ಮಳೆ: ಅಪಾರ ಹಾನಿ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಸೆ. 10
ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಸೋಮವಾರ ರಾತ್ರಿ ಸುರಿದ ಕುಂಭದ್ರೋಣ ಮಳೆ ರುದ್ರ ನರ್ತನ ಜನರನ್ನು ತಲ್ಲಣಗೊಳಿಸಿ, ಅಪಾರ ಪ್ರಮಾಣದ ಆಸ್ತಿ, ಬೆಳೆ ಹಾನಿಯಾಗಿದೆ.
ಸತತ ಬರಗಾಲದಿಂದ ತತ್ತರಿಸಿದ್ದ ಜನತೆಗೆ ಈ ವರ್ಷದ ಮುಂಗಾರು ಹಂಗಾಮಿನ ಮಳೆಯು ಕೈಕೊಟ್ಟ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕ ಮನೆ ಮಾಡಿತ್ತು. ಮಳೆಯ ಕೊರತೆಯಿಂದ ಕುಡಿಯುವ ನೀರಿಗೂ ಹಾಹಾಕಾರ ಸ್ಥಿತಿ ಉಂಟಾಗಿ ಮಳೆಗಾಲದಲ್ಲೇ ಕುಡಿಯುವ ನೀರಿಗೆ ಪರದಾಡುವಂತಾಗಿತ್ತು.
ಮುಂಗಾರಿನ ಮಳೆ ಸಮರ್ಪಕವಾಗಿ ಆಗದಿರುವುದರಿಂದ ಜನ, ಜಾನುವಾರುಗಳು ಸಂಕಷ್ಟಕ್ಕೀಡಾದ ಬೆನ್ನಲ್ಲೇ ಕಳೆದೆರೆಡು ದಿನದಿಂದ ಸುರಿದ ಮಳೆಯಿಂದಾಗಿ ತೀವ್ರ ನಿರಾಶರಾಗಿದ್ದ ಜನರಲ್ಲಿ ಹರ್ಷ ಮೂಡಿಸಿದೆ. ಹುಬ್ಬಾ ಮಳೆ ಆದರೂ ಗುಬ್ಬಿಯ ಪುಚ್ಚ ತೊಯ್ಯುವುದಿಲ್ಲ ಎನ್ನುವ ಮಾತನ್ನು ಹುಬ್ಬಾ ಮಳೆ ಭಾನುವಾರ ಮತ್ತು ಸೋಮವಾರ ರಾತ್ರಿ ಧಾರಾಕಾರವಾಗಿ ಸುರಿಯುವ ಮೂಲಕ ಸುಳ್ಳಾಗಿಸಿದೆ.
ಅಪಾರ ಬೆಳೆ ಹಾನಿ: ಮುಂಗಾರು ಹಂಗಾಮಿನಲ್ಲಿ ಅಲ್ಪ ಸ್ವಲ್ಪ ಬೆಳೆದು ಕಟಾವಿಗೆ ಬಂದಿದ್ದ ಸಜ್ಜಿ, ಗೋವಿನಜೋಳ, ಸೂರ್ಯಕಾಂತಿ ಬೆಳೆ ಸೋಮವಾರ ರಾತ್ರಿ ಗುಡುಗು ಸಹಿತ ಸುರಿದ ಭಾರಿ ಮಳೆಗೆ ಫಸಲು ನೆಲಕ್ಕುರುಳಿದ ಪರಿಣಾಮ ರೈತರಿಗೆ ಅಪಾರ ನಷ್ಟ ಸಂಭವಿಸಿದೆ. ಇನ್ನೊಂದೆಡೆ ಧಾರಾಕಾರವಾಗಿ ಸುರಿದ ಮಳೆಗೆ ಪಟ್ಟಣ ಸೇರಿ ಸುತ್ತಲಿನ ಗೊಗೇರಿ, ನಾಗರಸಕೊಪ್ಪ, ಮಾಟರಂಗಿ, ಬೆಣಚಮಟ್ಟಿ, ಗ್ರಾಮಗಳಲ್ಲಿ ಮನೆಗಳ ಮೇಲ್ಛಾವಣಿ, ಗೋಡೆ, ಕುಸಿದು ಅಪಾರ ಹಾನಿಯಾಗಿದೆ.
ತುಂಬಿದ ಕೆರೆಗಳು: 3 ವರ್ಷದಿಂದ ಸತತ ಬರಗಾಲಕ್ಕೀಡಾಗಿ ಹನಿ ನೀರಿಲ್ಲದೆ ಬಣಗುಡುತ್ತಿದ್ದ ಜಿಗೇರಿ, ಬೆಣಚಮಟ್ಟಿ, ನಾಗರಸಕೊಪ್ಪ, ಮಾಟರಂಗಿ ಹಾಗೂ ನಾಗೇಂದ್ರಗಡ ರೈತ ಕಾಯಕ ಕೆರೆಗಳು ಕಳೆದೆರೆಡು ದಿನದಿಂದ ಸುರಿದ ಭಾರಿ ಮಳೆಯಿಂದ ಮತ್ತೆ ಮೈದುಂಬಿಕೊಂಡಿದ್ದು, ಈ ಭಾಗದ ರೈತರಲ್ಲಿ ಹರ್ಷವನ್ನು ಇಮ್ಮಡಿಗೊಳಿಸಿದೆ. ಜತೆಗೆ ಕೆರೆಗಳಲ್ಲಿ ನೀರಿಲ್ಲದ ಪರಿಣಾಮ ಸ್ಥಗಿತಗೊಂಡಿದ್ದ ಕೊಳವೆ ಬಾವಿಗಳು ಮತ್ತೆ ಮರು ಜೀವ ಪಡೆದುಕೊಂಡಿವೆ ಹಾಗೂ ಅತಂತ್ರವಾಗಿದ್ದ ಮೀನುಗಾರರ ಬದುಕು ಹಸನಾಗಲಿದೆ.
ಸ್ಥಳೀಯ ಗುಡ್ಡದ ಬಳಿ ಸಣ್ಣ ನೀರಾವರಿ ಇಲಾಖೆಯಿಂದ ಸುಮಾರು ರು. 6 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಬೃಹತ್ ಕೆರೆಯಲ್ಲಿ ನೀರು ಸಂಗ್ರಹವಾದ ಹಿನ್ನೆಲೆಯಲ್ಲಿ ಪಟ್ಟಣದ ಜನತೆ ಕೆರೆ ಹಾಗೂ ಗುಡ್ಡದ ಮೇಲಿಂದ ಧುಮುಕುವ ನೀರಿನ ಜಲ ಧಾರೆ ನೋಡಲು ಸಾರ್ವಜನಿಕರು ತಂಡೋಪ ತಂಡವಾಗಿ ಕೆರೆಯ ಬಳಿ ಆಗಮಿಸುತ್ತಿರುವ ದೃಶ್ಯ ಮಂಗಳವಾರ ಕಂಡುಬಂದಿತು.