ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಸೆ. 12
ಪುರಸಭೆ ಅಧ್ಯಕ್ಷರಾಗಿ ಗಂಗವ್ವ ಶಿವರುದ್ರಯ್ಯ ಫಕ್ಕೀರಸ್ವಾಮಿಮಠ ಹಾಗೂ ಉಪಾಧ್ಯಕ್ಷರಾಗಿ ಮಂಜುನಾಥಗೌಡ ರುದ್ರಗೌಡ ಪಾಟೀಲ ಗುರುವಾರ ಅವಿರೋಧ ಆಯ್ಕೆಯಾಗಿದ್ದಾರೆ.
ಪುರಸಭೆಯ ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಗಂಗವ್ವ ಫಕ್ಕೀರಸ್ವಾಮಿಠ ಹೊರತಾಗಿ ಯಾರೊಬ್ಬರೂ ನಾಮಪತ್ರ ಸಲ್ಲಿಸದೇ ಇರುವುದರಿಂದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅದೇ ರೀತಿಯಾಗಿ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಂಜುನಾಥಗೌಡ ಪಾಟೀಲ ಹಾಗೂ ಗಣಪತಿ ನಾರಾಯಣಪ್ಪ ಬೇವಿನಮರದ ನಾಮಪತ್ರ ಸಲ್ಲಿಸಿದ್ದರು. ನಂತರ ನಾಮಪತ್ರ ಪರಿಶೀಲನೆ ನಡೆಸಿದ ಚುನಾವಣಾಧಿಕಾರಿಗಳು ಗಣಪತಿ ಬೇವಿನಮರದ ನಾಮಪತ್ರ ಸಲ್ಲಿಸುವ ವೇಳೆಯ ಅವಧಿ ಮುಗಿದು ಹೋಗಿದ್ದರಿಂದ ಅವರ ನಾಮಪತ್ರ ತಿರಸ್ಕಾರಗೊಂಡಿದ್ದರಿಂದ ಉಪಾಧ್ಯಕ್ಷರಾಗಿ ಮಂಜುನಾಥಗೌಡ ಪಾಟೀಲ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ತಹಸೀಲ್ದಾರ್ ಆರ್.ಬಿ. ನಿಂಗನಗೌಡರ ತಿಳಿಸಿದರು.
ಲಕ್ಷ್ಮೇಶ್ವರ ನಗರ ಸುಧಾರಣಾ ಸಮಿತಿ: ಒಟ್ಟು 23 ಸದಸ್ಯರಲ್ಲಿ 20 ಸದಸ್ಯರು ಚುನಾವಣೆಯಲ್ಲಿ ಭಾಗವಹಿಸಿದ್ದರು. 3 ಬಿಜೆಪಿ ಸದಸ್ಯರು ಚುನಾವಣಾ ಸಭೆಗೆ ಗೈರು ಹಾಜರಾಗಿದ್ದರು. ಈ ಹಿಂದೆ ನಡೆದ ಪುರಸಭೆ ಚುನಾವಣೆಯಲ್ಲಿ 10 ಕಾಂಗ್ರೆಸ್‌ನಿಂದ, 7 ಬಿಎಸ್‌ಆರ್ ಕಾಂಗ್ರೆಸ್‌ನಿಂದ, 3 ಬಿಜೆಪಿಯಿಂದ. ಒಬ್ಬರು ಅವಿರೋಧವಾಗಿ, ಒಬ್ಬರು ಕೆಜೆಪಿಯಿಂದ, ಒಬ್ಬರು ಪಕ್ಷೇತರರಾಗಿ ಆಯ್ಕೆಯಾಗಿದ್ದರು. ಆದರೆ, ಇತ್ತೀಚಿನ ಬೆಳವಣಿಗೆಯಲ್ಲಿ ಹೊಸದೊಂದು ಸಮಿತಿಯು ಉಗಮವಾಗಿ ನಾಟಕೀಯ ತಿರುವು ಪಡೆದುಕೊಂಡಿದ್ದು ಅಚ್ಚರಿಯ ಸಂಗತಿಯಾಗಿದೆ. ಇದಕ್ಕೂ ಮೊದಲು ನಡೆದ ಬೆಳವಣಿಗೆಯಲ್ಲಿ ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ಹಾಗೂ ಕಾಂಗ್ರೆಸ್‌ನ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಇವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪುರಸಭೆಗೆ ಆಯ್ಕೆಯಾದ ಎಲ್ಲ ಸದಸ್ಯರು ಹಾಗೂ ಪ್ರಮುಖರು ಲಕ್ಷ್ಮೇಶ್ವರ ಪಟ್ಟಣದ ಅಭಿವೃದ್ಧಿಗೆ ಸಹಕಾರ ನೀಡಲು ಒಪ್ಪಿ, ಲಕ್ಷ್ಮೇಶ್ವರ ನಗರ ಸುಧಾರಣಾ ಸಮಿತಿ ರಚಿಸಿಕೊಂಡಿದ್ದಾರೆ. ಈ ಸಮಿತಿಯ ನಿರ್ಣಯದಂತೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯದೇ ಅವಿರೋಧ ಆಯ್ಕೆ ನಡೆದಿದೆ ಎಂದು ಸಮಿತಿಯ ಶಿವಣ್ಣ ನೆಲವಿಗಿ ಹಾಗೂ ಮಾಜಿ ಅಧ್ಯಕ್ಷ ಶಂಕ್ರಣ್ಣ ಅಂದಲಗಿ ತಿಳಿಸಿದರು.
ಮಾಜಿ ಅಧ್ಯಕ್ಷರಾದ ಎನ್.ಜಿ. ಹೊಂಬಳ, ಶಂಕ್ರಪ್ಪ ಮ್ಯಾಗೇರಿ, ಮಾಜಿ ಉಪಾಧ್ಯಕ್ಷ ಯಲ್ಲಪ್ಪಗೌಡ ಉದ್ದನಗೌಡರ, ಎಸ್.ಪಿ.ಪಾಟೀಲ, ಗದಿಗೆಪ್ಪ ಯತ್ನಳ್ಳಿ, ಮೊದಲಾದವರು ಹಾಜರಿದ್ದರು.