ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನೈಸರ್ಗಿಕ ಸಂಪತ್ತು ಉಳಿಸುವ ಕೈಗಾರಿಕೆ ಬೇಕು

Vishwanath S
Updated On : 5 Sept 2013, 11:04 am

ಕನ್ನಡಪ್ರಭ ವಾರ್ತೆ, ಗದಗ, ಸೆ. 4
ನಮ್ಮ ನೈಸರ್ಗಿಕ ಸಂಪತ್ತು ಉಳಿಸಿ, ನಮ್ಮ ರೈತರು ಉತ್ಪಾದಿಸುವ ವಸ್ತುಗಳ ಆಧಾರದಲ್ಲಿ ನಿರ್ಮಾಣವಾಗುವ ಕೈಗಾರಿಕೆಗಳು ಗದಗ ಜಿಲ್ಲೆಗೆ ಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಬುಧವಾರ ರಾತ್ರಿ ಗದಗ ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ, ಜಿಲ್ಲಾ ಕೈಗಾರಿಕಾ ಇಲಾಖೆ, ನಬಾರ್ಡ್ ಆಶ್ರಯದಲ್ಲಿ ಆಯೋಜಿಸಲಾಗಿದ್ದ 'ಗದಗ ಉತ್ಸವ 2013' ಉದ್ಘಾಟಿಸಿ ಮಾತನಾಡಿದರು. ತಮ್ಮ ಭಾಷಣದುದ್ದಕ್ಕೂ ಪೋಸ್ಕೊ ಕಂಪನಿ ಸ್ಥಾಪನೆಯಾಗಬೇಕು, ಆ ಮೂಲಕ ಜಿಲ್ಲೆಯ ಬೆಳವಣಿಗೆ ಸಹಕಾರಿ ಎನ್ನುವ ವಾದ ಮಂಡಿಸುವವರಿಗೆ ಪರೋಕ್ಷವಾಗಿ ಉತ್ತರ ನೀಡಿದ ಸಚಿವ ಪಾಟೀಲ, ಪೋಸ್ಕೊ ಕಂಪನಿಗೆ ಕಪ್ಪತ್ತಗುಡ್ಡ ಭಾಗದಲ್ಲಿಯೇ ಯಾಕೆ ಭೂಮಿ ಬೇಕಿತ್ತು? ಅದೇ ಗದಗ ಜಿಲ್ಲೆಯ ಬೇರೆಡೆ ಭೂಮಿ ನೀಡಿದರೆ ಅವರೇಕೆ ಕೈಗಾರಿಕೆ ಸ್ಥಾಪಿಸಲಿಲ್ಲ? ಅವರೆಲ್ಲ ನಮ್ಮಲ್ಲಿರುವ ನೈಸರ್ಗಿಕ ಸಂಪತ್ತನ್ನು ಬಳಸಿಕೊಂಡು ತಾವು ಬೆಳೆಯುತ್ತಾರೆ. ಅಂತಹ ಕೈಗಾರಿಕೆಗಳು ನಮಗೆ ಬೇಡ ಎಂದು ಪ್ರತಿಪಾದಿಸಿದರು.
ಬೆಳೆಸುವ ಕೈಗಾರಿಕೆ ಬೇಕು: ಇಂದು ಉದ್ಯಮಿಗಳು ಎಂದರೆ ರಿಯಲ್ ಎಸ್ಟೇಟ್ ದಂಧೆ ಮಾಡುವುದು ಎನ್ನುವಂತಹ ವಾತಾವರಣ ನಿರ್ಮಾಣವಾಗಿದೆ, ಅದು ಖಂಡಿತ ಉದ್ದಿಮೆಯಲ್ಲ. ಅಂತಹ ಬೆಳವಣಿಗೆ ದೇಶದ ಆರ್ಥಿಕ ಬೆಳವಣಿಗೆಗೆ ಅಪಾಯಕಾರಿಯಾಗಿದೆ. ಗದಗ ಜಿಲ್ಲೆಯಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಅವಕಾಶ ನೀಡಿದರೆ ಸಾಕಷ್ಟು ಜನ ಮುಂದೆ ಬರುತ್ತಾರೆ. ಆದರೆ ಅವರೆಲ್ಲಾ ತಮಗೆ ಬೇಕಾದಂತಹ ಕೈಗಾರಿಕೆ ಮಾಡುತ್ತಾರೆ. ನಮ್ಮ ರೈತರ ಭೂಮಿಯನ್ನು ಬೇಕಾಬಿಟ್ಟಿಯಾಗಿ ಬಳಸುತ್ತಾರೆ. ಇದೆಲ್ಲಾ ನಮಗೆ ಬೇಡ, ನಮ್ಮನ್ನು ಬೆಳೆಸುವಂತಹ ಕೈಗಾರಿಕೆಗಳು ನಮಗೆ ಬೇಕು ಎಂದರು.
ಪೂರಕ ವಾತಾವರಣ: ಸಚಿವರ ಭಾಷಣಕ್ಕಿಂತಲೂ ಮೊದಲು ಮಾತನಾಡಿದ ರಾಜ್ಯ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಆರ್. ಶಿವಕುಮಾರ, ಗದಗ ಜಿಲ್ಲೆಯಲ್ಲಿ ಸದ್ಯದಲ್ಲಿಯೇ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡುತ್ತೇವೆ. ಮಡಿಕೇರಿಯಲ್ಲಿ ಇದೇ ರೀತಿ ಮಾಡಿದ ಅನಂತರ ಸಾಕಷ್ಟು ಬೆಳವಣಿಗೆಯಾಗಿದೆ. ಇದಕ್ಕೆ ಸಚಿವರು ಅನುಮತಿ ನೀಡಬೇಕು ಎಂದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಪಾಟೀಲ, ಕೈಗಾರಿಕೆ ಸ್ಥಾಪನೆಗೆ ಯಾರಾದರೂ ಮುಂದೆ ಬರುತ್ತಾರೆ. ಆದರೆ ಅವರ ಅಗತ್ಯಗಳನ್ನು ನಮ್ಮಿಂದ ಪೂರೈಕೆ ಮಾಡಲು ಸಾಧ್ಯವೇ ಎನ್ನುವ ಮೂಲ ಪ್ರಶ್ನೆಯನ್ನು ನಾವೆಲ್ಲಾ ಕೇಳಿಕೊಳ್ಳಬೇಕಿದೆ ಎಂದರು. ಜಿಲ್ಲೆಯಲ್ಲಿ ಕುಡಿವ ನೀರಿಗೆ ಸಮಸ್ಯೆ ಇದೆ ಎನ್ನುವುದನ್ನು ನಾವೆಲ್ಲಾ ಪ್ರಾಂಜಲ ಮನಸ್ಸಿನಿಂದ ಒಪ್ಪಬೇಕಿದೆ. ಇಂತಹ ಸಂದರ್ಭದಲ್ಲಿ ದೊಡ್ಡ ಕೈಗಾರಿಕೆಗಳಿಗೆ ಎಲ್ಲಿಂದ ನೀರು ತರುವುದು ಎನ್ನುವುದರ ಬಗ್ಗೆ ಗಮನ ನೀಡಬೇಕಿದೆ. ಕೈಗಾರಿಕೆ ಸ್ಥಾಪನೆಗೆ ಬೇಕಾಗುವಂತಹ ವಾತಾವರಣ ಮೊದಲು ನಾವೆಲ್ಲಾ ನಿರ್ಮಿಸಬೇಕಿದೆ. ನಮ್ಮಲ್ಲಿನ ಜನರೇ ಸಣ್ಣ ಸಣ್ಣ ಕೈಗಾರಿಕೆ ಸ್ಥಾಪನೆಗೆ ನಾವೆಲ್ಲಾ ವೇದಿಕೆ ಕಲ್ಪಿಸಬೇಕಿದೆ ಎಂದರು. ಉತ್ಸವ ಸಮಿತಿ ಚೇರ್‌ಮನ್ ಸಂಗಮೇಶ ದುಂದೂರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕೈಗಾರಿಕಾ ಅಧಿಕಾರಿ ಆರ್.ಐ. ಕುಂಬಾರ, ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ರಾಜಶೇಖರ ಶಿರೂರ, ರಾಜು ಕುರುಡಗಿ, ಶಿವಪ್ರಕಾಶ ಮಹಾಜನಶೆಟ್ಟರ, ನಬಾರ್ಡ್ ಅಧಿಕಾರಿ ಶರವಣಕುಮಾರ, ದೇವದಾಸ ಕಾಮತ ಹಾಜರಿದ್ದರು. ಇದಕ್ಕೂ ಮೊದಲು ಮಳಿಗೆಗಳನ್ನು ಉದ್ಘಾಟಿಸಿ, ವೀಕ್ಷಿಸಿದರು. ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement