ಅಧಿಕಾರಿಗಳಿಂದ ಚೆಕ್ ಡ್ಯಾಂ ಧ್ವಂಸ: ಖಂಡನೆ
ಕನ್ನಡಪ್ರಭ ವಾರ್ತೆ, ರೋಣ, ಸೆ. 11
ತಾಲೂಕಿನ ಸವಡಿ ಗ್ರಾಮದ ಹತ್ತಿರ ಮಲ್ಲಾಪುರ ಹಳ್ಳಕ್ಕೆ ಅಂರ್ತಜಲ ಹೆಚ್ಚಳಕ್ಕಾಗಿ 14 ತಿಂಗಳ ಹಿಂದೆ ನಿರ್ಮಿಸಲಾದ ಚೆಕ್ ಡ್ಯಾಂ (ಬಾಂದರ್)ನ್ನು ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗದ ಅಧಿಕಾರಿಗಳೇ ಮುಂದೆ ನಿಂತು ಧ್ವಂಸಗೊಳಿಸಿದ ಘಟನೆ ನಡೆದಿದೆ.
ಅಧಿಕಾರಿಗಳು ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದೇ, ಅಕ್ಕ ಪಕ್ಕದ ಹೊಲದ ರೈತರನ್ನು ಕೇಳದೇ ಧ್ವಂಸಗೊಳಿಸಿದ್ದು, ಸರ್ಕಾರದ ಲಕ್ಷಾಂತರ ಹಣ ನೀರು ಪಾಲಾದಂತಾಗಿದೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸವಡಿ ಗ್ರಾಮದ ರೈತರಾದ ಬಿ.ಜಿ. ಪರಡ್ಡಿ, ಬಸವರಾಜ ಬೂಸರಡ್ಡಿ, ಶುಕ್ರಸಾಬ ನಧಾಪ, ಹನುಮಂತಪ್ಪ ಹಡಪದ, ಚೆಕ್ ಡ್ಯಾಂ ನಿರ್ಮಿಸುವ ಸಂದರ್ಭದಲ್ಲಿ, ಇದೊಂದು ಅವೈಜ್ಞಾನಿಕ ಸ್ಥಳವಾಗಿದ್ದು, ಇಲ್ಲಿ ಚೆಕ್ ಡ್ಯಾಂ ನಿರ್ಮಿಸುವುದು ಬೇಡ ಎಂದರೂ ಜಿಪಂ ಅಭಿಯಂತರು ಕೇಳಲಿಲ್ಲ. ಜಿಪಂನ ಅಂರ್ತಜಲ ಹೆಚ್ಚಳ ವಿಭಾಗದ ಅನುದಾನದಲ್ಲಿ ರು. 15 ಲಕ್ಷ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಿಸಿದ್ದರು. ಮಳೆಯಾದಾಗಲೆಲ್ಲ ಚೆಕ್ ಡ್ಯಾಂನಲ್ಲಿ ನೀರು ಸಂಗ್ರಹವಾಗಿ ಈ ಭಾಗದ ನೂರಾರು ಹೊಲಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸ್ಥಗಿತಗೊಳ್ಳುತ್ತಿದ್ದವು. ರಸ್ತೆ ಸುಗಮಗೊಳಿಸಲು ರೈತರು ಒತ್ತಾಯಿಸಿದರೆ, ಲಕ್ಷಾಂತರ ವೆಚ್ಚದಲ್ಲಿ ನಿರ್ಮಿಸಿದ ಚೆಕ್ ಡ್ಯಾಂನ್ನು ಧ್ವಂಸಗೊಳಿಸಿದ್ದು ಖಂಡನೀಯ. ಇದರಿಂದ ಅನುದಾನ ಅನಾವಶ್ಯಕವಾಗಿ ನೀರು ಪಾಲಾಯಿತು. ಯಾವುದೇ ಕಾಮಗಾರಿ ಮಾಡಬೇಕಾದಲ್ಲಿ ಮೊದಲು ಅನಾನೂಕೂಲತೆಗಳನ್ನು ಗಮನಿಸುವದು ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಜಿಪಂ ಅಭಿಯಂತರರು ಕಾರ್ಯ ಕೈಗೊಂಡಿಲ್ಲ ಎಂದು ಆರೋಪಿಸಿದರು.