ವಿಶ್ವ ಶಾಂತಿಗೆ ವಿವೇಕರ ಸಂದೇಶ ಸಹಕಾರಿ: ಶ್ರೀ
ಗದಗ: ಭಾರತೀಯ ಯುವಪೀಳಿಗೆ ವೀರಸನ್ಯಾಸಿ ಸ್ವಾಮಿ ವಿವೇಕಾನಂದರ ವಾರಸುದಾರಿಕೆ ಪ್ರತಿಪಾದಿಸೋ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸಬೇಕೆಂದು ಹೊಸಳ್ಳಿ ಬೂದೀಶ್ವರ ಸಂಸ್ಥಾನಮಠದ ಅಭಿನವ ಬೂದೀಶ್ವರ ಶ್ರೀ ಹೇಳಿದರು.
ಅವರು ಬುಧವಾರ ನಗರದ ಮುಳಗುಂದ ನಾಕಾ ಬಳಿಯ ವಿಠ್ಠಲಾರೂಢಸ್ವಾಮಿ ಮಠದಲ್ಲಿ ಸ್ವಾಮಿ ವಿವೇಕಾನಂದರ 150 ನೇ ಜನ್ಮದಿನಾಚರಣೆ ಅಂಗವಾಗಿ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಭಾರತ ಜಾಗೃತಿ ಓಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಗತ್ತಿಗೆ ಸಹಿಷ್ಣುತೆ, ಸರ್ವಧರ್ಮ ಸ್ವೀಕಾರ ಮನೋಭಾವವನ್ನು ಬೋಧಿಸಿದ ಧರ್ಮಕ್ಕೆ ಮತ್ತು ದೇಶಕ್ಕೆ ಸೇರಿದವರೆಂಬ ಹೆಮ್ಮೆ ನಮ್ಮದಾಗಬೇಕಿದೆ. ವಿಶ್ವದಲ್ಲಿ ಶಾಂತಿ ಸ್ಥಾಪನೆಗೆ ವಿವೇಕಾನಂದರ ಸಂದೇಶಗಳು ಇಂದಿನ ಸಂದಿಗ್ದ ಸ್ಥಿತಿಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿದ್ದು, ಇವುಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ಭವ್ಯಭಾರತದ ಭವಿಷ್ಯ ರೂಪಿಸುವ ಹೊಣೆಗಾರಿಕೆಯನ್ನು ಯುವಪೀಳಿಗೆ ನಿರ್ವಹಿಸಬೇಕಿದೆ. ಮಹಾತ್ಮರ ತ್ಯಾಗದ ಬೆಲೆಯನ್ನು ಅರಿತು ಸುಂದರ, ಸದೃಢ, ಸಮೃದ್ಧ ಸಮಾಜ ಕಟ್ಟಲು ನಾವೆಲ್ಲ ಪಣ ತೊಡಬೇಕಿದೆ. ಕ್ರೈಸ್ತ ಧರ್ಮವೊಂದೇ ವಿಶ್ವದಲ್ಲಿ ಶ್ರೇಷ್ಠ ಎಂದು ಪ್ರತಿಪಾದಿಸುವ ನಿಟ್ಟಿನಲ್ಲಿ 1893ರಲ್ಲಿ ಅಮೇರಿಕಾದ ಚಿಕ್ಯಾಗೋದ ವಿಶ್ವಮತ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಕೆಲ ಅನ್ಯಧರ್ಮೀಯರಿಗೆ ತನ್ನ ವಾಕ್ ಚಾತುರ್ಯ ಮತ್ತು ಸ್ಪಷ್ಟ ಮಾತುಗಳಿಂದ ಭಾರತೀಯ ಧರ್ಮ ಹಾಗೂ ಭಾತೃತ್ವ ಭಾವವನ್ನು ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಸ್ವಾಮಿ ವಿವೇಕಾನಂದರದ್ದಾಗಿದೆ.
ಇಂತಹ ಮಹಾತ್ಮರ ಸಂದೇಶಗಳನ್ನು ಮನೆ-ಮನಕ್ಕೆ ತಲುಪಿಸುವ ಕಾರ್ಯ ನಿರಂತರವಾಗಿ ಸಾಗಬೇಕಾಗಿದೆ. ಎಲ್ಲ ಧರ್ಮಗಳ ಸಾರವೂ ಹಿಂದೂ ಧರ್ಮದ ಸಾರವಾಗಿದ್ದು, ಗುಂಪುಗಾರಿಕೆ, ಜಾತಿ ಮತದ ದುರಾಭಿಮಾನದಿಂದ ಧರ್ಮಾಂದತೆ ವಿಶ್ವವನ್ನು ಆಕ್ರಮಿಸಿಕೊಂಡಿದೆ. ಅದೆಷ್ಟೋ ನಾಗರಿಕತೆಗಳು ನಾಶವಾಗುತ್ತಿವೆ. ವಿಶ್ವದಲ್ಲಿ ಶಾಂತಿ, ನೆಮ್ಮದಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ವಿವೇಕಾನಂದರ ಆದರ್ಶಗಳ ಪರಿಪಾಲನೆ ಹಾಗೂ ಸಂದೇಶಗಳ ಅಳವಡಿಕೆಯಿಂದ ನೆಮ್ಮದಿ ಸಾಧ್ಯವಾಗಲಿದೆ ಎಂದರು.
ಟಿ.ಎಸ್. ಜಮಾದಾರ, ಸುಧೀರಸಿಂಹ ಗೋರ್ಪಡೆ, ರುದ್ರಣ್ಣ ಗುಳಗುಳಿ, ಮೋಹನ ಮಾನಶೆಟ್ಟಿ, ಮಂಜುನಾಥ ಹದ್ದಣವರ ಮುಂತಾದವರು ಪಾಲ್ಗೊಂಡಿದ್ದರು. ನಂತರ ಹುಬ್ಬಳ್ಳಿ ರಸ್ತೆಯಿಂದ ಪ್ರಾರಂಭವಾದ ಭಾರತ ಜಾಗೃತಿ ಓಟ ನಗರದ ಕಿತ್ತೂರು ಚನ್ನಮ್ಮ ವೃತ್ತ, ಬನ್ನಿಕಟ್ಟೆ, ಬಸವೇಶ್ವರ ವೃತ್ತ, ಹುಯಿಲಗೋಳ ನಾರಾಯಣರಾವ ವೃತ್ತ, ಮಹೇಂದ್ರಕರ್ ಸರ್ಕಲ್ ಮೂಲಕ ಮಹಾತ್ಮಾಗಾಂಧಿ ವೃತ್ತಕ್ಕೆ ಆಗಮಿಸಿ ಒಂದೇ ಮಾತರಂ ಗೀತೆಯೊಂದಿಗೆ ಸಮಾಪ್ತಿಗೊಂಡಿತು. ಓಟದಲ್ಲಿ ವಿವಿಧ ಶಾಲಾ, ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಛಗನ್‌ರಾಜ ಪುರೋಹಿತ, ಶಹರ ಬಿಜೆಪಿ ಅಧ್ಯಕ್ಷ ಈಶಣ್ಣ ಮುನವಳ್ಳಿ, ಬಿ.ಎಚ್. ಲದ್ವಾ, ಶ್ರೀಕಾಂತ ಖಟವಟೆ, ತೋಂಟೋಸಾ ಭಾಂಡಗೆ, ನಗರಸಭೆಯ ಸದಸ್ಯ ಪ್ರವೀಣ ಬನ್ಸಾಲಿ, ಲಿಂಗರಾಜ ಹರ್ತಿ, ವಿಠ್ಠಲ ಭಾಂಡಗೆ, ರವಿ ಹಡಪದ, ವಿನಾಯಕ ಹಬೀಬ ಮುಂತಾದವರು ಪಾಲ್ಗೊಂಡಿದ್ದರು.