ಬೆಣ್ಣಿಹಳ್ಳ ಪ್ರವಾಹದಲ್ಲಿ ಸಿಲುಕಿದ ಕಾರ್ಮಿಕರು
ಗದಗ: ಜಿಲ್ಲೆಯ ನರಗುಂದ ತಾಲೂಕಿನ ಬನಹಟ್ಟಿ ಗ್ರಾಮದ ಸಮೀಪದಲ್ಲಿರುವ ಜಾಕ್ವೆಲ್ನಲ್ಲಿ ಭಾನುವಾರ ರಾತ್ರಿ ಕಾವಲು ಕಾಯಲು ಹೋಗಿದ್ದ ಇಬ್ಬರು ಕಾರ್ಮಿಕರು ಬೆಣ್ಣಿಹಳ್ಳಕ್ಕೆ ಬಂದ ದಿಢೀರ್ ಪ್ರವಾಹದಿಂದ 12ಕ್ಕೂ ಹೆಚ್ಚು ಗಂಟೆ ಹಳ್ಳದ ಮಧ್ಯದಲ್ಲಿಯೇ ಸಿಲುಕಿಕೊಂಡ ಘಟನೆ ನಡೆದಿದೆ. ಸೋಮವಾರ ಸಂಜೆಯ ವೇಳೆಗೆ ಅವರನ್ನು ಬೋಟ್ ಮೂಲಕ ಪ್ರವಾಹದಿಂದ ರಕ್ಷಿಸುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ.
ಘಟನೆ ವಿವರ: ನರಗುಂದ ತಾಲೂಕಿನ ಬನಹಟ್ಟಿ ಸಮೀಪದಲ್ಲಿಯೇ ಬೆಣ್ಣಿಹಳ್ಳ ಹರಿಯುತ್ತದೆ. ಈ ಹಳ್ಳದಲ್ಲಿ ನೀರಾವರಿ ಇಲಾಖೆಯ ಜಾಕ್ವೆಲ್ ಅಳವಡಿಸಲಾಗಿದೆ. ಎಂದಿನಂತೆ ಅಲ್ಲಿ ಕೆಲಸ ನಿರ್ವಹಿಸುವ ಮಹಾಲಿಂಗಪ್ಪ ಹಾಗೂ ವಸಂತಗೌಡ ಎನ್ನುವವರು ರಾತ್ರಿ ಕಾವಲು ಕಾಯಲು ಅಲ್ಲಿ ತೆರಳಿ ಜಾಕ್ವೆಲ್ನಲ್ಲಿಯೇ ಮಲಗಿದ್ದಾರೆ. ಭಾನುವಾರ ಸಂಜೆ ಹಾಗೂ ರಾತ್ರಿ ವೇಳೆ ಹುಬ್ಬಳ್ಳಿ ಧಾರವಾಡಗಳಲ್ಲಿ ಸುರಿದ ಮಳೆಯಿಂದಾಗಿ ಬೆಣ್ಣಿಹಳ್ಳಕ್ಕೆ ತೀವ್ರ ಪ್ರವಾಹ ಉಂಟಾಗಿದ್ದು, ಬೆಳಗಾಗುವುದರಲ್ಲಿ ಇವರಿದ್ದ ಜಾಕ್ವೆಲ್ ಸುತ್ತಲೂ ಸಂಪೂರ್ಣ ನೀರು ಆವರಿಸಿ ಜಾಕ್ವೆಲ್ ಮುಳುಗುವ ಹಂತಕ್ಕೆ ತಲುಪಿದೆ. ಬೆಳಗಿನ ಜಾವ ಎಚ್ಚರಗೊಂಡು ಇವರಿಬ್ಬರೂ ತಮ್ಮ ಬಳಿ ಇದ್ದ ಮೊಬೈಲ್ನಿಂದ ಮನೆಯವರನ್ನು ಸಂಪರ್ಕಿಸಿ ನಾವು ಪ್ರವಾಹದಲ್ಲಿ ಸಿಕ್ಕಿ ಹಾಕಿಕೊಂಡಿದ್ದೇವೆ. ಕೂಡಲೇ ನಮ್ಮನ್ನು ರಕ್ಷಿಸಿ ಎಂದು ತಿಳಿಸಿದ್ದು, ನಂತರ ಕುಟುಂಬದ ಮೂಲಕ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತಕ್ಕೆ ಮಾಹಿತಿ ದೊರೆತ ನಂತರ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಕುಟುಂಬದವರಲ್ಲಿ ಆತಂಕ: ರಾತ್ರಿಯಿಂದಲೂ ಪ್ರವಾಹದಲ್ಲಿ ಸಿಲುಕಿಕೊಂಡಿದ್ದವರನ್ನು ರಕ್ಷಿಸುವಂತೆ ತಿಳಿಸಿದ್ದರೂ ಅಧಿಕಾರಿಗಳು ವಿಳಂಬ ನೀತಿ ಅನುಸರಿಸಿದ್ದು ಕುಟುಂಬ ವರ್ಗದಲ್ಲಿ ತೀವ್ರ ಆತಂಕಕ್ಕೆ ಕಾರಣವಾಯಿತು. ಮೊದಲು ಅಗ್ನಿಶಾಮಕ ದಳದ ಸಿಬ್ಬಂದಿ ಹಗ್ಗ ಹಾಗೂ ಲೈಫ್ ಜಾಕೆಟ್ಗಳ ಮೂಲಕ ಅವರನ್ನು ರಕ್ಷಿಸಲು ಪ್ರಯತ್ನಿಸಿತಾದರೂ ಬೆಣ್ಣಿಹಳ್ಳದಲ್ಲಿ ನೀರಿನ ಹರಿವು ಪ್ರಮಾಣ ಜೋರಾಗಿರುವುದು ಹಾಗೂ ಅತಿಯಾದ ಮುಳ್ಳಿನ ಕಂಟಿಗಳಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ತೀವ್ರ ಹಿನ್ನಡೆಯಾಯಿತು.
ಬೋಟ್ಗಳು ವಿಳಂಬ: ಹಗ್ಗಗಳ ಮೂಲಕ ಅವರನ್ನು ರಕ್ಷಿಸಲು ಸಾಧ್ಯವಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದ್ದಂತೆ ಅಧಿಕಾರಿಗಳು ಬೋಟ್ಗಳ ಮೊರೆ ಹೋದರು. ಆದರೆ, ಸರಿಯಾದ ಸಮಯಕ್ಕೆ ಬೋಟ್ಗಳು ಬಾರದೇ ಇರುವುದು ಅಲ್ಲಿನ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಯಿತು. ಇದರ ಮಧ್ಯೆ ಬೆಣ್ಣಿಹಳ್ಳದಲ್ಲಿನ ನೀರಿನ ಪ್ರಮಾಣವು ಕ್ಷಣ, ಕ್ಷಣಕ್ಕೂ ಹೆಚ್ಚಾಗುತ್ತಿದ್ದರಿಂದ ಕುಟುಂಬ ವರ್ಗದವರು ಮಾತ್ರವಲ್ಲ, ಗ್ರಾಮಸ್ಥರು ಸೇರಿದಂತೆ ಎಲ್ಲರಲ್ಲಿ ತೀವ್ರ ಆತಂಕ ಮೂಡಿಸಿತ್ತು. ಕೊನೆಗೆ 4.20ರ ವೇಳೆಗೆ ಅವರನ್ನು ಬೋಟ್ಗಳ ಮೂಲಕ ಅವರಿದ್ದ ಸ್ಥಳಕ್ಕೆ ತೆರಳಿ ರಕ್ಷಿಸಲಾಯಿತು.