ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಎಲ್‌ಐಸಿಯಿಂದ ಉತ್ತಮ ಸೇವೆ

Vishwanath S
Updated On : 3 Sept 2013, 11:20 am

ಮುಂಡರಗಿ: ಭಾರತೀಯ ಜೀವ ವಿಮಾ ನಿಗಮವು ಪಾಲಸಿದಾರರಿಗೆ ಉತ್ತಮ ಮತ್ತು ತ್ವರಿತ ಸೇವೆ ನೀಡುವ ಉದ್ದೇಶದಿಂದ 10 ಸಾವಿರಕ್ಕಿಂತ ಜನಸಂಖ್ಯೆ ಹೆಚ್ಚಿರುವ ಸ್ಥಳಗಳಲ್ಲಿ ಮಿನಿ ಎಲ್‌ಐಸಿ ಕಚೇರಿಯನ್ನು ತೆರೆಯಲಾಗಿದೆ ಎಂದು ಗದಗ ಭಾರತೀಯ ಜೀವ ವಿಮಾ ನಿಗಮದ ಮುಖ್ಯ ಪ್ರಬಂಧಕ ಬಿ.ಎಂ. ಮುನಿರಡ್ಡಿ ಹೇಳಿದರು.
ಅವರು ಭಾನುವಾರ ಪಟ್ಟಣದ ವಿದ್ಯಾ ನಗರದಲ್ಲಿರುವ ಮಿನಿ ಕಚೇರಿ ಆವರಣದಲ್ಲಿ ಜರುಗಿದ 58ನೇ ವಿಮಾ ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 1956, ಸೆ.1 ರಂದು ರಾಷ್ಟ್ರೀಕರಣಗೊಂಡು ಉದಯಿಸಿದ ಭಾರತೀಯ ಜೀವ ವಿಮಾ ನಿಗಮವು ಇಂದು 58ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದು, 1956 ರಲ್ಲಿ ಕೇವಲ ರು. 5 ಕೋಟಿಯಲ್ಲಿ ಕೇಂದ್ರ ಸರ್ಕಾರದ ಬಂಡವಾಳದೊಂದಿಗೆ ಪ್ರಾರಂಭವಾಗಿ ಇಂದು ರು. 143310314 ಕೋಟಿ ಲೈಪ್ ಫಂಡ್ ಹಾಗೂ 29.46 ಕೋಟಿ ಪಾಲಿಸಿದಾರರನ್ನು ಹೊಂದಿದ ಜಗತ್ತಿನ ಬೃಹತ್ ವಿಮಾ ಕಂಪನಿಯಾಗಿ ಹೊರಹೊಮ್ಮಿದೆ ಎಂದರು. ನಿಗಮವು ಮುಂಬೈನಲ್ಲಿ ತನ್ನ ಕೇಂದ್ರ ಕಚೇರಿಯನ್ನು ಹೊಂದಿದೆ. ವಿದೇಶಗಳಲ್ಲಿಯೂ ನಿಗಮವು ತನ್ನ ಅಸ್ತಿತ್ವವನ್ನು ಹೊಂದಿ ವ್ಯವಹಾರವನ್ನು ನಡೆಸುತ್ತಿದೆ. ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಎಲ್‌ಐಸಿ ಪಾಲಸಿಗಳನ್ನು ಮಾಡಿ ಜೀವನವನ್ನು ಸುಧಾರಿಸಿಕೊಳ್ಳಬೇಕು ಎಂದರು. ಜೀವವಿಮಾ ನಿಗಮದ ಮುಂಡರಗಿ ತಾಲೂಕು ಅಭಿವೃದ್ಧಿ ಅಧಿಕಾರಿ ಎಸ್.ಪಿ.ಚಂದ್ರಕಾಂತ ಮಾತನಾಡಿ, ಕಳೆದ 12 ವರ್ಷಗಳಿಂದ ಧಾರವಾಡ ವಿಭಾಗದಲ್ಲಿ ಹೆಚ್ಚು ಪಾಲಿಸಿಗಳನ್ನು ಮಾಡಿಸುವಲ್ಲಿ ಮುಂಡರಗಿ ತಾಲೂಕು ನಂಬರ್ 1 ಸ್ಥಾನದಲ್ಲಿದೆ. ಇಲ್ಲಿನ ಪ್ರತಿಯೊಂದು ಗ್ರಾಮದಲ್ಲಿಯೂ ಬಹುತೇಕ ಜನ ವಿಮೆ ಸೇವೆಯನ್ನು ಹೊಂದಿದ್ದಾರೆ. ಇದಕ್ಕೆ ಇಲ್ಲಿನ ಪ್ರತಿನಿಧಿಗಳು ಮತ್ತು ಪಾಲಿಸಿದಾರರ ಪಾತ್ರ ಪ್ರಮುಖವಾಗಿದೆ ಎಂದರು. ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಪರಿಸರವಾದಿ ಪ್ರೊ. ಸಿ.ಎಸ್. ಅರಸನಾಳ ಮಾತನಾಡಿದರು. ಈಶ್ವರಪ್ಪ ಹಂಚಿನಾಳ, ಪಾಲಾಕ್ಷಿ ಗಣದಿನ್ನಿ, ಲಿಂಗರಾಜಗೌಡ ಪಾಟೀಲ, ಬಿ.ಆರ್. ಕುಲಕರ್ಣಿ, ವಿಶ್ವನಾಥ ಅಂಗಡಿ, ಹನುಮಣ್ಣ ಕುಲಕರ್ಣಿ, ಜಿ.ವಿ. ಹೆಗ್ಗಡಾಳ ಮುಂತಾದವರು ಉಪಸ್ಥಿತರಿದ್ದರು. ಬಿ.ಆರ್. ಕುಲಕರ್ಣಿ ಸ್ವಾಗತಿಸಿದರು. ಪ್ರೊ. ಮೋಹನ್ ಕುಲಕರ್ಣಿ ನಿರೂಪಿಸಿದರು. ಎಚ್.ಜೆ.ಪವಾರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement