ವಿವಿಧ ಅವತಾರಗಳಲ್ಲಿ ವಿಘ್ನೇಶ್ವರ
ಕನ್ನಡಪ್ರಭ ವಾರ್ತೆ, ಗದಗ, ಸೆ. 11
ಗದಗ-ಬೆಟಗೇರಿ ಅವಳಿ ನಗರದಲ್ಲಿ ಗಣೇಶೋತ್ಸವದ ಮೆರಗು ದಿನೇ ದಿನೇ ಹೆಚ್ಚುತ್ತಿದ್ದು, ಪ್ರತಿಷ್ಠಾಪನೆಯಾಗಿರುವ ಬಹುತೇಕ ಗಣೇಶ ವಿಗ್ರಹಗಳು ನೋಡುಗರ ಮನಸೆಳೆಯುವಲ್ಲಿ ಯಶಸ್ವಿಯಾಗಿವೆ.
ಅದರಲ್ಲಿಯೂ ಭಾವೈಕ್ಯತೆ, ಭಕ್ತಿ-ಭಾವ ಜನರಲ್ಲಿ ಹೆಚ್ಚಿಸುವ ರೀತಿಯಲ್ಲಿ ಕೆಲವೆಡೆ ಅಳವಡಿಸಲಾಗಿರುವ ದೃಶ್ಯ ರೂಪಕಗಳು ಮುಖ್ಯವಾಗಿ ಹೆಂಗಳೆಯರ ಮನ ಮುಟ್ಟಿವೆ. ಗಣೇಶೋತ್ಸವ ಅವಳಿ ನಗರದಲ್ಲಿ ಹೊಸ ಮೆರಗು ತಂದಿದೆ.
ವಿಶೇಷ ಗಣಪತಿ: ಗದಗ-ಬೆಟಗೇರಿ ಅವಳಿ ನಗರದಲ್ಲಿ 128ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಒಬ್ಬರಿಗಿಂತ ಒಬ್ಬರು ಈ ಬಾರಿ ಭಿನ್ನವಾದ ಗಣೇಶ ವಿಗ್ರಹಗಳನ್ನು ಸ್ಥಾಪಿಸಿದ್ದಾರೆ. ಗಡಿಗೆ ಮೇಲೆ ಕುಳಿತ, ಕೃಷಿಕನನ್ನು ಬಿಂಬಿಸುವ, ಅಂಬಾರಿ, ನವಿಲು, ರಥದ ಮೇಲೆ ಕುಳಿತಿರುವುದು, ನಾಗಪ್ಪನ ಹೆಡೆ, ಆದಿಶೇಷ ಗಣಪ, ಪದ್ಮಾಸನ ಗಣಪತಿ, ಶಂಖ ಗಣಪ, ಬಾಲಗಣಪ, ಪ್ರಭಾವಳಿ ಗಣಪ, ಕಮಲದ ಗಣಪ, ನಂದಿಗಣಪ, ಕಮಲದಲ್ಲಿ ಅರಳಿದ ಗಣಪ, ಆಶೀರ್ವಾದ ರೂಪದಲ್ಲಿರುವ ಗಣಪ, ಪಂಡಿತ ಪುಟ್ಟರಾಜ ಕವಿಗವಾಯಿಗಳು, ಹಲವು ರಾಷ್ಟ್ರ ಪ್ರೇಮಿಗಳ ರೂಪದಲ್ಲಿರುವ ಗಣೇಶ ವಿಗ್ರಹಗಳು ಅವಳಿ ನಗರದಲ್ಲಿ ಸ್ಥಾಪಿತವಾಗಿವೆ.
10 ಅಡಿಗಿಂತ ಎತ್ತರ ಗಣಪ: ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಲ್ಲಿ ಈ ಬಾರಿ 10 ಅಡಿಗಿಂತಲೂ ಎತ್ತರವಿರುವ ಹಲವಾರು ಗಣೇಶ ವಿಗ್ರಹಗಳು ಸ್ಥಾಪನೆಯಾಗಿರುವುದು ಮತ್ತೊಂದು ವಿಶೇಷತೆ. ಸಾರ್ವಜನಿಕ ಸ್ಥಳಗಳಲ್ಲಿ ಬಹುತೇಕರು ದೊಡ್ಡ ದೊಡ್ಡ ಗಣೇಶ ವಿಗ್ರಹಗಳನ್ನು ಸ್ಥಾಪಿಸಿದ್ದಾರೆ. ನಗರದಲ್ಲಿ ಐದಾರು ಕಡೆಗಳಲ್ಲಿ 5 ಅಡಿ ಮತ್ತು 5 ರಿಂದ 10, 11 ಅಡಿವರೆಗಿನ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ವಿಭಿನ್ನ ರೀತಿಯಲ್ಲಿ ಅಲಂಕರಿಸುವ ಮೂಲಕ ಸಾರ್ವಜನಿಕರು ಹೆಚ್ಚು ಆಕರ್ಷಿತರಾಗುವಂತೆ ಮಾಡಿದ್ದಾರೆ.
ಪಿಓಪಿ ಗಣಪತಿಗಳೇ ಹೆಚ್ಚು: ಪರಿಸರ ಸ್ನೇಹಿ ಗಣೇಶ ವಿಗ್ರಹಗಳನ್ನು ಸ್ಥಾಪಿಸಬೇಕು. ಪಿಓಪಿ ಗಣೇಶ ವಿಗ್ರಹಗಳನ್ನು ಸಂಪೂರ್ಣ ನಿಷೇಧಿಸಬೇಕು ಎಂದು ಗಣೇಶ ಚತುರ್ಥಿಯ ಮೊದಲೇ ಕೆಲ ಸಂಘಟನೆಗಳು ಜಿಲ್ಲಾಧಿಕಾರಿಗೆ ಮನವಿಯನ್ನು ಸಲ್ಲಿಸಿದ್ದವು. ಆದರೀಗ ಅವಳಿ ನಗರದಲ್ಲಿ ಸ್ಥಾಪನೆಯಾಗಿರುವ ಬಹುತೇಕ ಹೆಚ್ಚು ಗಣೇಶ ವಿಗ್ರಹಗಳು ಪಿಓಪಿಯಿಂದಲೇ ನಿರ್ಮಾಣವಾಗಿವೆ. ಮಣ್ಣಿನಿಂದ ನಿರ್ಮಾಣವಾದ ಮೂರ್ತಿಗಳು ಹೆಚ್ಚು ಭಾರವಾಗಿರುತ್ತವೆ, ಅದರಿಂದ ಪ್ರತಿಷ್ಠಾಪನೆ ಹಾಗೂ ವಿಸರ್ಜನೆಯ ವೇಳೆಯಲ್ಲಿ ಸಾಕಷ್ಟು ಸಮಸ್ಯೆಯಾಗುತ್ತದೆ ಎನ್ನುವ ದೃಷ್ಟಿಯಿಂದ ಎಲ್ಲರೂ ಪಿಓಪಿ ಗಣೇಶ ವಿಗ್ರಹಗಳ ಮೊರೆ ಹೋಗಿದ್ದಾರೆ.
ಸತ್ಯವಾನ ಸಾವಿತ್ರಿ ದೃಶ್ಯ: 38 ವರ್ಷಗಳಿಂದ ಬೆಟಗೇರಿಯಲ್ಲಿ ಸಾರ್ವಜನಿಕ ಗಜಾನನೋತ್ಸವ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಲ್ಪಡುವ ಗಣೇಶನ ಮೂರ್ತಿಯ ವೇದಿಕೆಯಲ್ಲಿ ಧಾರ್ಮಿಕ ಹಿನ್ನೆಲೆಯ ಸತಿ ಧರ್ಮ ಪಾಲನೆ ಮತ್ತು ಪತಿ-ಪತ್ನಿಯರ ನಡುವಿನ ಪ್ರೀತಿ ವಿಶ್ವಾಸದ ಮಹತ್ವ ಭೋದಿಸುವ ಮಹಾಪತಿವೃತೆ ಸತ್ಯವಾನ ಸಾವಿತ್ರಿ ಕುರಿತ ದೃಶ್ಯ ಸಂಯೋಜನೆ ಅಳವಡಿಸಲಾಗಿದೆ. ಪತಿಯ ಪ್ರಾಣ ಸೆಳೆದೊಯ್ಯುತ್ತಿರುವ ಯಮರಾಜನೊಂದಿಗೆ ಸೆಣಸಾಡಿ ಪತಿವೃತಾ ಶಕ್ತಿಯ ಬಲದಿಂದ ತನ್ನ ಪತಿಯ ಪ್ರಾಣವನ್ನೇ ಯಮರಾಜನಿಂದ ಹಿಂಪಡೆಯುವ ನೀತಿಬೋಧಕ ಪ್ರಸಂಗದ ದೃಶ್ಯಾವಳಿ ಅತ್ಯಂತ ಆಕರ್ಷಕವಾಗಿದ್ದು ಹೆಚ್ಚಿನ ಜನರನ್ನು ತನ್ನತ್ತ ಸೆಳೆಯುವಂತೆ ಮಾಡಿದೆ.
-ಶಿವಕುಮಾರ ಕುಷ್ಟಗಿ