ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮುಂಡರಗಿ ತಾಲೂಕು 371ನೇ ಕಲಂಗೆ ಸೇರಿಸಿ

Vishwanath S
Updated On : 4 Sept 2013, 12:29 pm

ಕನ್ನಡಪ್ರಭ ವಾರ್ತೆ, ಗದಗ, ಸೆ. 3
ನ್ಯಾ. ನಂಜುಂಡಪ್ಪ ವರದಿ ಪ್ರಕಾರ ಹಿಂದುಳಿದ ಪ್ರದೇಶಗಳ ಪಟ್ಟಿಯಲ್ಲಿ 35ನೇ ಸ್ಥಾನದಲ್ಲಿರುವ ಮುಂಡರಗಿ ಮೂಲ ಸೌಕರ್ಯಗಳಿಂದ ವಂಚಿತವಾಗಿ ಬರಗಾಲ, ಬಡತನದಿಂದ ನರಳುತ್ತಿದೆ. ಶೀಘ್ರವೇ ಸರ್ಕಾರ 371ನೇ ಕಲಂ ತಿದ್ದುಪಡಿಯನ್ವಯ ಮುಂಡರಗಿ ಕ್ಷೇತ್ರವನ್ನು ವಿಲೀನ ಮಾಡಲು ಮುಂದಾಗಬೇಕೆಂದು ಯುವ ಸಾಧಕ ರತ್ನ ಪ್ರಶಸ್ತಿ ವಿಜೇತ, ಕಲಾವಿದ ಗವಿಸಿದ್ಧಯ್ಯ ಹಳ್ಳಿಕೇರಿಮಠ ಒತ್ತಾಯಿಸಿದರು.
ಅವರು ಸೋಮವಾರ ನಗರದ ನ್ಯೂ ಎಕ್ಸಲೆಂಟ್ ಸಿಇಟಿ ಕೋಚಿಂಗ್ ಸೆಂಟರ್‌ನಲ್ಲಿ ಕರ್ನಾಟಕ ಇತಿಹಾಸ ಪುನರಾತ್ಥಾನ ಅಕಾಡೆಮಿ ಹಾಗೂ ಜನಧ್ವನಿ ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ಗದಗ ಜಿಲ್ಲೆ ಇವರ ಸಹಯೋಗದಲ್ಲಿ ನಡೆದ ಕೂಗು ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೈದ್ರಾಬಾದ್ ಕರ್ನಾಟಕ ಪ್ರಾಂತ್ಯದಿಂದ ವಿಭಜನೆಗೊಂಡ ಮುಂಡರಗಿ ತಾಲೂಕು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿ ಇಲ್ಲಿಯ ಜನ-ಬೇರೆ ಬೇರೆ ರಾಜ್ಯಗಳಿಗೆ ದುಡಿಯಲು ಹೋಗುತ್ತಾರೆ. ಸ್ವತಂತ್ರ ಸಿಕ್ಕು ಹಲವು ವರ್ಷ ಕಳೆದರೂ ಮುಂಡರಗಿ ಮಾತ್ರ ಬಡವಾಗಿದೆ. ಪ್ರಾಕೃತಿಕ ಸಂಪತ್ತಿನಿಂದ ನೋಡಿದರೆ ಮುಂಡರಗಿ ಕ್ಷೇತ್ರ ಹೈದ್ರಾಬಾದ್-ಕರ್ನಾಟಕದಿಂದ ದೂರಾಗಬಾರದಿತ್ತು. ಹೈದ್ರಾಬಾದ್-ಕರ್ನಾಟಕ ಪ್ರದೇಶಗಳಿಗಿಂತಲೂ ಭಿನ್ನವಾಗಿರುವ ಮುಂಡರಗಿ ತಾಲೂಕು ಶೈಕ್ಷಣಿಕ ಸೌಲಭ್ಯಗಳಿಂದ ಅತಿ ಹಿಂದುಳಿದ ತಾಲೂಕು. ಬಡತನವೇ ಇಲ್ಲಿಯ ಜ್ವಲಂತ ಸಮಸ್ಯೆ. ಸರ್ಕಾರದ ಯಾವುದೇ ಯೋಜನೆಗಳು ಇಲ್ಲಿ ಸಮರ್ಪಕವಾಗಿ ದೊರೆಯದಿರುವುದು ಎದ್ದು ಕಾಣುತ್ತದೆ. ಮೂಲ ಭೂತವಾಗಿ ಬೆಂಬಿಡದೇ ಕಾಡುತ್ತಿರುವ ಬರಗಾಲ ಇಲ್ಲಿನ ಜನರನ್ನು ಸತ್ತು ಬದುಕಿಸುತ್ತದೆ. ಅಷ್ಟೇ ಅಲ್ಲದೇ ಎಷ್ಟೋ ಜನ ಆತ್ಮಹತ್ಯೆಗೆ ಶರಣಾಗಿದ್ದಾರೆ.  
ಕೊಪ್ಪಳ ಹಾಗೂ ಯಲಬುರ್ಗಾ ತಾಲೂಕುಗಳಿಗೆ ಹೊಂದಿಕೊಂಡಿರುವ ಮುಂಡರಗಿ ತಾಲೂಕು ಭೌಗೋಳಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಹೈದ್ರಾಬಾದ್ ಕರ್ನಾಟಕ ಪ್ರದೇಶದೊಂದಿಗೆ ವಿಲೀನಗೊಂಡಿದ್ದು, 371ನೇ ಕಲಂ ಜಾರಿಗೊಳಿಸಲು ಈ ಹಿಂದೆ ಈ ಭಾಗದ ಮಾಜಿ ಸಚಿವ ಎಸ್.ಎಸ್. ಪಾಟೀಲರು ಸರ್ಕಾರದ ಗಮನ ಸೆಳೆಯಲು ಹೋರಾಟಕ್ಕೆ ಮುಂದಾಗಿದ್ದರು. ಈಚೆಗೆ ಕೂಡ ಪ್ರಜ್ಞಾವಂತರ ಒಕ್ಕೂಟ ಹೋರಾಟಕ್ಕೆ ಇಳಿಯಿತು. ಅಲ್ಲದೇ ವಿವಿಧ ಸಂಘ ಸಂಸ್ಥೆಗಳು ಮನವಿ ಸಲ್ಲಿಸಿವೆ. ತೀವ್ರ ಹೋರಾಟಗಳು ನಡೆಯಬೇಕಿದ್ದು, ಕೂಡಲೇ ಸರ್ಕಾರ ಗಮನಹರಿಸುವುದರ ಮುಖಾಂತರ ಮುಂಡರಗಿ ತಾಲೂಕನ್ನು ಕಲಂ 371ನೇ ಕಲಂಗೆ ಸೇರಿಸಿ, ಸಮರ್ಪಕವಾದ ಯೋಜನೆಗಳನ್ನು ರೂಪಿಸಬೇಕೆಂದು ಒತ್ತಾಯಿಸಿದರು. ಅಧ್ಯಕ್ಷತೆ ವಹಿಸಿದ್ದ ಬಸವರಾಜ ಹಳ್ಳಿಕೇರಿ ಮಾತನಾಡಿದರು. ಈ ಸಂದರ್ಭದಲ್ಲಿ ರಂಗನಾಥ ದಾಸರ, ಯಲ್ಲಪ್ಪ ತಳವಾರ, ಬಸನಗೌಡ ಪಾಟೀಲ, ನಜಮಾ, ರಂಗಪ್ಪ ಮದ್ದಿನ, ಸಂತೋಷ ಚಿಟ್ಟಿ, ವೀರೇಶ ಬಾರಕೇರ, ಶ್ರೀಕಾಂತ ಆಲೂರ, ಹನುಮಂತ ಬಜೆಂತ್ರಿ, ನಿಂಗಪ್ಪ ಚಳ್ಳಿಕೇರಿ, ವಿಠ್ಠಲ ಪೂಜಾರ, ರಮೇಶ ಹನುಮಂತಗೌಡ್ರ, ಚಾಂದಸಾಬ ನದಾಫ, ಮಂಜುನಾಥ ಅಳವುಂಡಿ ಮುಂತಾದವರು ಉಪಸ್ಥಿತರಿದ್ದರು. ಜನಪದ ಕಲಾವಿದ ಭೀರೇಶ ಪೂಜಾರ, ಸಿದ್ಧಲಿಂಗಯ್ಯ ವಿರಕ್ತಮಠ ಸ್ವಾಗತಿಸಿದರು. ಶಂಭುನಾಥ ದೊಡ್ಡಮನಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement