ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಹದಗೆಟ್ಟ ರಸ್ತೆ: ಸವಾರರ ಸಂಕಟ

Lingaraj Badiger
Updated On : 12 Sept 2013, 11:05 am

-ಪಿ.ಎಸ್. ಪಾಟೀಲ
ಕನ್ನಡಪ್ರಭ ವಾರ್ತೆ, ರೋಣ, ಸೆ. 11  

ತಾಲೂಕು ಕೇಂದ್ರವಾದ ರೋಣ ಪಟ್ಟಣದ ಮಧ್ಯೆ ಹಾದು ಹೋದ ರಾಜ್ಯ ಹೆದ್ದಾರಿ ತೆಗ್ಗು, ಗುಂಡಿಗಳು ಬಿದ್ದು ಈಗ ಸಂಪೂರ್ಣ ಹದಗೆಟ್ಟಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯದಿಂದ ವಾಹನ ಸವಾರರು, ಪಾದಚಾರಿಗಳು ಕೈಯಲ್ಲಿ ಜೀವ ಹಿಡಿದುಕೊಂಡು ಸಂಚರಿಸುವಂತಹ ಸ್ಥಿತಿ ನಿರ್ಮಾಣವಾಗಿದೆ.
ಒಂದು ತಿಂಗಳಿನಿಂದ ಪಟ್ಟಣದಲ್ಲಿ ರಾಜ್ಯ ಹೆದ್ದಾರಿಯು ಮುಲ್ಲಾನಬಾವಿ ವೃತ್ತ, ವೀರಭದ್ರೇಶ್ವರ ಗುಡಿ ಎದುರಿಗೆ, ಪೋತದಾರರಾಜನ ಕಟ್ಟೆ ಹತ್ತಿರ, ಪುರಸಭೆ ಮಾರುಕಟ್ಟೆ ಸಂಕೀರ್ಣ ಎದುರಿಗೆ ಮತ್ತು ಸುಂಕದರವರ ಅಂಗಡಿ ಮುಂದೆ ಹೀಗೆ ಅಲ್ಲಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ. ವಾಹನ ಸವಾರರು ಮತ್ತು ಪಾದಚಾರಿಗಳು ರಸ್ತೆ ದಾಟಲು, ಗುಂಡಿಗಳನ್ನು ತಪ್ಪಿಸಲು ದೊಡ್ಡ ಸರ್ಕಸ್ ಮಾಡಬೇಕಾಗುತ್ತದೆ. ನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತವೆ. ಸ್ವಲ್ಪ ಆಯ ತಪ್ಪಿದರೆ ಅಪಾಯ ತಪ್ಪಿದ್ದಲ್ಲ. ನಿತ್ಯ ಒಂದಿಲ್ಲೊಂದು ಅಪಘಾತ ಸಂಭವಿಸುತ್ತಲಿವೆ. ಹೆಚ್ಚಿನ ಅನಾಹುತ ಸಂಭವಿಸುವ ಮುಂಚೆ ಪಿಡಬ್ಲ್ಯೂಡಿ ಅಧಿಕಾರಿಗಳು ಎಚ್ಚೆತ್ತು ಹದಗೆಟ್ಟ ರಸ್ತೆ ದುರಸ್ತಿಗೆ ಮುಂದಾಗಬೇಕಿದೆ.
ವಾಹನಕ್ಕೆ ಡಿಕ್ಕಿ: ಪಟ್ಟಣದ ಸುಂಕದರವರ ಕಿರಾಣಿ ಅಂಗಡಿ ಹತ್ತಿರ ಬಿದ್ದ ದೊಡ್ಡ ಗುಂಡಿಗಳಿಂದ ನಿತ್ಯ ವಾಹನ ಸವಾರರು ಮತ್ತು ಪಾದಚಾರಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ವಾಹನ ಬಂತೆಂದರೆ ಸಾಕು ಗುಂಡಿಯಲ್ಲಿನ ನೀರು ಸಿಡಿಯುತ್ತವೆ ಎಂದು ಪಾದಚಾರಿಗಳು ಅಲ್ಲಿಂದ ಹೋಗಲೆತ್ನಿಸಿದಾಗ ಎದುರಿಗೆ ಬರುವ ವಾಹನಕ್ಕೆ ಡಿಕ್ಕಿ ಹೊಡೆಯುತ್ತಾರೆ. ವಾಹನಗಳ ಗಾಲಿ ಗುಂಡಿಯಲ್ಲಿ ಇಳಿದರೆ ನೀರು ಪಕ್ಕದಲ್ಲಿರುವ ಹೋಟೆಲ್, ಸ್ವೀಟ ಮಾರ್ಟ್, ಬಟ್ಟೆ ಅಂಗಡಿ, ಕಿರಾಣಿ ಅಂಗಡಿಯಲ್ಲಿನ ಸಾಮಗ್ರಿಗಳಿಗೆ ಸಿಡಿಯುತ್ತವೆ. ಇದರಿಂದ ಬೇಸತ್ತ ಅಂಗಡಿಕಾರರು ಬಾಗಿಲು ಮುಚ್ಚಿಕೊಂಡು ವ್ಯಾಪಾರ ಮಾಡುವಂತಾಗಿದೆ. ದುರಸ್ತಿಗಾಗಿ ಕಳೆದ 1 ತಿಂಗಳಿಂದ ಲೋಕೋಪಯೋಗಿ ಇಲಾಖೆ ಮತ್ತು ಪುರಸಭೆಗೆ ಒತ್ತಾಯಿಸಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ವ್ಯಾಪಾರಸ್ಥ ಯಶವಂತ ಸಾವಂತ.
ದುರಸ್ತಿಗೆ ಆಗ್ರಹ: ಪಟ್ಟಣದಿಂದ ಜಕ್ಕಲಿಗೆ ಹೋಗುವ ರಸ್ತೆಯನ್ನು ನಿರ್ಮಿಸಿ ಒಂದೂವರೆ ವರ್ಷ ಕಳೆದಿಲ್ಲ. ಆದರೆ, 6 ತಿಂಗಳಿನಿಂದ ರಸ್ತೆಯೂದ್ದಕ್ಕೂ ತೆಗ್ಗು ಬಿದ್ದು ಸಂಪೂರ್ಣ ಹದಗೆಟ್ಟಿದೆ. ದುರಸ್ತಿಗಾಗಿ ಲೋಕೋಪಯೋಗಿ ಇಲಾಖೆ ಅಧಿಕಾರಿ ಮತ್ತು ಗುತ್ತಿಗೆದಾರರನ್ನು ಒತ್ತಾಯಿಸುತ್ತಾ ಬರಲಾಗಿದೆ. ಕಾಟಾಚಾರಕ್ಕೆ ಎಂಬಂತೆ ದುರಸ್ತಿ ಮಾಡುತ್ತಿದ್ದಾರೆ. ಮಳೆಯಾದರೆ ರಸ್ತೆ ಹದಗೆಟ್ಟು ಕೆಸರುಮಯವಾಗಿ ಗಲೀಜು ತುಂಬುತ್ತದೆ. ವೃದ್ಧರು, ಮಹಿಳೆಯರಿಗೆ, ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ. ಕೂಡಲೇ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕುರಬಸಾಬಗಲ್ಲಿ ನಿವಾಸಿಗಳಾದ ಇಮಾಮಸಾಬ ನದಾಫ್, ಸಹಬಾಜ ಗದಗ, ಲಾಡಸಾಬ ಹುಲ್ಯಾಳ, ಅಬ್ದುಲ್ ಸೈಯದ್, ಮಹಬೂಬ ಕಟ್ಟಿಮನಿ ಆಗ್ರಹಿಸುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement