ವಿಭಾಗದ ವತಿಯಿಂದ ಸದ್ಭಾವನಾ ಹಾಗೂ ಕೋಮು ಸೌಹಾರ್ದತಾ ಪಾಕ್ಷಿಕ ಆಚರಣೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಕೋಮುವಾದವನ್ನು ಸಮಾಜದಿಂದ ಸಂಪೂರ್ಣ ಕಿತ್ತುಹಾಕಿ ಶಾಂತಿಯುತ ವಾತಾವರಣವನ್ನು ನಿರ್ಮಾಣ ಮಾಡುವುದು ಅವಶ್ಯಕವಿದೆ ಎಂದರು. ಕಾಲೇಜಿನ ರಾಜ್ಯಶಾಸ್ತ್ರ ಅಧ್ಯಾಪಕ ಪ್ರೊ. ನಾಗರಾಜ ಹಾವಿನಾಳ ಮಾತನಾಡಿ, ಸಮಾಜದ ಸ್ವಾಸ್ಥ್ಯ ಕಾಪಾಡಿ ಆರೋಗ್ಯವಂತ ಸಮಾಜವನ್ನು ಕಟ್ಟಲು ಸರ್ವರೂ ಪಾಲ್ಗೊಳ್ಳಬೇಕು ಮತ್ತು ಯುವ ಜನತೆ ರಾಷ್ಟ್ರೀಯ ಭಾವೈಕ್ಯತೆ, ಸಮಾನತೆ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು. ಅತಿಥಿಗಳಾಗಿ ಪಾಲ್ಗೊಂಡಿದ್ದ ಪ್ರೊ. ರಮಜಾನಸಾಬ ನದಾಫ, ಪ್ರೊ. ಸವಿತಾ ಪಾಟೀಲ ಮುಂತಾದವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಉಮೇಶ ಅರಹುಣಸಿ, ಪ್ರೊ. ರಂಜನಾ ಭಂಡಾರೆ, ಡಾ. ಎಂ.ಕೆ. ಹೊನಕಾಂಬಳೆ, ಅಣ್ಣಪ್ಪ ರೊಟ್ಟಿಗವಾಡ, ಮುತ್ತಪ್ಪ ಬದ್ನಿಕಾಯಿ, ಬಸವರಾಜ ಅಂಬಿಗೇರ ಪಾಲ್ಗೊಂಡಿದ್ದರು. ಬಸವರಾಜ ಗೂರನವರ ಪ್ರಾರ್ಥಿಸಿದರು. ಪ್ರೊ. ಚಂದ್ರಪ್ಪ ಸ್ವಾಗತಿಸಿದರು. ಎಫ್.ಬಿ. ಆನಿ ವಂದಿಸಿದರು.