ಶಾಂತಿಯುತ ಚೌತಿ ಆಚರಿಸಿ
ಕನ್ನಡಪ್ರಭ ವಾರ್ತೆ, ಗದಗ, ಸೆ. 6
ಜಿಲ್ಲೆಯಾದ್ಯಂತ ಶಾಂತಿಯುತ ಗಣೇಶೋತ್ಸವ ಆಚರಣೆಗೆ ಜಿಲ್ಲೆಯ ಎಲ್ಲ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ಗಮನ ನೀಡಬೇಕು ಎಂದು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಹೇಳಿದರು.
ಶುಕ್ರವಾರ ರಾತ್ರಿ ನಗರದ ಅಂಬಾಭವಾನಿ ದೇವಸ್ಥಾನದ ಸಭಾಭವನದಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕ ಗಜಾನನೋತ್ಸವ ಮಹಾಮಂಡಳಿ ಇವರ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಗಣೇಶೋತ್ಸವ ಶಾಂತಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಗಣೇಶೋತ್ಸವದಲ್ಲಿ ಅತಿಯಾದ ಧ್ವನಿವರ್ಧಕಗಳ ಬಳಕೆಯಿಂದ ಶಬ್ದ ಮಾಲಿನ್ಯವಾಗುತ್ತಿದ್ದು ಕಡಿಮೆ ಧ್ವನಿ ವರ್ಧಕಗಳನ್ನು ಹೊರಡಿಸುವ ಪರಿಕರಗಳನ್ನು ಬಳಸಬೇಕು. ವಿದ್ಯುತ್ ಅವಘಡಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಹಾಗೂ ಪರಿಸರ ಸ್ನೇಹಿ ವಿಗ್ರಹಗಳನ್ನು ಸ್ಥಾಪಿಸಲು ಪ್ರಥಮ ಆದ್ಯತೆ ನೀಡಬೇಕು. ಗಜಾನನ ವಿಸರ್ಜನೆಗೆ ಪ್ರತಿ ವರ್ಷದ ಮಾದರಿಯಲ್ಲಿಯೇ ಪ್ರಸಕ್ತ ಸಾಲಿನಲ್ಲಿಯೂ ತಾತ್ಕಾಲಿಕ ವ್ಯವಸ್ಥೆಯನ್ನು ಜಿಲ್ಲಾಡಳಿತ ಕಲ್ಪಿಸಲಿದೆ. ಮುಂಬರುವ ದಿನಗಳಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.
ಎಸ್ಪಿ ಡಾ. ಎಸ್.ಡಿ. ಶರಣಪ್ಪ ಮಾತನಾಡಿ, ಜಿಲ್ಲೆಯಲ್ಲಿ ಇಲಾಖೆಯ ಮಾಹಿತಿ ಆಧಾರದಲ್ಲಿ ಗದಗ ತಾಲೂಕಿನಲ್ಲಿ 384, ಶಿರಹಟ್ಟಿ 214, ರೋಣ 209, ಮುಂಡರಗಿ 86, ನರಗುಂದ 79 ಒಟ್ಟು ಜಿಲ್ಲೆಯಲ್ಲಿ 972 ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೊಳ್ಳಲಿದ್ದು, ಇದಕ್ಕಾಗಿ 950 ಪೊಲೀಸ್ ಸಿಬ್ಬಂದಿ, 400 ಗೃಹ ರಕ್ಷಕ ದಳದ ಸಿಬ್ಬಂದಿ ಹಾಗೂ 4 ಕೆಎಸ್‌ಆರ್‌ಪಿ ಹಾಗೂ 10 ಜಿಲ್ಲಾ ಕಾಯ್ದಿಟ್ಟ ತುಕಡಿಗಳನ್ನು ನೇಮಿಸಲಾಗಿದೆ ಎಂದು ಹೇಳಿದರು.
ಗಣೇಶೋತ್ಸವ ಮಂಡಳಿಗಳು ಮೂರ್ತಿ ಪ್ರತಿಷ್ಠಾಪನೆ ಮಾಡಿರುವ ಸ್ಥಳಗಳಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಕೆ ಹಾಗೂ ಗುಂಪು ವಿಮೆ ಸೌಲಭ್ಯಗಳನ್ನು ಅಳವಡಿಸಬೇಕು. ಇದರಿಂದ ಮಹಾಮಂಡಳಿಗಳಿಗೆ ಸಾಕಷ್ಟು ಅನುಕೂಲವಾಗಲಿದ್ದು, ಯಾವುದೇ ಅಹಿತಕರ ಘಟನಗೆಳು ನಡೆದಲ್ಲಿ ತಕ್ಷಣದಲ್ಲಿಯೇ ಮಾಹಿತಿ ಸಂಗ್ರಹಿಸಲು ಸಹಕಾರಿಯಾಗುತ್ತದೆ. ಈಗಾಗಲೇ ಎಲ್ಲಾ ಗಣೇಶೋತ್ಸವ ಮಂಡಳಿಗಳಿಗೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಹೊರಡಿಸಿರುವ 18 ಸೂತ್ರ ಕರಪತ್ರಗಳನ್ನು ವಿತರಿಸಲಾಗಿದ್ದು, ಅವುಗಳ ಆಧಾರದಲ್ಲಿ ಪ್ರತಿಯೊಬ್ಬರೂ ನಡೆದುಕೊಳ್ಳಬೇಕು. ಯಾವುದೇ ಘಟನೆಗಳು ಜರುಗಿದಲ್ಲಿ ತಕ್ಷಣವೇ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ಮೂರ್ತಿ ವಿಜರ್ಸನೆಯನ್ನು 12 ಗಂಟೆಯೊಳಗಾಗಿ ಮಾಡುವುದನ್ನು ಕಡ್ಡಾಯಗೊಳಿಸಲಾಗಿದ್ದು, ಇದನ್ನು ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಮುಖ್ಯವಾಗಿ ಪ್ರಸಕ್ತ ಸಾಲಿನಿಂದ ಶಾಂತಿಯುತ ಗಣೇಶೋತ್ಸವ ಆಚರಣೆ ಹಾಗೂ ವಿಸರ್ಜನೆಯನ್ನು ನೆರವೇರಿಸಿದ ಮಂಡಳಿಗೆ ಇಲಾಖೆಯ ವತಿಯಿಂದಲೇ ಬಹುಮಾನ ನೀಡಲು ತೀರ್ಮಾನಿಸಲಾಗಿದೆ ಎಂದರು. ಸಭೆಯನ್ನು ಉದ್ದೇಶಿಸಿ ಹಿರಿಯರಾದ ಬಸಣ್ಣ ಮಲ್ಲಾಡದ, ವಾಸಣ್ಣ ಹೆಬಸೂರ, ರಾಜು ಖಾನಪ್ಪನವರ, ಲಿಂಗರಾಜ ಬಗಲಿ ಮುಂತಾದವರು ಮಾತನಾಡಿದರು.
ರವಿ ಶಿದ್ಲಿಂಗ, ಅಜಿತ್ ಹೊಂಬಾಳಿ, ಕಿಶನ್ ಮೆರವಾಡೆ, ಸಂತೋಷ ಮೇಲಗಿರಿ ಮುಂತಾದವರು ವೇದಿಕೆಯಲ್ಲಿದ್ದರು. ನಗರಸಭೆ ಸದಸ್ಯ ಅನಿಲ ಅಬ್ಬಿಗೇರಿ ನಿರೂಪಿಸಿದರು. ಗಜಾನನೋತ್ಸವ ಮಹಾಮಂಡಳಿಯ ಅಧ್ಯಕ್ಷ ಮೋಹನ ಮಾಳಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಡಿಎಸ್ಪಿ ವಿ.ವಿ. ಕುಂಬಾರ ವಂದಿಸಿದರು. ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೆಸ್ಕಾಂ ಹಾಗೂ ನಗರಸಭೆಯ ಅಧಿಕಾರಿಗಳು ಹಾಜರಿದ್ದರು.