ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕೃಷಿಗೆ ಹೆಚ್ಚಿನ ಪ್ರೋತ್ಸಾಹ

Vishwanath S
Updated On : 8 Sept 2013, 11:34 am

ಗದಗ:  ಕೇಂದ್ರ, ರಾಜ್ಯ ಸರ್ಕಾರವು ಶಿಕ್ಷಣ, ಆರೋಗ್ಯ ಸೇರಿದಂತೆ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಹಲವು ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ರೈತರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಶನಿವಾರ ತಾಲೂಕಿನ ಕೋಟುಮಚಗಿ ಗ್ರಾಮದ ಐತಿಹಾಸಿಕ ಸೋಮೇಶ್ವರ ದೇವಸ್ಥಾನದಲ್ಲಿ ಕೃಷಿ ವಿಶ್ವವಿದ್ಯಾಲಯ ಧಾರವಾಡ ನೇತೃತ್ವದಲ್ಲಿ ರಾಷ್ಟ್ರೀಯ ಕೃಷಿ ವಿಕಾಸ-ಸಮಗ್ರ ಕೃಷಿ ಪದ್ಧತಿ ಯೋಜನೆಯ ಅಡಿಯಲ್ಲಿ ಹಿಂಗಾರಿ ಬೆಳೆಗಳ ಸುಧಾರಿತ ಬೇಸಾಯ ಕ್ರಮಗಳ ಆಂದೋಲನ, ಕೃಷಿ ಉಪಕರಣಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರವು ರೈತರ ಏಳ್ಗೆಗೆ ಹಲವು ರೀತಿಯ ಯೋಜನೆಗಳನ್ನು ರೂಪಿಸುತ್ತಿದೆ. ಆದರೆ, ಇವುಗಳ ಸಮರ್ಪಕ ಅನುಷ್ಠಾನದ ಕೊರತೆಯಿಂದಾಗಿ ಇಂದು ಸರ್ಕಾರದ ಯೋಜನೆಗಳು ಜನರಿಗೆ ತಲುಪುವಲ್ಲಿ ವಿಳಂಬವಾಗುತ್ತಿದೆ. ಹಾಗಾಗಿ ಸರ್ಕಾರವು ಕೃಷಿ ಇಲಾಖೆಯ ಅಡಿಯಲ್ಲಿ ಪ್ರತಿ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿಯೂ ಈ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದ್ದು, ಉತ್ತರ ಕರ್ನಾಟಕದ 7 ಜಿಲ್ಲೆಯಗಳಲ್ಲಿಯೂ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಸರ್ಕಾರದಿಂದ ರೈತರಿಗೆ ದೊರೆಯಲಿರುವ ಅಗತ್ಯ ಪರಿಕರಗಳ, ಹೊಸ ಮಾದರಿಯ ಬೆಳೆಗಳ ಬಗ್ಗೆ ಮಾಹಿತಿ ನೀಡುವ ಕಾರ್ಯ ಕೈಗೊಳ್ಳಲಾಗುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಹೊಸ ತಳಿ ಬೀಜ ಬಿತ್ತಿರಿ: ಸಬ್ಸಿಡಿ ದರದಲ್ಲಿ ರೈತರಿಗೆ ಸಾಲ, ಕೃಷಿ ಪರಿಕರಗಳಿಗೆ ಸಬ್ಸಿಡಿ ಸಾಲದ ಮೂಲಕ ಕೃಷಿ ಪರಿಕರಗಳನ್ನು ವಿತರಿಸುತ್ತಿದೆ. ಇಂದು ಜಿಲ್ಲೆಯ ರೈತರ ಮೇಲೆ ವರುಣನ ಮುನಿಸು ಇಂದಿಗೂ ಮುಂದುವರೆದಿರುವುದು ನೋವಿನ ಸಂಗತಿ. ಕೆಲವು ದಿನಗಳಿಂದ ಜಿಲ್ಲಾದ್ಯಂತ ಅಲ್ಪ ಪ್ರಮಾಣದ ಮಳೆಯಾಗಿದ್ದು, ಎಲ್ಲ ರೈತರು ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ಕೃಷಿ ಇಲಾಖೆಯು ನೀಡುವ ಹೊಸ ಹೊಸ ತಳಿಯ ಬೀಜಗಳನ್ನು ಖರೀದಿಸಿ ಬಿತ್ತನೆ ಮಾಡಬೇಕು. ಕಡಿಮೆ ಮಳೆಗೂ ಅಧಿಕ ಹಾಗೂ ಉತ್ತಮ ಇಳುವರಿ ನೀಡುವ ಹೊಸ ಹೊಸ ತಳಿಯ ಬೀಜಗಳ ಪೂರೈಕೆ ಮಾಡುತ್ತಿದ್ದು, ಇದರ ಸದ್ಬಳಕೆಯನ್ನು ರೈತರು ಮಾಡಿಕೊಳ್ಳಬೇಕು ಎಂದರು.
ಕೃಷಿ ವಿಶ್ವವಿದ್ಯಾಲಯದ ಸಹ ಸಂಶೋಧನಾ ನಿರ್ದೇಶಕ ಡಾ. ಬಿ.ಎನ್. ಪಾಟೀಲ ಮಾತನಾಡಿ, ಸರ್ಕಾರವು ಕೃಷಿ ಇಲಾಖೆಯ ಅಡಿಯಲ್ಲಿ ರೈತರಿಗಾಗಿ ಹಲವು ಯೋಜನೆಗಳನ್ನು ರೂಪಿಸುತ್ತಿದೆ. ಕೃಷಿ ವಿಶ್ವವಿದ್ಯಾಲಯವು ರೈತರಿಗೆ ಹೊಸ ಹೊಸ ತಳಿಯ ಬೀಜಗಳನ್ನು ಪೂರೈಕೆ ಮಾಡುತ್ತಿದೆ. ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ಹಲವು ರೈತರಿಗೆ ಕೃಷಿ ಪರಿಕರಗಳನ್ನು ವಿತರಿಸಲಾಯಿತು.
ಗ್ರಾಪಂ ಅಧ್ಯಕ್ಷೆ ಸುಮಂಗಲಾ ಜಗ್ಗಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗದಗನ ಜಂಟಿ ಕೃಷಿ ನಿರ್ದೇಶಕ ಡಾ. ಎಸ್.ಎಸ್. ಪಾಟೀಲ, ಸಹಾಯಕ ಕೃಷಿ ನಿರ್ದೇಶಕ ಡಾ.  ಪ್ರಲ್ಹಾದರಾವ್, ಡಾ. ಎ.ಡಿ. ಸವದತ್ತಿ, ವಿಸ್ತರಣಾ ಮುಂದಾಳು ಡಾ. ಎಸ್.ಪಿ. ಹಲಗಲಿಮಠ, ಕೃಷಿ ವಿಜ್ಞಾನಿ ಡಾ. ಎನ್. ಎಲೆದಹಳ್ಳಿ, ಗ್ರಾಪಂ ಉಪಾಧ್ಯಕ್ಷೆ ಶಾಂತಮ್ಮ ಹರ್ಲಾಪುರ, ಕೃಷಿ ಸಮಾಜದ ನಿರ್ದೇಶಕ ವಿದ್ಯಾಧರ ದೊಡ್ಡಮನಿ, ಗ್ರಾಪಂ ಸದಸ್ಯ ಪಾಲಾಕ್ಷಯ್ಯ ಬಳಿಗೇರಮಠ, ಶರಣಪ್ಪ ಮ್ಯಾಗೇರಿ, ಶೇಖರಯ್ಯ ಭೂಸನೂರಮಠ ಮುಂತಾದವರು ಇದ್ದರು.
ಕೃಷಿ ಅಧಿಕಾರಿ ಎ.ಜಿ. ಪಲ್ಲೇದ ಸ್ವಾಗತಿಸಿದರು. ಪ್ರೊ. ಜಿ.ಎಸ್. ಗಾಣಿಗೇರ ಕಾರ್ಯಕ್ರಮ ನಿರೂಪಿಸಿದರು. ಗ್ರಾಪಂ ಸದಸ್ಯ ಮಲ್ಲಪ್ಪ ಕಿತ್ತೂರ ವಂದಿಸಿದರು.
ಸಬ್ಸಿಡಿ ದರದಲ್ಲಿ ರೈತರಿಗೆ ಸಾಲ, ಸಬ್ಸಿಡಿ ಸಾಲದ ಮೂಲಕ ಕೃಷಿ ಪರಿಕರಗಳನ್ನು ವಿತರಿಸುತ್ತಿದೆ. ಜಿಲ್ಲೆಯ ರೈತರ ಮೇಲೆ ವರುಣನ ಮುನಿಸು ಇಂದಿಗೂ ಮುಂದುವರಿದಿರುವುದು ನೋವಿನ ಸಂಗತಿ. ಕಡಿಮೆ ಮಳೆಗೂ ಅಧಿಕ ಇಳುವರಿ ನೀಡುವ ಹೊಸ ತಳಿಯ ಬೀಜಗಳನ್ನು ಕೃಷಿ ಇಲಾಖೆ ಪೂರೈಸುತ್ತಿದ್ದು, ರೈತರು ಇದರ ಸದ್ಬಳಕೆ ಮಾಡಿಕೊಳ್ಳಬೇಕು.
- ಜಿ.ಎಸ್. ಪಾಟೀಲ,
ಶಾಸಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement