ಲೇಖಕರ ವಿರುದ್ಧ ಕ್ರಮಕ್ಕಾಗಿ ಧರಣಿ
ಕನ್ನಡಪ್ರಭ ವಾರ್ತೆ, ಗದಗ, ಸೆ. 6
ರಾಜ್ಯ ಮಟ್ಟದ ಪತ್ರಿಕೆಯೊಂದರಲ್ಲಿ ಜಿಲ್ಲೆಯಲ್ಲಿ ಪ್ರಸಿದ್ಧಿ ಪಡೆದಿರುವ ಈ ಭಾಗದ ದೇವಿಯ ಕುರಿತಾಗಿ ಪ್ರಕಟಗೊಂಡಿರುವ ಲೇಖನದಿಂದಾಗಿ ಭಕ್ತಾದಿಗಳಿಗೆ ತುಂಬಾ ನೋವಾಗಿದ್ದು, ಲೇಖಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶುಕ್ರವಾರ ದುರ್ಗಾದೇವಿ ಸೇವಾ ಸದ್ಭಕ್ತ ಮಂಡಳಿ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ದೇವಸ್ಥಾನಗಳ ಕುರಿತು ಭಕ್ತಿ, ಭಾವಗಳ ಕುರಿತು ಪ್ರಕಟಗೊಳ್ಳುವ ಲೇಖನಗಳಿಗೆ ಸ್ವಾಗತವಿದೆ. ಆದರೆ ಒಂದು ಲೇಖನದಿಂದಾಗಿ ಹಲವಾರು ಧಾರ್ಮಿಕ ಮನಸ್ಥಿತಿಗಳಿಗೆ ನೋವಾಗುವಂತಹ ಲೇಖನಗಳು ಹಾಗೂ ದೇವಿಯ ಭಕ್ತಾದಿಗಳ ಕುರಿತು ಪ್ರಸ್ತಾಪಿಸಿರುವುದು ಸರಿಯಾದ ಕ್ರಮವಲ್ಲ. ಸಂವಿಧಾನದ ಅನುಚ್ಛೇದದಲ್ಲಿ ಹೇಳಿರುವಂತೆ ಪ್ರತಿಯೊಬ್ಬ ಭಾರತೀಯನಿಗೆ ತನ್ನ ಇಷ್ಟವಾದ ದೇವರಿಗೆ ಪೂಜಾ ಕೈಂಕರ್ಯ ನೆರವೇರಿಸುವ ಹಕ್ಕನ್ನು ನೀಡಿರುತ್ತದೆ. ಆದರೆ, ದೇವಿಯ ಸದ್ಭಕ್ತರು ಯಾವುದೇ ತಪ್ಪು ಹಾಗೂ ಕಾನೂನು ಬಾಹಿರ ಕೆಲಸಗಳನ್ನು ಈವರೆಗೂ ಮಾಡಿರುವುದಿಲ್ಲ.
ದೇವಿಯ ಕುರಿತು ಬರೆಯುವ ಮೂಲಕ ಲೇಖಕರು ತಮ್ಮ ಉದ್ಧಟತನವನ್ನು ಮೆರೆದಿದ್ದಾರೆ. ತಮ್ಮ ಲೇಖನದ ಮೂಲಕ ದೇವಿಯ ಘನತೆಗೆ ಕುಂದು ತರುವಂತಹ ಕೆಲಸ ಮಾಡಿರುತ್ತಾರೆ. ಹಾಗಾಗಿ ಲೇಖಕರ ಮೇಲೆ ಸರ್ಕಾರವೇ ಪ್ರಕರಣ ದಾಖಲಿಸಿ, ಸೂಕ್ತ ಕ್ರಮಕ್ಕೆ ಮುಂದಾಗಬೇಕು. ಇಲ್ಲವಾದಲ್ಲಿ ಸಂಘದ ಪದಾಧಿಕಾರಿಗಳು, ಇತರೇ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ನಗರದ ಗಾಂಧಿವೃತ್ತದಲ್ಲಿ ಪ್ರತಿಭಟನಾಕಾರರು ಲೇಖಕರ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸಂಘದ ಗೌರವಾಧ್ಯಕ್ಷ ರಾಜು ಮಾಂತೇಶ ಚೌವ್ಹಾಣ, ಅಧ್ಯಕ್ಷ ಚಂದ್ರು ಚೌವ್ಹಾಣ, ಅಣ್ಣಪ್ಪ ಪವಾರ, ಪರಶುರಾಮ ಕಾಳೆ, ದಾವಲ್ ಪವಾರ, ಚಂದ್ರಶೇಖರ ದೊಡ್ಡಮನಿ, ಚಂದ್ರು ದೊಡ್ಡಮನಿ, ಸುರೇಶ ದೊಡ್ಡಮನಿ, ಗಂಗಪ್ಪ ಹಳ್ಳಿಗುಡಿ, ರಮೇಶ ಚೌವ್ಹಾಣ, ಬಾಬು ಕಾಳೆ, ಜಮನವ್ವ ದೊಡ್ಡಮನಿ, ರೇಣುಕಾ ಹಳ್ಳಿಗುಡಿ, ಶಾರವ್ವ ದೊಡ್ಡಮನಿ ಮುಂತಾದವರು ಪಾಲ್ಗೊಂಡಿದ್ದರು.