ಜನಜೀವನ ಅಸ್ತವ್ಯಸ್ಥ
ಗಜೇಂದ್ರಗಡ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಅಪಾರ ಪ್ರಮಾಣದ ಆಸ್ತಿ, ಬೆಳೆ ಹಾನಿಯುಂಟಾಗಿ ಜನ ಜೀವನ ಅಸ್ತವ್ಯಸ್ಥಗೊಂಡಿದೆ.
ಸಮೀಪದ ಗೊಗೇರಿ ಗ್ರಾಪಂ ವ್ಯಾಪ್ತಿಯ ನಾಗರಸಕೊಪ್ಪ ತಾಂಡಾಗಳಲ್ಲಿ ಮಳೆಯ ಅಬ್ಬರಕ್ಕೆ ತಾಂಡಾದ ನಾಗಪ್ಪ ಚವ್ಹಾಣ, ಹನುಮಪ್ಪ ರಾಠೋಡ, ದೇವೆಂದ್ರಪ್ಪ ರಾಠೋಡ, ರುದ್ರಪ್ಪ ಚವ್ಹಾಣ, ನರಸಪ್ಪ ರಾಠೋಡ, ಶರಣಪ್ಪ ಚವ್ಹಾಣ, ರಾಮಪ್ಪ ಚವ್ಹಾಣ ಎಂಬುವವರ ಮನೆಯ ಮೇಲ್ಛಾವಣಿ ಹಾಗೂ ಗೋಡೆ ಕುಸಿದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಇನ್ನೊಂದೆಡೆ ನಾಗರಸಕೊಪ್ಪ ಗ್ರಾಮದಲ್ಲಿಯೂ ತಿಪ್ಪಣ್ಣ ವಾಲಿಕಾರ, ಮುದಕಪ್ಪ ನರಿ, ಲಕ್ಷ್ಮಪ್ಪ ವಾಲಿಕಾರ, ಎಂಬುವವರ ಮನೆಗಳು ಕುಸಿದಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗೊಗೇರಿ ಗ್ರಾಪಂ ಅಧ್ಯಕ್ಷ ಹನುಮಂತ ಕಮ್ಮಾರ, ಉಪಾಧ್ಯಕ್ಷೆ ಅನ್ನವ್ವ ಚವ್ಹಾಣ, ಕಾರ್ಯದರ್ಶಿ ಎಸ್.ಎಂ. ಸಂಕನೂರ, ಹಾನಿಗೀಡಾದ ಗ್ರಾಮಗಳಿಗೆ ತೆರಳಿ ಮಳೆಯಿಂದಾದ ಹಾನಿ ವೀಕ್ಷಿಸಿದರು. ಗ್ರಾಮ ಲೆಕ್ಕಾಧಿಕಾರಿಯವರಿಗೆ ಹಾನಿಯ ಸಮೀಕ್ಷೆ ಮಾಡಲು ತಿಳಿಸಿದರು. ನಂತರ ಮಾತನಾಡಿದ ಗ್ರಾಪಂ ಅಧ್ಯಕ್ಷ ಹನುಮಪ್ಪ ಕಮ್ಮಾರ, ಸೋಮವಾರ ಸುರಿದ ಮಳೆಯಿಂದಾಗಿ ಹೊಲದಲ್ಲಿನ ಒಡ್ಡುಗಳು ಒಡೆದಿವೆ. ಜತೆಗೆ ಕಟಾವಿಗೆ ಬಂದಿದ್ದ ಸಜ್ಜಿ, ಮೆಕ್ಕೆಜೋಳ ಸೂರ್ಯಕಾಂತಿ ಬೆಳೆಗಳು ಅಪಾರ ಪ್ರಮಾಣದಲ್ಲಿ ಹಾನಿಯಾಗಿವೆ. ನೀರಿಲ್ಲದೆ ಒಣಗಿದ್ದ ನಾಗರಸಕೊಪ್ಪ ಹಾಗೂ ಮಾಟರಂಗಿ ಕೆರೆಗಳು ಕೇವಲ 3 ಗಂಟೆಗಳಲ್ಲಿ ಸುರಿದ ಮಳೆಗೆ ತುಂಬಿವೆ. ಮಳೆಯಿಂದ ಹಾನಿಗೀಡಾದ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು. ಮಾಜಿ ಉಪಾಧ್ಯಕ್ಷ ಮೌನೇಶಪ್ಪ ಭೋಸಲೆ, ಸಾಂತಪ್ಪ ಸೊಬರದ, ಸಂಗಪ್ಪ ಗುರಿಕಾರ, ಇಮಾಮಸಾಬ್ ಬಾಗವಾನ, ಹುಸೇನಸಾಬ ಬಾಗವಾನ, ಹನಮಪ್ಪ ಮಾದರ ಮುಂತಾದವರು ಉಪಸ್ಥಿತರಿದ್ದರು.