ಯುವಕರು ರಾಯಣ್ಣನ ರಾಷ್ಟ್ರಪ್ರೇಮ ಬೆಳೆಸಿಕೊಳ್ಳಲಿ
ಗದಗ/ಶಿರಹಟ್ಟಿ: ಸಂಗೊಳ್ಳಿ ರಾಯಣ್ಣನ ಹೋರಾಟದ ಮನೋಭಾವ ಹಾಗೂ ರಾಷ್ಟ್ರಪ್ರೇಮವನ್ನು ಯುವಕರು ಬೆಳೆಸಿಕೊಳ್ಳಬೇಕು ಎಂದು ಡಾ. ಸಿದ್ಧಣ್ಣ ಜಕಬಾಳ ಹೇಳಿದರು.
ಅವರು ಶಿರಹಟ್ಟಿ ತಾಲೂಕಿನ ಹುಲ್ಲೂರ ಗ್ರಾಮದ ಅಮೋಗಿಸಿದ್ದರಮಠದಲ್ಲಿ ಬೆಳಗಾವಿಯ ನಂದಗಡದಿಂದ ಆಗಮಿಸಿದ ರಾಯಣ್ಣನ ಅಮರ ಜ್ಯೋತಿ ಬರಮಾಡಿಕೊಂಡು ಮಾತನಾಡಿದರು.
ದೇಶ ಪ್ರೇಮಿ, ಕಿತ್ತೂರು ಸಂಸ್ಥಾನದ ಉಳುವಿಗಾಗಿ ಪ್ರಾಣವನ್ನೇ ಪಣಕಿಟ್ಟು ಹೋರಾಡಿ ಅಮರನಾದ ಸಂಗೊಳ್ಳಿ ರಾಯಣ್ಣನ ಅಮರ ಜ್ಯೋತಿ ಪ್ರಥಮ ಹಾಲುಮತ ಮಹಾಸಭೆ ನಡೆದು 103 ವರ್ಷಗಳ ಐತಿಹಾಸಿಕ ಹಿನ್ನೆಲೆ ಹೊಂದಿರುವ ಹುಲ್ಲೂರ ಗ್ರಾಮದ ಬೀರದೇವರ ದೇವಸ್ಥಾನದಲ್ಲಿ ಸ್ಥಾಪನೆಗೊಂಡಿರುವುದು ನಾಡಿನ ಜನತೆ ರಾಯಣ್ಣನಿಗೆ ನೀಡಿದ ಗೌರವವಾಗಿದೆ. 1832ರಲ್ಲಿ ಲಕ್ಷ್ಮೇಶ್ವರ, ಶಿರಹಟ್ಟಿ, ಗುಡಗೇರಿಯ ಹಾಲುಮತ ಸಮಾಜ ಬಾಂಧವರು ಹುಲ್ಲೂರು ಗ್ರಾಮದಲ್ಲಿ ಅಮೋಗಿಸಿದ್ದರ ಮಠದಲ್ಲಿ ಸಭೆ ಸೇರಿ ಸಮಾಜದ ಬಗ್ಗೆ ಚಿಂತನೆ ನಡೆಸಿ, ಶಿಕ್ಷಣ, ಆರ್ಥಿಕ, ಅಭಿವೃದ್ಧಿ, ಆಚಾರ-ವಿಚಾರ, ಧರ್ಮ ಬೋಧನೆ ಕುರಿತು ಬೆಂಗಳೂರಿನಲ್ಲಿ ಸಮಾಜದ ಕುರುಬರ ಸಂಘವನ್ನು ಸ್ಥಾಪಿಸಲು ಸಿದ್ಧಯ್ಯ ಅಮೋಗಿಮಠ ಅವರ ಅಧ್ಯಕ್ಷತೆಯಲ್ಲಿ ನಿರ್ಣಯ ಕೈಗೊಂಡ ಪರಿಣಾಮ ಬೆಂಗಳೂರಿನಲ್ಲಿ ಕುರುಬರ ಸಂಘ ಬೆಳೆದು ಹೆಮ್ಮರವಾಗಿದೆ ಎಂದರು.
ಜ್ಯೋತಿಯ ಮುಖ್ಯ ಸಂಚಾಲಕ ರವಿ ದಂಡಿನ ಮಾತನಾಡಿ, ಸಂಗೊಳ್ಳಿ ರಾಯಣ್ಣ ದೇಶದಲ್ಲಿಯೇ ಪ್ರಥಮ ಕ್ರಾಂತಿವೀರ ಪುರುಷನಾಗಿದ್ದಾನೆ. ಅವನ ಆದರ್ಶ ಗುಣಗಳನ್ನು ಪಾಲಿಸಿಕೊಂಡು ಹೋಗಬೇಕು ಎಂದರು. ಸಂಚಾಲಕ ಡಾ. ಎಸ್.ಬಿ. ಗೋವಿಂದಪ್ಪನವರು ಮಾತನಾಡಿ, ಸಮಾಜದ ಯುವ ಜನಾಂಗ ಸರ್ವ ಸಮಾಜದೊಂದಿಗೆ ಹೊಂದಿಕೊಂಡು ಸಹಬಾಳ್ವೆಯಿಂದ ಬದುಕಲು ಕರೆ ನೀಡಿದರು.
ಅಧ್ಯಕ್ಷತೆವಹಿಸಿದ್ದ ಮಾಜಿ ಶಾಸಕ ಎಸ್.ಎನ್. ಪಾಟೀಲ ಮಾತನಾಡಿ, ಸರ್ವರೂ ಜ್ಯೋತಿಯ ದರ್ಶನ ಭಾಗ್ಯ ಪಡೆದು ಒಗ್ಗಟ್ಟಿನಿಂದ ಬಾಳಬೇಕು ಎಂದರು. ಅಮೋಗಿಸಿದ್ಧರ ಸಂಸ್ಥಾನ ಮಠದ ಶ್ರೀಗಳಾದ ಪಂಚಯ್ಯ ಅಮೋಗಿಮಠ, ಸಿದ್ದಯ್ಯ ಅಮೋಗಿಮಠ, ಶಿವಮೂರ್ತಿ ಅಮೋಗಿಮಠ, ಪಂಪಯ್ಯ ಅಮೋಗಿಮಠ ಹಾಗೂ ಗುರುನಾತಯ್ಯ ಅಮೋಗಿಮಠ ಸಾನ್ನಿಧ್ಯ ವಹಿಸಿದ್ದರು.
ಸಮಾಜದ ಹಿರಿಯ ರಾಮಣ್ಣ ಡಂಬಳ, ತಿಪ್ಪಣ್ಣ ಸಂಶಿ, ಬಸಣ್ಣ ಗಾಣಗೇರ, ಮಲ್ಲಪ್ಪಾ ಕರಕಣ್ಣವರ, ಯೋಗಿರೆಡ್ಡಿ, ನಿಂಗಪ್ಪ ಬನ್ನಿ, ದೇವಪ್ಪಾ ಮತ್ತೂರ, ರಾಮಣ್ಣ ಉಳ್ಳಟ್ಟಿ ಹಾಗೂ ಗ್ರಾಮದ ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು. ಸುರೇಶ ಗೌಳಿ ಸ್ವಾಗತಿಸಿದರು. ಮಹೇಶ ಹಾರೋಗೇರಿ ನಿರೂಪಿಸಿದರು.