ಸಾಕ್ಷರತೆ ಬದುಕಿಗೆ ಜೇನುತುಪ್ಪವಿದ್ದಂತೆ
ಮುಂಡರಗಿ: ಈ ಜಗತ್ತಿನ ಯಾವುದೇ ಯೋಜನೆಗಳು ಯಶಸ್ವಿಯಾಗಬೇಕಾದರೆ, ಅಲ್ಲಿನ ಸಾಕ್ಷರತೆಯ ಪ್ರಮಾಣ ಪ್ರಮುಖವಾಗುತ್ತದೆ. ಸಾಕ್ಷರತೆ ನಮ್ಮ ಜೀವನದ ಬದುಕಿಗೆ ಜೇನುತುಪ್ಪ ಇದ್ದಂತೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ. ರಡ್ಡೇರ ಹೇಳಿದರು.
ಅವರು ಭಾನುವಾರ ಪಟ್ಟಣದ ತಾಪಂ ಆವರಣದಲ್ಲಿ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಅಂಗವಾಗಿ ಜರುಗಿದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಎಲ್ಲರಿಗೂ ಸಾಕ್ಷರತಾ ಪ್ರಮಾಣ ವಚನ ಬೋಧಿಸಿ ಮಾತನಾಡಿದರು.
ಸಾಕ್ಷರತೆಯ ಇನ್ನೊಂದು ಹೆಸರು ಅರಿವು. ಪ್ರತಿಯೊಬ್ಬರ ಜೀವನದಲ್ಲಿಯೂ ವಿದ್ಯ ಬಹುದೊಡ್ಡ ಸಂಪತ್ತು. ಅಂತಹ ಸಂಪತ್ತು ಎಲ್ಲರೂ ಪಡೆದುಕೊಳ್ಳುವುದು ಅವಶ್ಯ. ವಾರ ಕಾಲ ಸಾಕ್ಷರತಾ ಸಪ್ತಾಹ ನಡೆಯಲಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಸೂಚಿಸಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಿ. ಮೋಹನ್ ಸಾಕ್ಷರತಾ ಧ್ವಜಾರೋಹಣ ನೆರವೇರಿಸಿದರು. ತಾಲೂಕು ಸಾಕ್ಷರತಾ ಸಂಯೋಜಕ ಸಿ.ಜಿ. ಧರ್ಮಾಧಿಕಾರಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಡಿ. ಭಾವಿಮನಿ, ಎಂ.ಎಂ. ಕುಕನೂರ, ಜೆ.ಎನ್. ಕಮ್ಮಾರ, ಎಂ.ಎನ್. ಚಳ್ಳಮರದ, ಎ.ಸಿ. ಕೆಳಗಿನಮನಿ, ಎಂ.ಎಸ್. ಶೀರನಹಳ್ಳಿ, ಎಸ್.ಎಸ್. ಹಿರೇಮಠ, ಎಸ್.ಎಸ್. ದಾನರಡ್ಡಿ, ಜಿ.ಎಸ್. ಡೊಣ್ಣಿ, ಕಾಶೀನಾಥ ಶಿರಬಡಗಿ, ದೀಪಾ ಅಳವಂಡಿ, ನಂದಗಾವಿ ಮುಂತಾದವರು ಇದ್ದರು.