ಗದಗ ಸುತ್ತಮುತ್ತ ಮಯೂರಗಳ ಮಾರಣಹೋಮ
ಕ.ಪ್ರ.ವಾರ್ತೆ ಲಕ್ಷ್ಮೇಶ್ವರ ಸೆ. 8
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಹಾಗೂ ಸುತ್ತಮುತ್ತಲ ಪ್ರದೇಶ, ಪಕ್ಕದಲ್ಲಿಯೇ ಹರಿಯುವ ತುಂಗಭದ್ರಾ ನದಿ ಪಾತ್ರದಲ್ಲಿ ಸಾಕಷ್ಟು ಪ್ರಮಾಣದ ನವಿಲುಗಳಿದ್ದು ಸದ್ಯ ಬೇಟೆಗಾರರ ದುಷ್ಕೃತ್ಯಕ್ಕೆ ಬಲಿಯಾಗುತ್ತಿವೆ.
ಅಲಂಕಾರಿಕ ವಸ್ತುಗಳನ್ನು ತಯಾರಿಸುವ ಕೆಲವರು ನವಿಲು ಮಾಂಸ ಮಾರಾಟಗಾರರೊಂದಿಗೆ ಶಾಮೀಲಾಗಿ ಅವಕಾಶ ಸಿಕ್ಕಾಗಲೆಲ್ಲ ಈ ಭಾಗದಲ್ಲಿನ ನವಿಲುಗಳನ್ನು ಸಾಯಿಸಿ, ಅವುಗಳ ಗರಿಗಳಿಂದ ವಿವಿಧ ಬಗೆಯ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಿ ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾದ ಅರಣ್ಯ ಇಲಾಖೆಯ ಸಿಬ್ಬಂದಿ ಮಾತ್ರ ಇದು ನಮ್ಮ ಕೆಲಸವೇ ಅಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ.
ಲಕ್ಷೇಶ್ವರದ ಸುತ್ತಮುತ್ತಲಿನ ಬಾಲೆಹೊಸೂರು, ಸೂರಣಗಿ, ಗೊಜನೂರ, ಬಟ್ಟೂರ, ಶಿಗ್ಲಿ, ಪು. ಬಡ್ನಿ, ಅಕ್ಕಿಗುಂದ, ಮಾಗಡಿ ಇನ್ನಿತರ ಸ್ಥಳಗಳ ಹಳ್ಳ ಕೊಳ್ಳ, ಕೆರೆಗಳ ಪಕ್ಕದ ಹೊಲಗಳಲ್ಲಿ ರಾಷ್ಟ್ರೀಯ ಪಕ್ಷಿಯಾದ ನವಿಲುಗಳು ಸಾಕಷ್ಟು ಪ್ರಮಾಣದಲ್ಲಿವೆ. ಮುಖ್ಯವಾಗಿ ಲಕ್ಷ್ಮೇಶ್ವರ ಪಟ್ಟಣದ ಸಮೀಪದಲ್ಲಿರುವ ಧರ್ಮಾಪುರ ಬಸವಣ್ಣನ ದೇವಸ್ಥಾನದ ಪ್ರದೇಶದಲ್ಲಿ ಹಾಗೂ ಅಗಡಿ ಎಂಜಿನಿಯರಿಂಗ್ ಕಾಲೇಜು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚು ನವಿಲುಗಳು ವಾಸವಾಗಿವೆ.
ಪಕ್ಕದ ಹಾವೇರಿ ಜಿಲ್ಲೆಯಲ್ಲಿ ನವಿಲು ಧಾಮವಿದೆ. ಲಕ್ಷ್ಮೇಶ್ವರ ಹಾಗೂ ಸುತ್ತಮುತ್ತಲ ಭಾಗಕ್ಕೆ ನವಿಲು ಧಾಮದಿಂದ ಪ್ರತಿ ದಿನ ಆಹಾರ ಅರಸಿ ನವಿಲುಗಳು ಬರುತ್ತಿರುವುದರಿಂದ ಈ ಭಾಗದಲ್ಲಿ ನವಿಲುಗಳ ಸಂಖ್ಯೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ಆದರೆ ಈಗ ನವಿಲುಗಳು ದುಷ್ಕರ್ಮಿಗಳಿಂದ ಬಲಿಯಾಗುತ್ತಿರುವುದು ಕೇವಲ ಪರಿಸರ ಪ್ರೇಮಿಗಳು ಮಾತ್ರವಲ್ಲ, ಎಲ್ಲರೂ ಆತಂಕ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಲಕ್ಷ್ಮೇಶ್ವರ ಪಟ್ಟಣದ ಸಮೀಪದಲ್ಲಿರುವ ಧರ್ಮಾಪುರ ಬಸವಣ್ಣ ಗುಡಿಯ ಪಕ್ಕದ ಹೊಲಗಳಲ್ಲಿ ನೂರಾರು ಸಂಖ್ಯೆಯ ನವಿಲಿನ ಗರಿಗಳು ಸಿಕ್ಕಿರುವುದು ಬೇಟೆಗಾರರು ನವಿಲುಗಳನ್ನು ಕೊಂದು, ಅವುಗಳ ಗರಿಗಳನ್ನು ಕಿತ್ತು ಹೊಲದಲ್ಲಿ ಎಸೆದು ಹೋಗಿದ್ದಾರೆ. ಒಂದು ವೇಳೆ ಯಾವುದಾದರೂ ಪ್ರಾಣಿಗಳು ಅವುಗಳನ್ನು ಬೇಟೆಯಾಡಿ ತಿಂದಿದ್ದರೆ ಪಕ್ಷಿಯ ಉಳಿದ ದೇಹದ ಭಾಗಗಳ ಅವಶೇಷಗಳು ಅಲ್ಲಿ ದೊರೆಯಬೇಕಾಗಿತ್ತು. ಆದರೆ, ಅದ್ಯಾವುದು ಇಲ್ಲಿ ದೊರಕದಿರುವುದು ನವಿಲಿನ ಬೇಟೆಯಾಡಿರುವುದಕ್ಕೆ ಪುಷ್ಟಿ ನೀಡುತ್ತದೆ. ನವಿಲು ಗರಿಗಳನ್ನು ಅಲಂಕಾರಿಕ ವಸ್ತುಗಳ ತಯಾರಿಕೆಗೆ ಬಳಕೆ ಮಾಡಲು ನೀಡುವುದು ಸಾಕಷ್ಟು ಸಂಖ್ಯೆಯಲ್ಲಿ ವ್ಯಾಪಿಸಿದೆ.
ನಮ್ಮ ಹೊಲದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ರಾಷ್ಟ್ರೀಯ ಪಕ್ಷಿ ನವಿಲು, ಮೊಲಗಳು ವಾಸವಾಗಿವೆ. ಅವುಗಳು ಯಾವುದೇ ಬೆಳೆಯನ್ನು ಹಾನಿ ಮಾಡದೇ ಹುಳು ಹುಪ್ಪಟೆಗಳನ್ನು ತಿಂದು ನೈಸರ್ಗಿಕವಾಗಿ ಕೀಟ ನಿಯಂತ್ರಣ ಮಾಡುತ್ತಿದ್ದು, ರೈತರ ಮಿತ್ರರಾಗಿದ್ದವು. ಈಗ ಮಾಂಸಕ್ಕಾಗಿ ನವಿಲು, ಮೊಲಗಳನ್ನು ಬೇಟೆಯಾಡುವುದು ಇಲ್ಲಿ ನಿರಂತರವಾಗಿ ನಡೆಯುತ್ತಿದೆ.
ಮಲ್ಲೇಶಪ್ಪ ಅಂಕಲಿ, ರೈತ
ನವಿಲು ಬೇಟೆಯಾಡಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅರಣ್ಯ ಮೃಗಗಳ ಮತ್ತು ಪಕ್ಷಿಗಳ ಬೇಟೆಗಾರರ ಮೇಲೆ ನಿಗಾ ಇಡುವಂತೆ ಸೂಚಿಸುತ್ತೇನೆ.
ಬಿ.ಟಿ. ಹಿರೇಮನಿ, ಶಿರಹಟ್ಟಿ ವಲಯ ಅರಣ್ಯ ಅಧಿಕಾರಿ
ಅಶೋಕ ಸೊರಟೂರ