ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬತ್ತಿದ ಕೆರೆಗಳು ಮೀನುಗಾರರ ಬದುಕು ಅತಂತ್ರ

Vishwanath S
Updated On : 4 Sept 2013, 12:29 pm

ಕನ್ನಡಪ್ರಭ ವಾರ್ತೆ, ಗದಗ, ಸೆ. 3
ಮೀನುಗಾರಿಕೆ ಕೇವಲ ಸಮುದ್ರ ಹಾಗೂ ನದಿಗೆ ಮಾತ್ರ ಸೀಮಿತವಾಗಿಲ್ಲ, ಒಳನಾಡು ಮೀನುಗಾರಿಕೆಯ ಹೆಸರಿನಲ್ಲಿ ಬಯಲು ಪ್ರದೇಶದಲ್ಲಿರುವ ಮೀನುಗಾರರ ಉತ್ತೇಜನಕ್ಕೆ ಸರ್ಕಾರಗಳೇ ಹಲವಾರು ಯೋಜನೆ ರೂಪಿಸಿವೆ. ಆದರೆ, ಮಳೆಗಾಲದಲ್ಲಿಯೇ ಮಳೆ ಕೊರತೆಯಿಂದ ಜಿಲ್ಲೆಯಾದ್ಯಂತ ಕೆರೆಗಳಲ್ಲಿ ನೀರಿಲ್ಲದೇ ಒಳನಾಡು ಮೀನುಗಾರಿಕೆ ನಂಬಿದವರ ಬದುಕು ಅತಂತ್ರ ಸ್ಥಿತಿಗೆ ತಲುಪಿದೆ.
ಗದಗ ಶಾಶ್ವತ ಬರ ಪೀಡಿತ ಜಿಲ್ಲೆಯಾಗಿದ್ದು, ಇಲ್ಲಿ ಹೇಗೆ ಮೀನುಗಾರಿಕೆ ನಡೆಸುತ್ತಾರೆ ಎನ್ನುವ ಪ್ರಶ್ನೆ ಮೂಡುವುದು ಸಹಜ, ಆದರೆ 2006ರ ನಂತರ, ಶಿವಮೊಗ್ಗ ಜಿಲ್ಲೆಯಲ್ಲಿರುವ ಒಳನಾಡು ಮೀನುಗಾರಿಕಾ ತರಬೇತಿ ಸಂಸ್ಥೆಯು, ಭದ್ರಾ ಹಿನ್ನೀರಿನಲ್ಲಿನ ಮೀನುಗಾರಿಕೆಯ ಕುರಿತು ಗದಗ ಜಿಲ್ಲೆಯ ಹಲವಾರು ನಿರುದ್ಯೋಗಿ ಯುವಕರಿಗೆ ಕೆರೆ ಮೀನುಗಾರಿಕೆ ತರಬೇತಿ ನೀಡಿದ ನಂತರ ಜಿಲ್ಲೆಯಲ್ಲಿ ಒಳನಾಡು ಮೀನುಗಾರಿಕೆ ಪ್ರಾರಂಭವಾಗಿದೆ. ಇದರಿಂದಾಗಿ ಮೊದಲು ಜಿಲ್ಲೆಯ ಮೀನು ಪ್ರಿಯರು ಕಾರವಾರದಿಂದ ಮೀನು ಬರುವವರೆಗೂ ಕಾಯಬೇಕಾಗಿತ್ತು. ಆದರೆ, ಸ್ಪಲ್ಪ ದಿನಗಳಲ್ಲಿಯೇ ಸಿಹಿ ನೀರಿನಲ್ಲಿನ (ಕೆರೆ) ಮೀನುಗಳು ಲಭ್ಯವಾಗುವಂತಾಗಿ ಮೀನು ಪ್ರಿಯರಲ್ಲಿ ಸಂತೋಷವನ್ನುಂಟು ಮಾಡಿತ್ತು.
74 ಕೆರೆಯಲ್ಲಿ ಮೀನುಗಾರಿಕೆ: ಜಿಲ್ಲೆಯ 5 ತಾಲೂಕುಗಳ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿರುವ 74 ಕೆರೆಗಳಲ್ಲಿ ಈ ಮೀನುಗಾರಿಕೆ ನಡೆಯುತ್ತಿದ್ದು, ಇವುಗಳಲ್ಲಿ 39 ಕೆರೆಗಳಲ್ಲಿ ಕಳೆದ ಸಾಲಿನ ಡಿಸೆಂಬರ್ ಅಂತ್ಯಕ್ಕೆ ಕೆರೆಗಳು ಬತ್ತಿಹೋಗಿದ್ದರಿಂದ ಅಲ್ಲಿ ಮೀನುಗಾರಿಕೆ ಸಂಪೂರ್ಣ ಸ್ಥಗಿತಗೊಂಡಿದೆ. 12 ಕೆರೆಗಳಲ್ಲಿ ಮಾರ್ಚ್ ಅಂತ್ಯದವರೆಗೂ ಮೀನುಗಾರಿಕೆ ನಡೆದು ನಂತರ ಸ್ಥಗಿತಗೊಂಡಿದ್ದು, ಜೂನ್ ಮೊದಲವಾರದವರೆಗೂ 23 ಕೆರೆಗಳಲ್ಲಿ (ದೊಡ್ಡ ಕೆರೆಗಳು) ಮಾತ್ರ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ನೀರಿದ್ದು, ಅಲ್ಲಿ ಮಾತ್ರ ಮೀನುಗಾರಿಕೆ ನಡೆಯುತ್ತಿದೆ.
ಮಳೆ ಕೊರತೆ: ಸೆಪ್ಟೆಂಬರ್ ತಿಂಗಳು ಮಳೆಗಾಲದ ಮಧ್ಯಭಾಗ, ಆದರೆ ಸಮರ್ಪಕ ಮಳೆಯಾಗದೇ ಇರುವುದರಿಂದ ಜಿಲ್ಲೆಯ ಹಲವಾರು ಗ್ರಾಮಗಳಲ್ಲಿರುವ ಕೆರೆಗಳು ಬತ್ತಿ ಹೋಗಿವೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ನರಗುಂದ ತಾಲೂಕಿನಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದ್ದರೆ, ಇನ್ನುಳಿದ ತಾಲೂಕುಗಳಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆಯಾಗಿದೆ. (ಕೇವಲ ಬಿತ್ತನೆಗೆ ಅನುಕೂಲವಾಗಿದೆ. ಕೆರೆಗಳಿಗೆ ನೀರು ಬರುವಷ್ಟು ಮಳೆಯಾಗಿಲ್ಲ) ಹಾಗಾಗಿ ಕಳೆದ 5 ವರ್ಷದಲ್ಲಿ ಸತತವಾಗಿ 2 ಬಾರಿ ಬಹುತೇಕ ಕೆರೆಗಳು ಮಳೆಗಾಲದಲ್ಲಿ ಬತ್ತಿರುವುದರಿಂದ ಒಳನಾಡು ಮೀನುಗಾರಿಕೆ ನೆಲಕಚ್ಚುವ ಹಂತಕ್ಕೆ ತಲುಪಿದೆ.
ದೂರದಿಂದ ಮೀನು ತರುತ್ತಾರೆ: ಜಿಲ್ಲೆಯ ಒಳನಾಡು ಮೀನುಗಾರಿಕೆಯನ್ನು ನಡೆಸುತ್ತಿರುವ ಬಹುತೇಕ ಯುವಕರು ಮೀನು ಮರಿಗಳಿಗಾಗಿ ಭದ್ರಾ ಹಿನ್ನೀರು ಮೀನು ಸಾಕಾಣಿಕಾ ತರಬೇತಿ ಕೇಂದ್ರ ಹಾಗೂ ಕಾರವಾರದಲ್ಲಿ ಮೀನು ಅಭಿವೃದ್ಧಿ ಮಂಡಳಿಯನ್ನು ಸಂಪರ್ಕಿಸಿ, ಗದಗ ಜಿಲ್ಲೆಯ ವಾತಾವರಣ ಹಾಗೂ ನೀರಿನ ಗುಣಧರ್ಮದಲ್ಲಿ ಬದುಕುವಂತಹ ಮೀನುಗಳನ್ನು ಖರೀದಿಸಿ, ನಂತರ ಕೆರೆಗಳನ್ನು ಹೊಂದಿರುವ ಗ್ರಾಪಂಗಳನ್ನು ಸಂಪರ್ಕಿಸಿ ಅವರು ನಿರ್ಧರಿಸುವ ವಾರ್ಷಿಕ ಬಾಡಿಗೆಯ ಆಧಾರದಲ್ಲಿ ಕೆರೆಗಳಲ್ಲಿ ಮೀನಿನ ಮರಿಗಳನ್ನು ಬಿಟ್ಟು, 3 ತಿಂಗಳವರೆಗೆ ಕಾದು, ನಂತರ ಮೀನು ಹಿಡಿದು ಮಾರಾಟ ಮಾಡಬೇಕಾಗಿದೆ. ಇದಕ್ಕೆ ಗ್ರಾಮಗಳಲ್ಲಿನ ಜನತೆಯ ಸಹಕಾರವೂ ಅಷ್ಟೇ ಮುಖ್ಯವಾಗಿದ್ದು, ನೀರು ಮಲಿನವಾದಲ್ಲಿ ಮೀನುಗಾರರಿಗೆ ನಷ್ಟ ಕಟ್ಟಿಟ್ಟ ಬುತ್ತಿ.
3 ವರ್ಷಗಳಿಂದ ಗದಗ ಜಿಲ್ಲೆಯಲ್ಲಿ 5 ಕೆರೆಗಳಲ್ಲಿ ನಾವು ಮರಿ ಮೀನುಗಳನ್ನು ಬಿಟ್ಟು, ಮೀನುಗಾರಿಕೆ ಮಾಡುತ್ತಿದ್ದೆವು. ಆದರೆ 2 ವರ್ಷಗಳಿಂದ ಕೆರೆಗಳಲ್ಲಿ ನೀರಿಲ್ಲದೇ ಇರುವುದರಿಂದ ಮೀನುಗಾರಿಕೆಗೆ ತೊಂದರೆಯಾಗಿದೆ. ಅದರಲ್ಲಿಯೂ ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾಗದೇ ಇರುವುದರಿಂದ ಹಲವಾರು ಕೆರೆಗಳಲ್ಲಿ ಮೀನುಗಾರಿಕೆ ಮಾಡಲು ಸಾಧ್ಯವಿಲ್ಲದಂತಾಗಿದೆ. ಇನ್ನಾದರೂ ಉತ್ತಮ ಮಳೆಯಾದಲ್ಲಿ ಅನುಕೂಲವಾಗಲಿದೆ.
 ಬಾಳಪ್ಪ ಮಂಡಬಿದ್ದಿ, ಕಲ್ಲೇಶಪ್ಪ ನಾಗೂರ
ಒಳನಾಡು ಮೀನುಗಾರಿಕೆ ನಂಬಿದವರು


-ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement