ಬಯಲು ಮಲ ವಿಸರ್ಜನೆ ತೊಲಗಲಿ
ಕನ್ನಡಪ್ರಭ ವಾರ್ತೆ, ರೋಣ, ಸೆ. 6
ಗ್ರಾಮೀಣ ಪ್ರದೇಶದಲ್ಲಿ ರೂಢಿಯಲ್ಲಿರುವ ಬಯಲು ಮಲ ವಿಸರ್ಜನೆಯನ್ನು ತೊಡೆದು ಹಾಕಲು ಹಾಗೂ ಹಳ್ಳಿಗಳಲ್ಲಿ ಸ್ವಚ್ಛ, ಸುಂದರ, ನಿರ್ಮಲ ಪರಿಸರವನ್ನು ರೂಪಿಸಲು ಅನುಷ್ಠಾನಗೊಂಡ ನಿರ್ಮಲ ಭಾರತ ಅಭಿಯಾನ ಯಶಸ್ವಿಗೊಳಿಸಲು ಪ್ರತಿ ಮನೆಗೊಂದು ಶೌಚಾಲಯ ಕಡ್ಡಾಯವಾಗಿ ನಿರ್ಮಿಸಿಕೊಳ್ಳಿ ಎಂದು ಶಾಸಕ ಜಿ.ಎಸ್.ಪಾಟೀಲ ಹೇಳಿದರು.
ಅವರು ಗುರುವಾರ ಸಂಜೆ ಪಟ್ಟಣದ ಅಂದಾನಪ್ಪ ದೊಡ್ಡಮೇಟಿ ಸಭಾಭವನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ಜಿಪಂ ಆಶ್ರಯದಲ್ಲಿ ಜರುಗಿದ ನಿರ್ಮಲ ಭಾರತ ಅಭಿಯಾನ ಶೀಘ್ರ ಅನುಷ್ಠಾನ ತಾಲೂಕು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಜನತೆ ನಾನಾ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇದಕ್ಕೆ ಅವರು ವಾಸಿಸುವ ಸುತ್ತಲಿನ ಪರಿಸರ ಸ್ವಚ್ಛ ಇಲ್ಲದಿರುವುದು ಮುಖ್ಯ ಕಾರಣವಾಗಿದೆ. ಆದ್ದರಿಂದ ಗ್ರಾಮೀಣ ಪ್ರದೇಶಗಳ ಎಲ್ಲ ಕುಟುಂಬಗಳಲ್ಲಿ, ಶಾಲೆಗಳಲ್ಲಿ, ಅಂಗನವಾಡಿಗಳಲ್ಲಿ ಶೌಚಾಲಯಗಳಿರಬೇಕು. ಮಲ-ಮೂತ್ರ ವಿಸರ್ಜನೆಗಳಿಗೆ ಶೌಚಾಲಯಗಳನ್ನೇ ಬಳಸಬೇಕು.
ಪ್ರತಿ ಮನೆಗೊಂದು ಕಡ್ಡಾಯವಾಗಿ ಶೌಚಾಲಯವನ್ನು ನಿರ್ಮಿಸಿಕೊಳ್ಳಲು ಸರ್ಕಾರ ಖಾತ್ರಿ ಯೋಜನೆ ಮೂಲಕ ರು. 4700 ಮತ್ತು ನಿರ್ಮಲ ಭಾರತ ಅಭಿಯಾನ ಯೋಜನೆ ಮೂಲಕ ರು. 4500 ಸೇರಿದಂತೆ ಒಟ್ಟು ರು. 10 ಸಾವಿರ ಪ್ರೋತ್ಸಾಹ ಧನ ಲಭ್ಯವಾಗಲಿದೆ. ಇದರ ಸದುಪಯೋಗವನ್ನು ಪಡೆದು ಶೌಚಾಲಯಗಳನ್ನು ನಿರ್ಮಿಸಿಕೊಳ್ಳಬೇಕು.
ಎಲ್ಲ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲು ರು. 3500 ಹಾಗೂ ರು. 8000 ಅನುದಾನ ಒದಗಿಸಲಾಗುವುದು. ಕಸ ಹಾಗೂ ಕೊಳಕು ಪರಿಸರದಿಂದ ಹಳ್ಳಿಗಳನ್ನು ಮುಕ್ತಗೊಳಿಸಲು ಗ್ರಾಮಗಳ ಘನ ಹಾಗೂ ದ್ರವ ತ್ಯಾಜ್ಯಗಳ ನಿರ್ವಹಣೆ ಗ್ರಾಮ ಪಂಚಾಯಿತಿಯ ಕುಟುಂಬಗಳ ಸಂಖ್ಯೆಗೆ ಅನುಗುಣವಾಗಿ ರು. 7 ಲಕ್ಷ ಅನುದಾನ ಒದಗಿಸಲಾಗುವುದು. ನಿರ್ಮಲ ಭಾರತ ಅಭಿಯಾನವು ಒಂದು ಮಹತ್ವ ಪೂರ್ಣವಾದ ಕಾರ್ಯಕ್ರಮವಾಗಿದೆ. ಇದರ ಸದುಪಯೋಗವನ್ನು ಗ್ರಾಮೀಣ ಪ್ರದೇಶದ ಕುಟುಂಬಗಳು ಪಡೆದುಕೊಳ್ಳಬೇಕು ಎಂದರು. ಶಾಸಕ ಬಿ.ಆರ್. ಯಾವಗಲ್ ಮಾತನಾಡಿ, ಹಳ್ಳಿಗಳ ಸ್ವಚ್ಛತೆಯಾಗಬೇಕಾದಲ್ಲಿ ಜನತೆ ಮೊದಲು ಆರೋಗ್ಯ ರಕ್ಷಣೆ ಕುರಿತು ಜಾಗೃತರಾಗಬೇಕು. ಸರ್ಕಾರ ಶೌಚಾಲಯಗಳನ್ನು ಸುಸಜ್ಜಿತವಾಗಿ ನಿರ್ಮಿಸಿಕೊಳ್ಳಲು ರು. 10 ಸಾವಿರಗಳ ವರೆಗೆ ಪ್ರೋತ್ಸಾಹ ಧನವನ್ನು ಒದಗಿಸಿದೆ. ನಿರ್ಮಲ ಭಾರತ ಅಭಿಯಾನ ಕಾರ್ಯಕ್ರಮ ಯಶಸ್ವಿಯಾಗಲು ಇದೊಂದು ಚಳವಳಿಯಾಗಿ ಪರಿವರ್ತನೆಯಾಗಬೇಕು ಎಂದರು.
ಜಿಪಂ ಸದಸ್ಯ ಡಾ. ಆರ್.ಬಿ. ಬಸವರಡ್ಡೇರ ಹಾಗೂ ಜಿಪಂ ಸಿಇಓ ವೀರಣ್ಣ ತುರಮುರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷೆ ಲಲಿತಾ ಪೂಜಾರ, ಉಪಾಧ್ಯಕ್ಷೆ ರುದ್ರವ್ವ ತಾಳಿ, ಜಿಪಂ ಉಪ ಕಾರ್ಯದರ್ಶಿ ಷಡಕ್ಷರಪ್ಪ, ಯೋಜನಾಧಿಕಾರಿ ದಿನೇಶ, ತಾಪಂ ಪ್ರಭಾರಿ ಇಒ ಎನ್. ನಾರಾಯಣ, ದಶರಥ ಗಾಣಿಗೇರ, ರೇಣುಕಾ ಹಟ್ಟಿಮನಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಅರಳಿಕಟ್ಟಿ ನಿರೂಪಿಸಿ, ವಂದಿಸಿದರು.