ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಇಂಗ್ಲಿಷ್ ಶಿಕ್ಷಕರಿಲ್ಲದ ಸರ್ಕಾರಿ ಪ್ರೌಢಶಾಲೆ

Vishwanath S
Updated On : 8 Sept 2013, 11:34 am

ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಸೆ. 7
ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಭಾಷೆಯನ್ನು ಬೋಧಿಸುವ ಶಿಕ್ಷಕರಿಲ್ಲದೆ ಮಕ್ಕಳು ಪರದಾಡುತ್ತಿದ್ದರೂ ಇಲಾಖೆ ಕಣ್ಮುಚ್ಚಿ ಕುಳಿತಿದೆ.
ಇಲ್ಲಿನ ಕಲಾ ಶಿಕ್ಷಕರೇ ಇಂಗ್ಲಿಷ್ ಭಾಷೆಯನ್ನು ಬೋಧನೆ ಮಾಡುತ್ತಿದ್ದಾರೆ. ಕಲಾ ವಿಭಾಗದ ಶಿಕ್ಷಕರು ಹಾಗೂ ಇಂಗ್ಲಿಷ್ ಭಾಷೆಯನ್ನು ಓದಿರದ ಶಿಕ್ಷಕರು ಮಕ್ಕಳಿಗೆ ಹೇಗೆ ತಾನೆ ಇಂಗ್ಲಿಷ್ ಭಾಷೆಯ ಬೋಧನೆ ಮಾಡಲು ಸಾಧ್ಯ. ಇಲಾಖೆಗೆ ಇದು ಗೊತ್ತಿಲ್ಲದ ವಿಷಯವಲ್ಲ. ಆದರೂ ಇಂಗ್ಲಿಷ್ ಬೋಧನೆಗೆ ಬೇರೆ ಶಿಕ್ಷಕರನ್ನು ನಿಯೋಜನೆ ಮಾಡಲು ಇಲಾಖೆ ಸಿದ್ಧವಿಲ್ಲ, ಯಾಕೆ ಎಂಬುದು ತಿಳಿಯದ ಸಂಗತಿಯಾಗಿದೆ.
7 ವರ್ಷಗಳಾದರೂ ವ್ಯವಸ್ಥೆಯಿಲ್ಲ: ಪಟ್ಟಣದ ಮಹಾಂತಿನ ಮಠದ ಹತ್ತಿರ ಇರುವ ಸರ್ಕಾರಿ ಪ್ರೌಢಶಾಲೆ ಪ್ರಾರಂಭವಾಗಿ 7 ವರ್ಷಗಳು ಗತಿಸಿದರೂ ಇದುವರೆಗೂ ಈ ಶಾಲೆಗೆ ಇಂಗ್ಲಿಷ್ ಭಾಷೆಯನ್ನು ಬೋಧಿಸುವ ಶಿಕ್ಷಕರಿಲ್ಲದಿರುವುದು ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ತೋರಿಸುತ್ತದೆ. ಈ ಪ್ರೌಢಶಾಲೆಯಲ್ಲಿ 8, 9 ಮತ್ತು 10ನೇ ವರ್ಗದಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಓದುತ್ತಿದ್ದಾರೆ. ಇಂಗ್ಲಿಷ್ ಬೋಧಿಸುವ ಶಿಕ್ಷಕರನ್ನು ಹೊರತುಪಡಿಸಿ ಬೇರೆಲ್ಲ ಶಿಕ್ಷಕರು ಇಲ್ಲಿದಾರೆ.
ಮನವಿಗೆ ಪರಿಹಾರ ದೊರಕಿಲ್ಲ: ಮಕ್ಕಳ ಉನ್ನತ ಶಿಕ್ಷಣಕ್ಕೆ ಇಂಗ್ಲಿಷ್ ಭಾಷೆಯ ಮಹತ್ವವೇನೆಂದು ಸರ್ಕಾರಕ್ಕೆ ಗೊತ್ತಿಲ್ಲದ ಸಂಗತಿಯೇನಲ್ಲ. ಆದರೆ, ಸಾಕಷ್ಟು ಬಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪಾಲಕರು ಈ ಬಗ್ಗೆ ಮನವಿ ಮಾಡಿಕೊಂಡಿದ್ದರೂ ಪರಿಹಾರ ದೊರಕಿಲ್ಲ. 10ನೇಯ ತರಗತಿಯ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚಿಂತಿಸುವ ಪಾಲಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ವರ್ಗ ಮಾಡಿಸಿಕೊಂಡು ಹೋಗುವ ಹಂತಕ್ಕೆ ಬಂದಿದ್ದಾರೆ. ಪಟ್ಟಣದ ಹಳ್ಳದಕೇರಿ ಓಣಿಯ ಭಾಗದಲ್ಲಿನ ಸಾಕಷ್ಟು ಬಡ ವಿದ್ಯಾರ್ಥಿಗಳಿಗೆ ಈ ಸರ್ಕಾರಿ ಪ್ರೌಢಶಾಲೆ ಓದುತ್ತಿದ್ದಾರೆ. ಖಾಸಗಿ ಶಾಲೆಗಳಿಗೆ ಹೆಚ್ಚಿನ ಡೊನೇಶನ್ ನೀಡಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಸಾಧ್ಯವಾಗದ ಪಾಲಕರು ತಮ್ಮ ಮಕ್ಕಳ ಭವಿಷ್ಯವನ್ನು ಈ ಪ್ರೌಢಶಾಲೆ ಸುಂದರಗೊಳಿಸಬಹುದು ಎನ್ನುವುದಾಗಿತ್ತು. ಆದರೆ, ಮುಖ್ಯವಾಗಿ ಬೇಕಾಗಿರುವ ಇಂಗ್ಲಿಷ್‌ನ್ನು ಬೋಧಿಸುವ ಶಿಕ್ಷಕರಿಲ್ಲದೆ ತಮ್ಮ ಮಕ್ಕಳ ಭವಿಷ್ಯವೆಲ್ಲಿ ಕಮರಿ ಹೋಗುವುದು ಬಡವರ ಪಾಲಿನ ದುರಂತ ಎಂದರೆ ತಪ್ಪಾಗಲಾರದು.
ಇಂಗ್ಲಿಷ್ ಅನ್ನದ ಭಾಷೆ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣಕ್ಕೆ ಸರ್ಕಾರ ಹಾಗೂ ಸಾರ್ವಜನಿಕರು ಹೆಚ್ಚಿಗೆ ಮಹತ್ವ ನೀಡುತ್ತಿದೆ. ಅದರಲ್ಲೂ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಹಾಗೂ ಶಾಲೆಗಳಿಗೆ ಇನ್ನೂ ಹೆಚ್ಚಿನ ಬೇಡಿಕೆ ಮತ್ತು ಗೌರವವನ್ನು ನೀಡುತ್ತಿರುವುದು ತಿಳಿದ ವಿಚಾರ.
ಆಧುನಿಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಗ್ಲಿಷ್ ಭಾಷೆಯ ಜ್ಞಾನವಿಲ್ಲದಿದ್ದವರೂ ಈಗ ಅನಕ್ಷರಸ್ಥರಾದಂತೆ ಎನ್ನುವ ಮಾತು ಪ್ರಚಲಿತದಲ್ಲಿದೆ. ಇಂತಹ ಸ್ಪರ್ಧಾತ್ಮಕ ಯುಗದಲ್ಲಿನ ನಮ್ಮ ಮಕ್ಕಳಿಗೆ ತಕ್ಕದಾದಂತಹ ಶಿಕ್ಷಣವನ್ನು ನೀಡಲು ಎಲ್ಲ ಪಾಲಕರು ಸಿದ್ದರಿದ್ದಾರೆ. ಆದರೆ, ಬಡತನ, ನಿರುದ್ಯೋಗ ಹಾಗೂ ಅನಕ್ಷರಸ್ಥತೆ ಇವು ಸಾಕಷ್ಟು ಪಾಲಕರನ್ನು ಕಾಡುತ್ತಿವೆ. ಇಂಥ ಪಾಲಕರ ಮಕ್ಕಳು ಸರ್ಕಾರಿ ಶಾಲೆಗಳಿಗೆ ಹೋದರೆ ಅಲ್ಲಿ ಹಲವು ವಿಷಯಗಳ ಬೋಧನೆ ಮಾಡುವ ಶಿಕ್ಷಕರ ಕೊರತೆ ಕಾಡುತ್ತಿದೆ. ಇದನ್ನು ಶೀಘ್ರವಾಗಿ ಇಲಾಖೆ ಪರಿಗಣಿಸಿ ಇಂಗ್ಲಿಷ್ ಭಾಷೆಯನ್ನು ಬೋಧಿಸುವ ಶಿಕ್ಷಕರನ್ನು ನಿಯೋಜನೆ ಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.
ಪಕ್ಕದಲ್ಲಿನ ಶಾಲೆಗಳ ಶಿಕ್ಷಕರನ್ನು ಇಂಗ್ಲಿಷ್ ಬೋಧನೆ ಮಾಡಲು ಸದ್ಯದಲ್ಲಿ ನಿಯೋಜನೆ ಮಾಡಲಾಗುವುದು. ಇಲಾಖೆಗೆ ಈ ಬಗ್ಗೆ ತಿಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ಈ ಶಾಲೆಗೆ ಇಂಗ್ಲಿಷ್ ಬೋಧನೆ ಮಾಡುವ ಶಿಕ್ಷಕರನ್ನು ನಿಯೋಜನೆ ಮಾಡುವಂತೆ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ.
- ಆರ್.ಎಸ್. ಬುರುಡಿ,
ಕ್ಷೇತ್ರ ಶಿಕ್ಷಣಾಧಿಕಾರಿ, ಶಿರಹಟ್ಟಿ

-ಅಶೋಕ ಸೊರಟೂರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement