ದೇಶದ ಸಮಗ್ರ ಅಭಿವೃದ್ಧಿ ಶಿಕ್ಷಣದಿಂದ ಸಾಧ್ಯ
ಕನ್ನಡಪ್ರಭ ವಾರ್ತೆ, ನರಗುಂದ, ಸೆ. 4
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 67 ವರ್ಷವಾದರೂ ಎಲ್ಲರೂ ಶಿಕ್ಷಣ ಕಲಿಯಲು ಸಾಧ್ಯವಾಗಿಲ್ಲ. ದೇಶದ ಸಮಗ್ರ ಅಭಿವೃದ್ಧಿಯಾಗಬೇಕಾದಲ್ಲಿ ಅದು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಬುಧವಾರ ಪಟ್ಟಣದ ಹುಬ್ಬಳ್ಳಿ-ಸೊಲ್ಲಾಪುರ ರಸ್ತೆಗೆ ಹೊಂದಿಕೊಂಡಿರುವ ಫಲಹಾರ ಶಿವಯೋಗೇಶ್ವರ ಶಿಕ್ಷಣ ಸಮಿತಿಯ ಸಂಸ್ಥೆಯ ನೂತನ ವಿಶ್ವೇಶ್ವರಯ್ಯ ಪಾಲಿಟೆಕ್ನಿಕ್ ಕಾಲೇಜ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಪ್ರತಿ ವರ್ಷ ಸರ್ಕಾರ ಶಿಕ್ಷಣಕ್ಕೆ ಸಾವಿರಾರು ಕೋಟಿ ಹಣ ಖರ್ಚು ಮಾಡುತ್ತದೆ. ಆದರೂ ದೇಶದಲ್ಲಿ ಎಲ್ಲರೂ ಶಿಕ್ಷಣವಂತರಾಗಲು ಸಾಧ್ಯವಾಗಿಲ್ಲ. ನಮ್ಮ ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮಠಾಧೀಶರ ಪಾತ್ರ ಬಹಳ ದೊಡ್ಡದು. ಸರ್ಕಾರ ಮಾಡದ ಸಾಧನೆಯನ್ನು ಮಠಾಧೀಶರು ಶಿಕ್ಷಣ ಕ್ಷೇತ್ರದಲ್ಲಿ ಬಡವರಿಗೆ ಉಚಿತವಾಗಿ ಶಿಕ್ಷಣ, ಊಟ, ವಸತಿ ಕೊಟ್ಟು ಶಿಕ್ಷಣ ನೀಡುವ ಕಾರ್ಯ ಮಾಡಿದ್ದಾರೆ. ಇಂದು ದೊಡ್ಡ ಶಿಕ್ಷಣ ಸಂಸ್ಥೆಗಳನ್ನು ತೆರೆದು ಗ್ರಾಮೀಣ ಮಟ್ಟದಲ್ಲಿರುವ ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾಗಿರುವ ಕ್ರಮ ಸ್ವಾಗತಾರ್ಹ ಎಂದರು.
ಹಿಂದೆ ನಾನು ಅಧಿಕಾರ ಇಲ್ಲದಾಗ ಗ್ರಾಮೀಣ ಭಾಗದ ಜನತೆಗೆ ಶುದ್ಧ ನೀರು ಪೂರೈಕೆ ಮಾಡಬೇಕೆನ್ನುವ ಕನಸು ಕಟ್ಟಿಕೊಂಡು ನಮ್ಮ ಹಳೆ ಅಖಂಡ ಧಾರವಾಡ ಜಿಲ್ಲಾ ಮತ್ತು ಬಾಗಲಕೋಟೆ, ಬೆಳಗಾವಿ, ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕ ಪ್ರಾರಂಭಿಸಿದ್ದೇನೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ವರ್ಷ ರಾಜ್ಯದಲ್ಲಿ 1 ಸಾವಿರ ಶುದ್ಧ ನೀರಿನ ಘಟಕ ಮತ್ತು ಬರುವ 3 ವರ್ಷದಲ್ಲಿ 5 ಸಾವಿರ ಶುದ್ಧ ನೀರಿನ ಘಟಕ ಪ್ರಾರಂಭ ಮಾಡಲು ನಮ್ಮ ಸರ್ಕಾರ ಯೋಜನೆ ಹಾಕಿಕೊಂಡಿದೆ.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರು. 1ಕ್ಕೆ ಕೆಜಿ ಅಕ್ಕಿ, ರು. 4 ಹೈನುಗಾರಿಕೆಗೆ ಸಹಾಯಧನ, ಅಲ್ಪಸಂಖ್ಯಾತರಿಗೆ ಸಾಲ ಮನ್ನಾದಂತಹ ಹಲವಾರು ಕಾರ್ಯಕ್ರಮಗಳನ್ನು ಮಾಡಿ ತೋರಿಸಿದೆ. ಮುಂಬರುವ ದಿನಗಳಲ್ಲಿ ಸಮಗ್ರ ರಾಜ್ಯದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. 5 ವರ್ಷದ ಅವಧಿಯಲ್ಲಿ ಈ ಫಲಾಹಾರ ಶಿವಯೋಗಶ್ವರ ಶಿಕ್ಷಣ ಸಂಸ್ಥೆ ಎಂಜಿನಿಯರಿಂಗ್ ಕಾಲೇಜಿಗೆ ಬೇಕಾಗುವ ವ್ಯವಸ್ಥೆ ಮಾಡಿಕೊಂಡರೆ, ಸರ್ಕಾರದ ಮೇಲೆ ಒತ್ತಡ ತಂದು ನರಗುಂದಕ್ಕೆ ಕಾಲೇಜ ಮಂಜೂರು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಪ್ರಾಸ್ತಾವಿಕವಾಗಿ ರಾಮದುರ್ಗ ಶಾಸಕ ಅಶೋಕ ಪಟ್ಟಣ ಮತ್ತು ನರಗುಂದ ಶಾಸಕ ಬಿ.ಆರ್. ಯಾವಗಲ್ಲ ಮಾತನಾಡಿದರು. ಸಾನ್ನಿಧ್ಯವಹಿಸಿದ್ದ ಅವರಾಧಿ ಫಲಹಾರ ಶಿವಯೋಗೀಶ್ವರ ಮಠದ ಮೃತ್ಯಂಜಯ ಶ್ರೀಗಳು ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ನವಲಗುಂದ ಗವಿಮಠದ ಬಸವಲಿಂಗ ಶ್ರೀಗಳು, ಪಂಚಗ್ರಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶ್ರೀಗಳು, ಭೈರನಹಟ್ಟಿ ದೊರಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು, ಪತ್ರೀವನ ಮಠದ ಸಿದ್ಧವೀರ ಶ್ರೀಗಳು, ಬನಹಟ್ಟಿ ರುದ್ರಸ್ವಾಮಿ ಮಠದ ಸೋಲಬಯ್ಯ ಶ್ರೀಗಳು, ಜಿಪಂ ಅಧ್ಯಕ್ಷ ಎಂ.ಎಸ್. ಪಾಟೀಲ, ಸದಸ್ಯೆ ಶಾಂತಾ ದಂಡಿನ, ತಾಪಂ ಅಧ್ಯಕ್ಷ ಗುರಪ್ಪ ಆದಪ್ಪನವರ, ಅಶೋಕ ಪತ್ರಿ, ಮಾರುತಿ ಮೇಟೆ, ಪ್ರದೀಪ ವಾಳದ, ಎ.ಕೆ.ಚವಡಿ, ಎಂ.ಎಂ. ಬಡಿಗೇರ ಇದ್ದರು. ರಮೇಶ ಕಂಬಾರ ಸ್ವಾಗತಿಸಿದರು. ಎಂ.ಎಸ್. ಹಾಲಭಾವಿ ನಿರೂಪಿಸಿದರು. ಪಿ.ಎಲ್. ಮಿಸಾಳೆ ವಂದಿಸಿದರು.