ಅಧಿಕಾರಕ್ಕಾಗಿ ಬಿರುಸಿನ ರಾಜಕೀಯ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಸೆ. 3
ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನ ಎಸ್ಸಿ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾತಿ ನಿಗದಿಯಾಗಿದ್ದು, ಬಿರುಸಿನ ರಾಜಕೀಯ ಚಟುವಟಿಕೆ ಆರಂಭವಾಗಿದೆ.
ಅಧಿಕಾರಕ್ಕಾಗಿ ಮೈತ್ರಿಕೂಟ ರಚನೆಯಲ್ಲಿ ಪರಸ್ಪರ ಕಿತ್ತಾಟ ಶುರುವಾಗಿದೆ. ಪಟ್ಟಣ ಪಂಚಾಯಿತಿಯಲ್ಲಿ ಯಾವುದೇ ಪಕ್ಷಕ್ಕೆ ನಿಚ್ಚಳ ಬಹುಮತ ಸಿಗದೇ ಇರುವುದರಿಂದ ಬಿಜೆಪಿಯವರು ಮಾಜಿ ಶಾಸಕ ರಾಮಣ್ಣ ಲಮಾಣಿ ಅವರನ್ನು ಮುಂದಿಟ್ಟುಕೊಂಡು ನಮ್ಮ ಪಕ್ಷಕ್ಕೆ ಬೆಂಬಲ ನೀಡುವಂತೆ ಕಾಂಗ್ರೆಸ್ ಪಕ್ಷದ ಬಾಗಿಲು ತಟ್ಟಿ ಬೆಂಬಲ ಕೇಳಿದ್ದಾರೆ. ಅವರು ಬಾಹ್ಯ ಬೆಂಬಲ ನೀಡುವ ಹಸಿರು ನಿಶಾನೆ ತೋರಿಸಿದ್ದಾರೆ ಎನ್ನುವ ಚರ್ಚೆ ಪಟ್ಟಣದಾದ್ಯಂತ ಕೇಳಿ ಬರುತ್ತಿದೆ. ಕಾಂಗ್ರೆಸ್ ತನ್ನ ವರಸೆ ಬದಲಾಯಿಸಿದ್ದರಿಂದಾಗಿ ಜೆಡಿಎಸ್‌ಗೆ ಹಿನ್ನಡೆಯಾಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.
ಪ್ರಸ್ತುತ ಪಟ್ಟಣ ಪಂಚಾಯಿತಿಯಲ್ಲಿ ಜೆಡಿಎಸ್ 7, ಕಾಂಗ್ರೆಸ್ 5, ಬಿಜೆಪಿ 3, ಬಿಎಸ್‌ಆರ್ 1 ಸ್ಥಾನಗಳನ್ನು ಹೊಂದಿದ್ದು, 1 ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ. ಜೆಡಿಎಸ್ ಮತ್ತು ಬಿಜೆಪಿ ಮಧ್ಯೆ ಅಧ್ಯಕ್ಷ ಸ್ಥಾನದಲ್ಲಿ ಉಂಟಾದ ಮನಸ್ಥಾಪದಿಂದ ಇದರ ಲಾಭ ಪಡೆದುಕೊಳ್ಳಲು ಕಾಂಗ್ರೆಸ್ ಮುಂದಾಗಿದ್ದು, ಅಧ್ಯಕ್ಷ, ಉಪಾಧ್ಯಕ್ಷ ಎರಡೂ ಸ್ಥಾನಗಳನ್ನು ಕಾಂಗ್ರೆಸ್ ಪಕ್ಷ ಬಿಟ್ಟು ಕೊಟ್ಟು, ಬಾಹ್ಯ ಬೆಂಬಲ ನೀಡುವ ಮೂಲಕ ಹಿಂಬಾಗಿಲಿನಿಂದ ಅಧಿಕಾರ ನಡೆಸುವ ತಂತ್ರಗಾರಿಕೆ ಹೆಣೆದಿದೆ ಎನ್ನುವುದನ್ನು ಆ ಪಕ್ಷದ ಮೂಲಗಳೇ ತಿಳಿಸಿವೆ.
ಕಾದು ನೋಡುವ ತಂತ್ರ: ಈ ಸ್ಥಾನಗಳಿಗೆ ಅವಿರೋಧ ಆಯ್ಕೆಯಾದರೆ, ಅಥವಾ ಚುನಾವಣೆ ನಡೆದರೆ ಕಾಂಗ್ರೆಸ್ ಯಾವ ನೀತಿ ಅನುಸರಿಸುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ.
ಒಂದೊಮ್ಮೆ ಚುನಾವಣೆ ಅನಿವಾರ್ಯವಾದರೆ ಕಾನೂನಿನ ತೊಡಕುಗಳು ಏನಾದರೂ ಎದುರಾಗಬಹುದು ಎಂಬ ಗೊಂದಲ ಮೂಡಿದ್ದು, ಚುನಾವಣೆ ನಡೆದಿದ್ದೇ ಆದಲ್ಲಿ ಕೈ ಎತ್ತುವ ಮೂಲಕ ಬೆಂಬಲ ತೋರಿಸಿದರೂ ಪಕ್ಷ ವಿರೋಧಿ ಚಟುವಟಿಕೆ ನಡೆವ ಹಿನ್ನೆಲೆಯಲ್ಲಿ ಸದಸ್ಯರನ್ನು ಪಕ್ಷದಿಂದ ಹೊರ ಹಾಕುವ ಕ್ರಮ ನಡೆಯಬಹುದು.
ಬಿಜೆಪಿಯಂತೆ ಜೆಡಿಎಸ್ ಕೂಡ ಎಸ್ಸಿ ವರ್ಗದ ಸದಸ್ಯರನ್ನು ಹೊಂದಿದ್ದು, ಸ್ಥಳೀಯ ಪಟ್ಟಣ ಪಂಚಾಯಿತಿಯಲ್ಲಿ ಆಡಳಿತ ಚುಕ್ಕಾಣಿ ಹಿಡಿಯುವ ಕನಸು ಹೊಂದಿದ್ದ ಜೆಡಿಎಸ್‌ನ ಓರ್ವ ಸದಸ್ಯ ಎಲ್ಲಿಗೋ ಹೋಗಿದ್ದು, ಜೆಡಿಎಸ್ ಉಳಿದ ತನ್ನ ಸದಸ್ಯರನ್ನು ಹಿಡಿದಿಟ್ಟುಕೊಳ್ಳಬೇಕಾಗಿದ್ದು, ಚುನಾವಣೆ ಹತ್ತಿರವಾಗುತ್ತಿದಂತೆ ಯಾವ ಯಾವ ನಾಟಕೀಯ ತಿರುವು ಪಡೆದುಕೊಳ್ಳುತ್ತದೆ ಎನ್ನುವುದು ಕುತೂಹಲ ಕೆರಳಿಸಿದೆ.
ಕಾಂಗ್ರೆಸ್ ಮುಖಂಡರ ಸ್ಪಷ್ಟನೆ: ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈ.ಎಸ್. ಪಾಟೀಲ ಮೈತ್ರಿ ಮಾಡಿಕೊಳ್ಳುವ ಕುರಿತು ತಿಳಿಸಿ, ಬಿಜೆಪಿಯ ಮಾಜಿ ಶಾಸಕ ರಾಮಣ್ಣ ಲಮಾಣಿ ಅವರು ದೂರವಾಣಿ ಮೂಲಕ ಮಾತನಾಡಿ ಪಕ್ಷಕ್ಕೆ ಬೆಂಬಲ ನೀಡುವಂತೆ ಕೇಳಿಕೊಂಡಿದ್ದಾರೆ.
ಕಾಂಗ್ರೆಸ್‌ನಲ್ಲಿ ಎಸ್ಸಿ ಪ್ರವರ್ಗಕ್ಕೆ ಸೇರಿದ ಸದಸ್ಯರು ಇಲ್ಲದ್ದರಿಂದ ಯಾವುದೇ ಅಧಿಕಾರಕ್ಕಾಗಿ ಆಸೆ ಪಡದೇ ಬಿಜೆಪಿಗೆ ಬಾಹ್ಯ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.
ಮೊದಲು ಜೆಡಿಎಸ್ ಮತ್ತು ಬಿಜೆಪಿ ಕೂಡಿಕೊಂಡು ಆಡಳಿತ ನಡೆಸುವ ಬಗ್ಗೆ ತೀರ್ಮಾನಿಸಲಾಗಿತ್ತು. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಒಪ್ಪಂದದಲ್ಲಿ ಆದ ಮಾತಿನ ಬೆಳವಣಿಗೆಯಿಂದಾಗಿ ಕಾಂಗ್ರೆಸ್ ಬೆಂಬಲ ಕೋರಿದ್ದು, ಅವರು ನೀಡುವುದಾಗಿ ತಿಳಿಸಿದ್ದಾರೆ. ಅದರಂತೆ ಸ್ಥಳೀಯ ಸಂಸ್ಥೆಯಲ್ಲಿ ಬಿಜೆಪಿ ನೇತೃತ್ವದ ಆಡಳಿತ ನಡೆಯಲಿದೆ.
ರಾಮಣ್ಣ ಲಮಾಣಿ, ಮಾಜಿ ಶಾಸಕ, ಶಿರಹಟ್ಟಿ
- ಮಹದೇವಪ್ಪ ಎಂ. ಸ್ವಾಮಿ