ಬಸವ ವಸತಿ ಯೋಜನೆ ಫಲಾನುಭವಿ ಆಯ್ಕೆ ಮಾರ್ಗಸೂಚಿ
ಗದಗ: ಬಸವ ವಸತಿ ಯೋಜನೆಯಡಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಸರ್ಕಾರವು ಕೆಲವು ಮಾರ್ಗಸೂಚಿಗಳನ್ನು ನೀಡಿದೆ. ಫಲಾನುಭವಿಯು ಕಡ್ಡಾಯವಾಗಿ ಮಹಿಳೆಯರೇ ಆಗಿರಬೇಕು (ಅಂಗವಿಕಲರು, ಮಾಜಿ ಸೈನಿಕರು, ವಿದುರರು, ಹಿರಿಯ ನಾಗರಿಕರನ್ನು ಹೊರತುಪಡಿಸಿ), ಸ್ವಂತ ನಿವೇಶನ ಹೊಂದಿರಬೇಕು. ರು. 32 ಸಾವಿರ ಒಳಗೆ ವಾರ್ಷಿಕ ಆದಾಯ ಹೊಂದಿದವರಾಗಿರಬೇಕು. ಬೇರೆ ಯಾವುದೇ ಯೋಜನೆ, ಇಲಾಖೆಯಿಂದ ವಸತಿ ಸೌಲಭ್ಯ ಪಡೆದಿರಬಾರದು. ಗ್ರಾಮೀಣ ಪ್ರದೇಶದಲ್ಲಿರಬೇಕು. ಈ ಎಲ್ಲ ಅರ್ಹತೆ ಹೊಂದಿದ ಫಲಾನುಭವಿಗಳನ್ನು ಗ್ರಾಮ ಸಭೆಯಲ್ಲಿ ಆಯ್ಕೆ ಮಾಡಲಾಗುವುದು. ನಂತರ ಆಯ್ಕೆ ಮಾಡಿದ ಫಲಾನುಭವಿಗಳ ಪಟ್ಟಿಯನ್ನು ಜಾಗೃತ ಸಮಿತಿಯ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗುತ್ತದೆ ಎಂದು ಜಿಪಂ ಸಿಇಓ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಆಹ್ವಾನ
ಗದಗ: ಸೆಂಟ್ರಲ್ ಇನ್‌ವೆಸ್ಟಿಗೇಷನ್ ಮತ್ತು ಸೆಕ್ಯೂರಿಟಿ ಸರ್ವಿಸ್ ಲಿಮಿಟೆಡ್ ಬೆಂಗಳೂರು ಇವರು ಗ್ರಾಮೀಣ ಪ್ರದೇಶದ ಬಿಪಿಎಲ್ ಕುಟುಂಬಗಳ ಯುವಕರಿಗೆ ಸೆಕ್ಯೂರಿಟಿ ಗಾರ್ಡ್ ಬಗ್ಗೆ ಉಚಿತವಾಗಿ ತರಬೇತಿ ನೀಡಲಿದ್ದಾರೆ. ಆಸಕ್ತ ಬಿಪಿಎಲ್ ಕುಟುಂಬಗಳ ಯುವಕರು ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸುವವರು 10ನೇ ತರಗತಿ ಪಾಸಾಗಿರಬೇಕು. 18ರಿಂದ 35 ವರ್ಷ ವಯೋವುತಿಯಲ್ಲಿರಬೇಕು. ಅರ್ಜಿಯೊಂದಿಗೆ ವಾಸಸ್ಥಳದ ದೃಢೀಕರಣ, ಬಿಪಿಎಲ್ ಕಾರ್ಡ್ ಪ್ರತಿ, ಜಾತಿ ಪ್ರಮಾಣಪತ್ರ, ವೈದ್ಯಕೀಯ ಪ್ರಮಾಣ ಪತ್ರಗಳನ್ನು ಲಗತ್ತಿಸಿ ಗ್ರಾಮ ಪಂಚಾಯತ್ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ನಾಟಕ ಕಲೆ ಉಳಿಸಿ: ತಳವಾರ
ರೋಣ: ಪಾಶ್ಚಿಮಾತ್ಯ ವ್ಯಾಮೋಹ ಮತ್ತು ದೂರದರ್ಶನಗಳ ಹಾವಳಿಯಿಂದ ನಾಟಕ ಕಲೆಯು ಅವನತಿ ಹೊಂದುತ್ತಿದೆ. ನಾಟಕಗಳು ಸಮಾಜವನ್ನು ಪರಿವರ್ತನೆಗೊಳಿಸುವ ಶಕ್ತಿ ಹೊಂದಿದ್ದು, ನಾಟಕ ಕಲೆ ಉಳಿಸಿ ಬೆಳೆಸುವಲ್ಲಿ ಯುವಕರು ಮುಂದಾಗಬೇಕು ಎಂದು ಗದಗ ಜಿಲ್ಲಾ ಬಿಜೆಪಿ ಎಸ್‌ಟಿ ಮೋರ್ಚಾ ಅಧ್ಯಕ್ಷ ಬಸವಂತಪ್ಪ ತಳವಾರ ಹೇಳಿದರು.
ಅವರು ಈಚೆಗೆ ತಾಲೂಕಿನ ಡ.ಸ. ಹಡಗಲಿ ಗ್ರಾಮದಲ್ಲಿ ಅಮರಲಿಂಗ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದ ದುರ್ಗಾದೇವಿ ನಾಟ್ಯ ಸಂಘ ಹಮ್ಮಿಕೊಂಡ 'ಬಡವ ಬೀಸಿದ ಕೊಡಲಿ' ಎಂಬ ಸಾಮಾಜಿಕ ನಾಟಕ ಉದ್ಘಾಟಿಸಿ ಮಾತನಾಡಿದರು.
ನಾಟಕಗಳಲ್ಲಿ ಬರುವ ಸನ್ನಿವೇಶಗಳು ನೈಜ ಜೀವನದಲ್ಲಿ ಹಾಸು ಹೊಕ್ಕಾಗಿವೆ. ನಾಟಕಗಳು ಸಮಾಜವನ್ನು ತಿದ್ದುವ ಸಾಧನಗಳಾಗಿವೆ ಎಂದರು.
ವಸಂತ ಮೇಟಿ, ಬಿ.ಎಸ್. ಮಾಯಾಚಾರಿ, ಬಿ.ಎಫ್. ಚೇಗರಡ್ಡಿ, ಬಿ.ಎಸ್. ಪಾಟೀಲ, ಆರ್.ಎನ್. ಪಾಟೀಲ, ವಿ.ವ್ಹಿ. ಪಾಟೀಲ ಇದ್ದರು.
ಧರ್ಮದ ಏಳ್ಗೆಗೆ ಪ್ರಯತ್ನಿಸಿ: ಶ್ರೀ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಸೆ. 3
ಧರ್ಮದ ಹಾದಿಯಲ್ಲಿ ನಡೆದರೆ ಕಷ್ಟಗಳನ್ನು ಎದುರಿಸುವ ಧೈರ್ಯ ಹಾಗೂ ಆತ್ಮಸ್ಥೈರ್ಯ ಮನುಷ್ಯನಲ್ಲಿ ತಾನಾಗಿಯೇ ಬೆಳೆಯುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವನ ಸಾಗಿಸಲು ಎಲ್ಲ ಕೆಲಸ ಕಾರ್ಯಗಳನ್ನು ಮಾಡುತ್ತಾನೆ. ಆದರೆ, ಧರ್ಮದ ಬಗ್ಗೆ ಮತ್ತು ಅದರ ಉಳಿವಿಗಾಗಿ ಕಿಂಚಿತ್ತು ಚಿಂತಿಸುತ್ತಿಲ್ಲ ಎಂದು ಹುಕ್ಕೇರಿ ಶ್ರೀಗಳು ವಿಷಾದ ವ್ಯಕ್ತಪಡಿಸಿದರು.
ಅವರು ಈಚೆಗೆ ಪಟ್ಟಣದ ಮೈಸೂರು ಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಪ್ರಭುಲಿಂಗ ಲೀಲೆ ಪ್ರವಚನ ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ಭಕ್ತಾದಿಗಳಿಗೆ ಲಿಂಗ ದೀಕ್ಷೆ ನೀಡಿ ಮಾತನಾಡಿದರು.
ಜಗತ್ತಿನಲ್ಲಿ ಹಣದಿಂದ ಎಲ್ಲವನ್ನು ಕೊಳ್ಳಬಹುದು. ಆದರೆ ಅದೇ ಹಣದಿಂದ ಪ್ರೀತಿ ಮತ್ತು ವಿಶ್ವಾಸವನ್ನು ಪಡೆಯಲು ಸಾಧ್ಯವಿಲ್ಲ. ಪ್ರೀತಿ ಹಾಗೂ ವಿಶ್ವಾಸವನ್ನು ಕೇವಲ ನಿರ್ಮಲ ಮನಸ್ಸಿನಿಂದ ಪಡೆಯಲು ಸಾಧ್ಯವಾಗುತ್ತದೆ. ಯಾರು ಸಮಾಜದಲ್ಲಿ ಧರ್ಮದ ಏಳ್ಗೆಗಾಗಿ ಚಿಂತಿಸುತ್ತಿರುತ್ತಾರೆ ಅವರ ಮನಸ್ಸು ಅತ್ಯಂತ ಶಾಂತ ಹಾಗೂ ನಿರ್ಮಲದಿಂದ ಕೂಡಿರುತ್ತದೆ. ಅದಕ್ಕಾಗಿ ಪ್ರತಿಯೊಬ್ಬರೂ ಧರ್ಮದ ಏಳ್ಗೆ ಹಾಗೂ ಅಭಿವೃದ್ಧಿಗಾಗಿ ಶ್ರಮಿಸಿದಾಗ ಒಂದು ಸುಂದರ ಸಮಾಜವನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸೇಗುಣಸಿಯ ಮಹಾಂತ ದೇವರು, ಡಾ. ಬಿ.ವಿ. ಕಂಬಳ್ಯಾಳ, ಬಿ.ಎಂ. ಸಜ್ಜನ, ಅಶೋಕ ಹೊನವಾಡ, ವೀರೇಶ ನಂದಿಹಾಳ, ಜಗದೀಶ ದುದಗ್ಗಿ, ಸಂತೋಷ ಸಂಕನೂರ, ಅಂದಪ್ಪ ಸಂಕನೂರು, ಬಸವರಾಜ ಕೊಟಗಿ, ವೀರೇಶ ನಿಡಶೇಸಿ, ಮುತ್ತಣ್ಣ ಚಟ್ಟರ, ಹುಚ್ಚಪ್ಪ ಹಾವೇರಿ, ನಿಂಗಪ್ಪ ಹೂಗಾರ ಮುಂತಾದವರು ಉಪಸ್ಥಿತರಿದ್ದರು.