ಹಿರಿಯರ ಮಾರ್ಗದರ್ಶನ ಆವಶ್ಯಕ: ಎಚ್ಕೆ
ಕನ್ನಡಪ್ರಭ ವಾರ್ತೆ, ಗದಗ, ಸೆ. 7
ಇಂದಿನ ಆಧುನಿಕತೆಯ ಸಮಾಜಕ್ಕೆ ನಮ್ಮ ಹಿರಿಯ ಮಾರ್ಗದರ್ಶನ ಅತ್ಯಂತ ಆವಶ್ಯಕವಾಗಿದ್ದು, ಪ್ರತಿಯೊಬ್ಬರೂ ಹಿರಿಯರ ಮಾರ್ಗದರ್ಶನ ಪಡೆಯುವುದು ಅವರನ್ನು ಗೌರವಿಸುವ ಭಾವನೆ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಈಚೆಗೆ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ 6ನೇ ವಾರ್ಷಿಕೋತ್ಸವ ಹಾಗೂ ಭೂಮಿಪೂಜಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ನಮಗೂ ಇದು ಮಹತ್ವದ ಸಮಾರಂಭವಾಗಿದೆ. ಎಲ್ಲ ಹಿರಿಯರ ಮಾರ್ಗದರ್ಶನ ಅವರ ಜೀವನದ ಅನುಭವಗಳನ್ನು ಸಮರ್ಪಕವಾಗಿ ಪಡೆದುಕೊಂಡು ಉತ್ತಮವಾದ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಎಲ್ಲ ಜನಪ್ರತಿನಿಧಿಗಳು ಚಿಂತನೆ ನಡೆಸಬೇಕಿದೆ. ಅವಳಿ ನಗರದ ನಗರಸಭೆಯ ಸದಸ್ಯರು ಎಲ್ಲ ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ವಿತರಿಸುವ ಕಾರ್ಯವನ್ನು ಸಾಧ್ಯವಾದಷ್ಟು ಬೇಗನೇ ನೆರವೇರಿಸಬೇಕು. ಇದರೊಟ್ಟಿಗೆ ಇಂದು ನಿವೃತ್ತರು ಹಲವಾರು ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದ್ದು, ಈ ಕುರಿತು ಸರ್ಕಾರದಲ್ಲಿ ಚರ್ಚಿಸಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ನಗರಸಭೆಯ ಸದಸ್ಯರು ಹಾಗೂ 80 ವರ್ಷ ಮೀರಿದ ನಿವೃತ್ತ ಶಿಕ್ಷಕ ಬಿ.ಎಚ್. ಹುಣಸಿಮರ ಅವರನ್ನು ಸನ್ಮಾನಿಸಲಾಯಿತು. ಬಿ.ಎ. ಪಾಟೀಲ, ಪಿ.ಎಸ್. ಧರಣೆಪ್ಪನವರ ಮುಂತಾದವರು ಮಾತನಾಡಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರೇಮನಾಥ ಗರಗ, ಎ.ಎನ್. ನಾಗರಳ್ಳಿ, ಎಸ್.ಎನ್. ಖಾಜಿ, ಕೆ.ಐ. ಮುರಗೋಡ, ಜಿ.ಎನ್. ಯಾನಮಶೆಟ್ಟಿ, ಗೌರವಾಧ್ಯಕ್ಷ ಬಿ.ಎಸ್. ನಾಯ್ಕರ, ಹಿರಿಯ ನಾಗರಿಕರ ಸಮಿತಿ ಅಧ್ಯಕ್ಷ ಜಿ.ಎಸ್. ಹಿರೇಮಠ, ಕಟ್ಟಡ ಸಮಿತಿ ಅಧ್ಯಕ್ಷ ಎಸ್.ಎಸ್. ಮಾಡಲಗಿ, ಐ.ಕೆ. ಬಳೂಚಗಿ, ಎಸ್.ಬಿ. ಬೊಮ್ಮಸಾಗರ, ಬಿ.ಬಿ. ಹೂಗಾರ, ರಾಜಶೇಖರ ಕರಡಿ, ವಾಸುಮಾಮಾ ಟೀಕಣದಾರ, ರಾಜಶೇಖರ ಹಿರೇಮಠ, ಎಂ.ಐ. ಕಮ್ಮಾರ, ಎಸ್.ಬಿ. ದೊಡಮನಿ ಹಾಗೂ ನಗರಸಭೆ ಸದಸ್ಯರು ಇದ್ದರು. ಸಂಘದ ಅಧ್ಯಕ್ಷ ಎಸ್.ಸಿ. ಗಾಣಿಗೇರ ಸಂಘದ ವರದಿ ವಾಚನ ಮಾಡಿದರು.