ಭಾರತೀಯ ಹಬ್ಬಗಳು ವಿದೇಶಿಯರಿಗೆ ಮಾದರಿ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಸೆ. 3
ನಮ್ಮ ಪುರಾತನ ಸಂಸ್ಕೃತಿಯನ್ನು ಮೆರೆಯುವ ಹಬ್ಬಗಳು ವಿದೇಶಿ ಸಂಸ್ಕೃತಿಗೆ ಮಾದರಿಯಾಗಿದ್ದು, ಯುವ ಜನಾಂಗ ಇಂತಹ ದೇಶಿಯ ಸಂಸ್ಕೃತಿಯನ್ನು ದೂರಮಾಡಿಕೊಳ್ಳದೇ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕೆಂದು ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದರು.
ಅವರು ಈಚೆಗೆ ಪಟ್ಟಣದ ಗೊಲ್ಲರ ಓಣಿಯಲ್ಲಿ ಶ್ರೀಕೃಷ್ಣ ಯಾದವ ಸಮಾಜದ ವತಿಯಿಂದ ಕೃಷ್ಣ ಜನ್ಮೋತ್ಸವದಂಗವಾಗಿ ನಡೆದ ಮೊಸರು ಮಡಿಕೆ ಒಡೆಯುವ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.
ಪ್ರಪಂಚದಲ್ಲಿ ಅಧರ್ಮವು ಹೆಚ್ಚಾದಾಗ ಸ್ವತಃ ಹರಿಯೇ ಧರ್ಮವನ್ನು ರಕ್ಷಿಸಲು ಧರೆಗೆ ಬರುತ್ತಾನೆಂದು ಗೀತೆಸಾರದ ಮೂಲಕ ತಿಳಿಯುತ್ತೇವೆ. ಅಂತಹ ಭಗವಂತನ ನಾಮ ಸ್ಮರಣೆಯಿಂದ ಮನಸ್ಸಿಗೆ ನೆಮ್ಮದಿ ದೊರಕುತ್ತದೆ. ಹರಿಭಕ್ತಿಯ ಜತೆ ಗುರುಭಕ್ತಿಯೂ ಮುಖ್ಯವೆನ್ನಲು ಕೌರವರ ವಿಕೃತ ಬುದ್ಧಿಗೆ ಸ್ವತಃ ಕೃಷ್ಣಪರಮಾತ್ಮನು ಪಾಂಡವರ ಪರವಾಗಿ ನಿಂತು ಧರ್ಮವನ್ನು ಎತ್ತಿತೋರಿಸಿದ್ದಾನೆ ಎಂದರು. ನಂತರ ಸಮಾಜದ ವತಿಯಿಂದ ಮಾಜಿ ಸಚಿವ ಕಳಕಪ್ಪ ಬಂಡಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಪೂರ್ವದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶ್ರೀಕೃಷ್ಣನ ಭಾವಚಿತ್ರ ಮೆರವಣಿಗೆಯು ಸಂಭ್ರಮದಿಂದ ನೆರವೇರಿತು. ಮೆರವಣಿಗೆಯಲ್ಲಿ ಮುದ್ದು ಮಕ್ಕಳು ಕೃಷ್ಣನ ವೇಷ ಧರಿಸಿಕೊಂಡು ಸಾಗಿದರು.
ನಂತರ ನಡೆದ ಯಾದವ ಸಮಾಜದ ಯುವಕರಿಂದ ಮೊಸರು ತುಂಬಿದ ಮಡಿಕೆ ಒಡೆಯುವ ಕಾರ್ಯಕ್ರಮವು ಭಕ್ತರನ್ನು ಆಕರ್ಷಿಸಿತು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಕಳಕಪ್ಪ ಗುಳೇದ, ಪರಶುರಾಮ ಗೌಡರ, ಹನಮಪ್ಪ ಕುರಿ, ಯಂಕಪ್ಪ ದಿವಾಣದ, ಶರಣಪ್ಪ ದಿವಾಣದ, ಬಾಲರಾಜ ಗೌಡರ, ಮರಿಯಪ್ಪ ವರಗಾ, ಪರಶುರಾಮ ಮ್ಯಾಗೇರಿ, ಹನಮಂತಪ್ಪ ದಿವಾಣದ, ನಾಗರಾಜ ಮ್ಯಾಗೇರಿ, ಮಂಜುನಾಥ ದಿವಾಣದ, ಮಲ್ಲಪ್ಪ ಮ್ಯಾಗೇರಿ, ಜಗದೀಶ ಮೇದ್ನೇರಿ, ಪ್ರಕಾಶ ದಿವಾಣದ ಮುಂತಾದವರು ಉಪಸ್ಥಿತರಿದ್ದರು.