ಗದಗ ಜಿಲ್ಲೆಗೆ ಪೋಸ್ಕೋ ಕೈತಪ್ಪಿದ್ದು ದುರದೃಷ್ಟಕರ
ಗದಗ: ಗದಗ ಜಿಲ್ಲೆಯಿಂದ ಪೊಸ್ಕೋ ಕೈತಪ್ಪಿದ್ದು ದುರದೃಷ್ಟಕರ ಸಂಗತಿ. ಇದು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಾಕಷ್ಟು ಪೂರಕ ಅಂಶಗಳನ್ನು ಹೊಂದಿತ್ತು ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ)ಯ ಅಧ್ಯಕ್ಷ ಆರ್. ಶಿವಕುಮಾರ್ ಹೇಳಿದರು. ಅವರು ಬುಧವಾರ ನಗರದ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಕುರಿತು ರಾಜ್ಯ ಸರ್ಕಾರವನ್ನು ಪುನರ್ ಪರಿಶೀಲಿಸುವಂತೆ ಸಂಸ್ಥೆಯ ವತಿಯಿಂದ ಮನವಿ ಸಲ್ಲಿಸಲು ಚಿಂತನೆ ನಡೆಸಲಾಗಿದೆ. ಆದರೆ, ಕೆಲವು ರಾಜಕೀಯ ನಾಯಕರ ಹಿತಾಸಕ್ತಿ ಹಾಗೂ ಕೆಲ ರೈತರ ವಿರೋಧದಿಂದಾಗಿ ಗದಗ ಜಿಲ್ಲೆಯಿಂದ ಪೊಸ್ಕೋದಂತಹ ಬೃಹತ್ ಉದ್ದಿಮೆ ಕೈತಪ್ಪಿ ಹೋಯಿತು. ಗದಗ ಜಿಲ್ಲೆಯಲ್ಲಿ ಪೊಸ್ಕೋ ಸ್ಥಾಪಿತವಾಗಿದ್ದಲ್ಲಿ ಸಾವಿರಾರು ಜನರಿಗೆ ಉದ್ಯೋಗ ದೊರೆಯುತ್ತಿದ್ದವು. ಇದರಿಂದ ಜಿಲ್ಲೆಯು ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತಿತ್ತು ಎಂದು ತಿಳಿಸಿದರು. ಬೆಂಗಳೂರು ಜಿಲ್ಲೆಯು ಸಾಧಿಸಿರುವ ಪ್ರಗತಿಯಂತೆ ಎಲ್ಲ ಜಿಲ್ಲೆಗಳಲ್ಲಿಯೂ ಪ್ರಗತಿ ಸಾಧಿಸಬೇಕಾಗಿದ್ದು, ಆಯಾ ಜಿಲ್ಲೆಗಳಲ್ಲಿರುವ ಯುವ ಉದ್ದಿಮೆದಾರರನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಕಾರ್ಯ ಮಾಡಲಾಗುತ್ತಿದೆ. ನನ್ನ ಅಧಿಕಾರಾವಧಿಯಲ್ಲಿ ಸುಸ್ಥಿರ ಪ್ರಗತಿಪರ ಕಾರ್ಯಕ್ರಮಗಳು, ಶೃಂಗಸಭೆಗಳು ಮತ್ತು ಸಮ್ಮೇಳನಗಳನ್ನು ರಾಜ್ಯದ ವಿವಿಧ ಪ್ರದೇಶಗಳಲ್ಲಿ ಏರ್ಪಡಿಸಲಿದೆ. ಅವುಗಳಲ್ಲಿ ಗುಲ್ಬರ್ಗ, ದಾವಣಗೆರೆ, ಚಾಮರಾಜನಗರ ಮತ್ತು ಉಡುಪಿಯಲ್ಲಿ ಕೈಗಾರಿಕೆ ಅಭಿವೃದ್ಧಿ ಸಮ್ಮೇಳನ, ಗದಗ, ಶಿವಮೊಗ್ಗ, ಮೈಸೂರಿನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮ್ಮೇಳನ, ಮೈಸೂರು, ಮಂಗಳೂರು, ಬೆಳಗಾವಿ ಹಾಗೂ ಶಿವಮೊಗ್ಗದಲ್ಲಿ ಪ್ರವಾಸೋದ್ಯಮ ಸಮ್ಮೇಳನವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.