ಮಹಿಳೆಯ ಮೇಲೆ ದೌರ್ಜನ್ಯ ತಡೆಗೆ ಕಠಿಣ ಕಾನೂನು ಅಗತ್ಯ
ನರಗುಂದ: ಮಹಿಳೆಯ ಮೇಲೆ ದೌರ್ಜನ್ಯವೆಸಗುವವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕಾಗಿದೆ ಎಂದು ಶಾಸಕ ಬಿ.ಆರ್. ಯಾವಗಲ್ ಹೇಳಿದರು. ಅವರು ಈಚೆಗೆ ಪಟ್ಟಣದ ಪುರಸಭೆಯ ಬಾಬಾಸಾಹೇಬ ಕಲಾ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ತಾಪಂ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಹಿಳೆಯರ ಮತ್ತು ಮಕ್ಕಳ ಮೇಲೆ ಅನೈತಿಕ ಸಾಗಾಣಿಕ ತಡೆಗಟ್ಟಲು ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ಬೃಹತ್ ಆಂದೋಲನ ಹಾಗೂ ಭಾಗ್ಯಲಕ್ಷ್ಮಿ ಬಾಂಡ್ಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ಆಧುನಿಕ ಯುಗದಲ್ಲಿಯೂ ಮಹಿಳೆಯ ಮೇಲಿನ ದೌರ್ಜನ್ಯ ನಿಂತಿಲ್ಲ. ಸಮಾಜದಲ್ಲಿ ಕೆಲವು ಕಿಡಿಗೇಡಿಗಳು ಒಬ್ಬಂಟಿ ಮಹಿಳೆ ಮೇಲೆ ದೌರ್ಜನ್ಯ ಮಾಡುತ್ತಿರುವುದು ದುರ್ದೈವದ ಸಂಗತಿಯಾಗಿದೆ. ಕಾರಣ ಸರ್ಕಾರವು ಇಂತಹ ದುಷ್ಕೃತ್ಯವನ್ನು ಎಸಗುವವರ ವಿರುದ್ಧ ಸೂಕ್ತ ಕಾನೂನು ರೂಪಿಸಿ ಉಗ್ರವಾದ ಶಿಕ್ಷೆ ನೀಡಿದಾಗ ಮಾತ್ರ ಇಂತಹ ಅತ್ಯಾಚಾರದಂತ, ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ಕಡಿಮೆಯಾಗಲು ಸಾಧ್ಯ ಎಂದರು. ಜಿಪಂ ಸದಸ್ಯೆ ಶಾಂತಾ ದಂಡಿನ, ಗದಗ ಮಹಿಳಾ ಅಭಿವೃದ್ಧಿ ಅಧಿಕಾರಿ ಅಕ್ಕಮಹಾದೇವಿ ಉಪನ್ಯಾಸ ನೀಡಿದರು. ತಾಪಂ ಅಧ್ಯಕ್ಷ ಗುರಪ್ಪ ಆದಪ್ಪನವರ, ಚಂಬಣ್ಣ ವಾಳದ, ಪುರಸಭೆ ಸದಸ್ಯ ಎಸ್.ಆರ್. ಪಾಟೀಲ, ನಾಗಪ್ಪ ನವಲಗುಂದ, ಮಹೇಶ ಬಡಿಗೇರ, ದೇವರಡ್ಡಿ ವೆಂಕರಡ್ಡಿಯವರ, ವಿಠ್ಠಲ ಶಿಂಧೆ, ಶಿವನಗೌಡ ಹೆಬ್ಬಳ್ಳಿ, ರಫೀಕ ಧಾರವಾಡ, ಶಿಶು ಅಭಿವೃದ್ಧಿ ಅಧಿಕಾರಿ ಟಿ.ಜಿ. ಶಂಕರಮೂರ್ತಿ, ಅಂಗನವಾಡಿ ಕಾರ್ಯಕರ್ತರು ಇದ್ದರು.
ಪಟಾಕಿ ಅಂಗಡಿಗಳಸ್ಥಳಾಂತರಕ್ಕೆ ಆದೇಶ
ಗದಗ: ಸೆ. 9ರಿಂದ 19ರ ವರೆಗೆ ಗಣೇಶ ಚತುರ್ಥಿ ಹಬ್ಬದ ಸಮಯದಲ್ಲಿ ಪಟಾಕಿಗಳ ಮಾರಾಟ ಮಾಡುವುದರಿಂದ ಅಗ್ನಿ ಅನಾಹುತಗಳು ಸಂಭವಿಸುವ ಸಾಧ್ಯತೆಗಳಿದ್ದು, ಹೀಗಾಗಿ ಗದಗ-ಬೆಟಗೇರಿ ನಗರದ ಎಲ್ಲ ಪಟಾಕಿ ಅಂಗಡಿಗಳನ್ನು ಸೆ. 19ರ ವರೆಗೆ ನಗರದ ವಿದ್ಯಾದಾನ ಸಮಿತಿಯ ಮೈದಾನದ ಜಾಗೆಯಲ್ಲಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ವಿದ್ಯಾದಾನ ಸಮಿತಿಯವರು ವಿಧಿಸುವ ನಿಯಮ, ಕರ (ಫೀ)ವು ಒಳಪಟ್ಟು ಪಟಾಕಿ ಅಂಗಡಿಗಳನ್ನು ನಡೆಸಲು ಮತ್ತು ಜಿಲ್ಲೆಯಲ್ಲಿ ಇನ್ನುಳಿದ ತಾಲೂಕಿನಲ್ಲಿ ಆಯಾ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಸೂಕ್ತ ಆದೇಶ ಹೊರಡಿಸಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉರ್ದು ಶಾಲೆಯಲ್ಲಿಶಿಕ್ಷಕರ ದಿನಚಾರಣೆ
ನರಗುಂದ: ಪಟ್ಟಣದ ಹಿರಿಯ ಉರ್ದು ಪ್ರಾಥಮಿಕ ಶಾಲೆ ನಂ.1ರಲ್ಲಿ ಶಿಕ್ಷಕರ ದಿನವನ್ನು ಈಚೆಗೆ ಆಚರಿಸಲಾಯಿತು. ಪ್ರಧಾನ ಗುರು ಆರ್.ಎಂ. ತಬಲಾಚಿ, ಜಾಮೀತ ನಾಲಬಂದ, ನೂರಬಿ ಪಠಾಣ, ಸಲ್ಲಾಂ ಲೋದಿ, ಸನಾಭಾನು ಪಠಾಣ, ರಿಹಾನ ಖಾಜಿ, ತಹೇಸಿನ ಅತ್ತಾರ, ನಾಲಬಂದ ಮುಂತಾದವರು ಉಪಸ್ಥಿತರಿದ್ದರು.