ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ: ಎ.ಎಸ್. ಅಂಗಡಿ
ಕನ್ನಡಪ್ರಭ ವಾರ್ತೆ, ಗದಗ, ಸೆ. 8
ವಿದ್ಯಾರ್ಥಿಗಳನ್ನು ತಿದ್ದಿ, ತೀಡಿ ಉತ್ತಮ ವಿದ್ಯಾವಂತ ವಿದ್ಯಾರ್ಥಿ ಸಮುದಾಯವನ್ನು ಹಾಗೂ ಉತ್ತಮ ಸಮಾಜವನ್ನು ನಿರ್ಮಿಸುವ ಕಾರ್ಯ ಶಿಕ್ಷಕನದ್ದಾಗಿದೆ ಎಂದು ನಿವೃತ್ತ ಶಿಕ್ಷಕ ಎ.ಎಸ್. ಅಂಗಡಿ ಹೇಳಿದರು.
ಅವರು ಗುರುವಾರ ತಾಲೂಕಿನ ಚಿಂಚಲಿ ಗ್ರಾಮದ ಸಿ.ಎನ್. ಕತ್ತಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಒಂದು ಕಲ್ಲನ್ನು ತಿದ್ದಿ, ತೀಡಿ ಉತ್ತಮವಾದ ಶಿಲೆಯನ್ನು ನಿರ್ಮಾಣ ಮಾಡುವ ಕಲೆಯು ಶಿಕ್ಷಕನಲ್ಲಿದ್ದು, ಪ್ರತಿಯೊಬ್ಬ ಶಿಕ್ಷಕರು ತಾವು ಕಲಿಸುತ್ತಿರುವ ಶಾಲೆಗೆ ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸಮಾಜದ ಉತ್ತಮ ಪ್ರಜೆಯಾಗುವಲ್ಲಿ ಶ್ರಮಿಸುವಂತೆ ಕರೆ ನೀಡಿದರು. ಅತಿಥಿಗಳಾಗಿ ಆಗಮಿಸಿದ್ದ ಎಸ್.ಬಿ. ಬಾಲರಡ್ಡಿ ಮಾತನಾಡಿ, ಶಿಕ್ಷಕರು ಯಾವ ಶಾಲೆಯಲ್ಲಿ (ಸ್ಥಳದಲ್ಲಿ) ಎಷ್ಟು ದಿನ ಸೇವೆ ಮಾಡಿದರು ಎಂಬುದು ಮುಖ್ಯವಲ್ಲ. ಹೇಗೆ ಸೇವೆ ಮಾಡಿದರು ಎಂಬುದು ಮುಖ್ಯ. ವಿದ್ಯಾರ್ಥಿಗಳು ಹಾಗೂ ಸಮಾಜ ಸ್ಮರಿಸುವಂತೆ ಶಿಕ್ಷಕ ಸೇವೆ ಮಾಡಬೇಕು ಹಾಗೂ ದೇಶಕಟ್ಟುವ ಕಾರ್ಯಮಾಡಬೇಕು ಎಂದರು.
ಮುಖ್ಯೋಪಾಧ್ಯಾಯ ಜಂಬುನಾಥ ಡಿ.ಎಚ್. ಮಾತನಾಡಿ, ಸಮಾಜ ಶಿಕ್ಷಕರನ್ನು ಗೌರವದಿಂದ ಕಾಣುತ್ತದೆ. ಆ ಗೌರವವನ್ನು ಶಿಕ್ಷಕ ಸಮುದಾಯ ಉಳಿಸಿಕೊಳ್ಳಬೇಕಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯ ಎನ್.ಎಂ. ಅರಮನಿಯವರು ವಹಿಸಿದ್ದರು.
ವಿದ್ಯಾರ್ಥಿ ಪ್ರತಿನಿಧಿ ಶಿಲ್ಪಾ ಲಕ್ಷ್ಮೀಗುಡಿ ಸ್ವಾಗತಿಸಿದರು. ಶಾಲಾ ಪ್ರಧಾನಿ ಸುನೀಲ ಅದರಗುಂಚಿ ನಿರೂಪಿಸಿದರು. ಮಹ್ಮದರಫೀಕ ಹಳೇಮನಿ ವಂದಿಸಿದರು.