ಮಳೆಗೆ ಕೊಚ್ಚಿಹೋದ ರಸ್ತೆ, ಸೇತುವೆ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ, ಗದಗ, ಸೆ. 5
2-3 ದಿನಗಳ ಹಿಂದೆ ಸುರಿದ ಅಲ್ಪ ಮಳೆಯಿಂದಾಗಿ ಗ್ರಾಮದಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪೂರ್ಣವಾಗಿ ಕಿತ್ತು ಹೋಗಿವೆ.
ತಾಲೂಕಿನ ಕೋಟುಮಚಗಿ-ಚುರ್ಚಿಹಾಳ, ಹರ್ಲಾಪುರ-ಕೋಟುಮಚಗಿ ರಸ್ತೆಗಳ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದು, ಇಲ್ಲಿ ನಿತ್ಯ ಸಂಚರಿಸುವ ರೈತರಿಗೆ, ಸಾರ್ವಜನಿಕರಿಗೆ ತೊಂದರೆಯಾಗಿದ್ದು, ಅವರು ರಸ್ತೆಗಳ ಅವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಸರ್ಕಾರವು ಗ್ರಾಮೀಣ ರಸ್ತೆಗಳು, ರೈತರ ಹೊಲಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ದುರಸ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆಯಾದರೂ ಅದು ಸಮರ್ಪಕವಾಗಿ ಇಲ್ಲಿಯವರೆಗೂ ಜಾರಿಗೆ ಬಂದಂತೆ ಕಾಣುತ್ತಿಲ್ಲ. 2012-13ನೇ ಸಾಲಿನಲ್ಲಿ ನಿರ್ಮಾಣ ಮಾಡಲಾಗಿದ್ದ ಕೋಟುಮಚಗಿ-ಚುರ್ಚಿಹಾಳ ರಸ್ತೆ ಹಾಗೂ ಸೇತುವೆ ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದೆ. ಈ ರಸ್ತೆಯು ಸಂಪೂರ್ಣ ಕಳಪೆ ಕಾಮಗಾರಿಯಿಂದ ಕೂಡಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ರು. 8.94 ಕೋಟಿ ಕಾಮಗಾರಿ: ಚುರ್ಚಿಹಾಳ-ಕೋಟುಮಚಗಿವರೆಗೆ ಸುಮಾರು 27 ಕಿ.ಮೀ. ರಸ್ತೆಯನ್ನು ಕಳೆದ 2012-13ನೇ ಸಾಲಿನ ಗ್ರಾಮ ಸಡಕ್ ಯೋಜನೆಯಲ್ಲಿ ರು. 8.94 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ ರಸ್ತೆಯು ಸಂಪೂರ್ಣ ಕಳಪೆ ಕಾಮಗಾರಿಯಿಂದ ಕೂಡಿದೆ ಎಂಬುದಕ್ಕೆ ಈಚೆಗೆ ಸುರಿದ ಮಳೆಗೆ ರಸ್ತೆ ಸೇರಿದಂತೆ ಸೇತುವೆಗಳು ಕಿತ್ತುಕೊಂಡು ಹೋಗಿ ಸಾರ್ವಜನಿಕರು ಸಂಚರಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ನಾಲ್ವರ ಬಲಿ ತೆಗೆದುಕೊಂಡ ಪರ್ಸಿ: ಕೋಟುಮಚಗಿ-ತಿಮ್ಮಾಪುರ ರಸ್ತೆಯ ಪರಿಸ್ಥಿತಿಯು ಕೂಡ ಭಿನ್ನವಾಗಿಲ್ಲ. ಈ ರಸ್ತೆಯ ಮಧ್ಯದಲ್ಲಿ ನಿರ್ಮಾಣ ಮಾಡಲಾಗಿರುವ ಪರ್ಸಿಯು ಅದೆಷ್ಟು ಬಾರಿ ಕಿತ್ತು ಹೋಗಿದೆ ಎಂಬುದು ಲೆಕ್ಕಕ್ಕೆ ಇಲ್ಲ. ಕೋಟುಮಚಗಿ ಗ್ರಾಮದ ಕೂಗಳತೆಯ ದೂರದಲ್ಲಿರುವ ಈ ಹಳ್ಳಕ್ಕೆ ಸಣ್ಣ ಪ್ರಮಾಣದ ಪರ್ಸಿ ನಿರ್ಮಾಣ ಮಾಡಲಾಗಿದ್ದು, ಈ ಹಳ್ಳಕ್ಕೆ ನರೇಗಲ್ಲ ಪಟ್ಟಣದ ಸಾವಿರಾರು ಎಕರೆ ಜಮೀನಿನ ನೀರು ಈ ರಸ್ತೆಯ ಮೂಲಕ ಹಾದು ಹೋಗುತ್ತದೆ.
ಸಣ್ಣ ಮಳೆಯಾದರೆ ಸಾಕು ಈ ಹಳ್ಳವು ತುಂಬಿ ಹರಿಯುತ್ತದೆ. ಕಳೆದ ಕೆಲವು ವರ್ಷಗಳ ಹಿಂದೆ ಇದೇ ಮಾರ್ಗದ ಮೂಲಕ ಹೊಲಕ್ಕೆ ತೆರಳಿ ಬರುತ್ತಿದ್ದ ಕೋಟುಮಚಗಿ ಗ್ರಾಮದ 4 ಜನ ನೀರಿನ ರಭಸಕ್ಕೆ ಸಿಕ್ಕು ಪ್ರಾಣ ತೆತ್ತ ಉದಾಹರಣೆಯಿದೆ. ಆದರೆ, ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಳ್ಳದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಹಲವು ಬಾರಿ ಪರ್ಸಿ ನಿರ್ಮಾಣ
ಕೋಟುಮಚಗಿ-ತಿಮ್ಮಾಪುರ ರಸ್ತೆ ಮಧ್ಯೆ ಬರುವ ಈ ರಸ್ತೆಗೆ ಹಲವು ಬಾರಿ ಪರ್ಸಿ (ಕೆಳ ಸೇತುವೆ) ಸಣ್ಣ ಸಣ್ಣ ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ನಿರ್ಮಾಣದ ನಂತರ ಒಮ್ಮೆ ಮಳೆಯಾದರೆ ಸಾಕು ಇಲ್ಲಿ ಪರ್ಸಿಯ ಗುರುತೇ ಇರುವುದಿಲ್ಲ. ಅಷ್ಟರ ಮಟ್ಟಿಗೆ ಈ ಪರ್ಸಿ, ಸೇತುವೆಗಳು ಕಿತ್ತುಕೊಂಡು ಹೋಗಿವೆ. ಸಂಬಂಧಿಸಿದ ಅಧಿಕಾರಿಗಳು ಈ ಹಳ್ಳಕ್ಕೆ ಬರುವ ನೀರಿನ ಪ್ರಮಾಣವನ್ನು ಅರಿತು ದೊಡ್ಡ ಸೇತುವೆ ನಿರ್ಮಾಣ ಮಾಡದೇ ಕೇವಲ ಕಾಟಾಚಾರಕ್ಕೆಂಬಂತೆ ಪರ್ಸಿ ನಿರ್ಮಾಣ ಮಾಡಿ ಕೈತೊಳೆದುಕೊಳ್ಳುತ್ತಿದ್ದಾರೆ. ಆದರೆ, ಮಳೆಯಾದಾಗ ಇಲ್ಲಿ ರೈತರು ತೊಂದರೆ ಎದುರಿಸುವುದು ಇಲ್ಲಿಯವರೆಗೂ ತಪ್ಪಿಲ್ಲ. ಈ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಇಲ್ಲಿನ ರೈತರ ಸಮಸ್ಯೆ ನೀಗಿಸಬೇಕಿದೆ.
2012-13ನೇ ಸಾಲಿನಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಅಡಿಯಲ್ಲಿ 27 ಕಿ.ಮೀ. ವರೆಗೆ ನಿರ್ಮಾಣವಾಗಿರುವ ಚುರ್ಚಿಹಾಳ-ಕೋಟುಮಚಗಿ ಮಾರ್ಗ ಮಧ್ಯೆದ ರಸ್ತೆಯು ಹಾಗೂ ಸೇತುವೆಯು ಈಚೆಗೆ ಸುರಿದ ಮಳೆಯಿಂದಾಗಿ ಕಿತ್ತುಹೋಗಿದೆ. ಈ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಶೀಘ್ರದಲ್ಲಿಯೇ ಈ ರಸ್ತೆಗಳ ದುರಸ್ತಿಕಾರ್ಯ ಕೈಗೊಳ್ಳಲಾಗುವುದು.
-ಆರ್.ಜಿ. ಪಾಟೀಲ, (ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆ ಸಹಾಯಕ ಅಭಿಯಂತರ)
ಕೋಟುಮಚಗಿ-ಚುರ್ಚಿಹಾಳ ರಸ್ತೆಯು ಸಂಪೂರ್ಣವಾಗಿ ಕಳಪೆ ಕಾಮಗಾರಿಯಿಂದ ಕೂಡಿದೆ. 2-3 ದಿನಗಳ ಹಿಂದೆ ಸುರಿದ ಅಲ್ಪ ಪ್ರಮಾಣದ ಮಳೆಗೆ ರಸ್ತೆ ಹಾಗೂ ಸೇತುವೆಗಳು ಸಂಪೂರ್ಣವಾಗಿ ಕಿತ್ತು ಹೋಗಿವೆ. ಈ ಕುರಿತು ಜಿಲ್ಲಾಡಳಿತ ಸಂಬಂಧಿಸಿದ ಅಧಿಕಾರಿಗಳ ಹಾಗೂ ರಸ್ತೆ ಕಾಮಗಾರಿ ಕೈಗೊಂಡ ಗುತ್ತಿಗೆದಾರನ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಗ್ರಾಮಸ್ಥರು ಹಾಗೂ ರೈತರೊಂದಿಗೆ ಸೇರಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.
-ವಿದ್ಯಾಧರ ದೊಡ್ಡಮನಿ, ಕೋಟುಮಚಗಿ ಗ್ರಾಪಂನ ಮಾಜಿ ಅಧ್ಯಕ್ಷ
- ಶಿವಾಜಿರಾವ್ ಕುಲಕರ್ಣಿ, ಪಿಎಲ್‌ಡಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ