ಕ್ರೀಡೆಯಿಂದ ಮಾನಸಿಕ, ದೈಹಿಕ ಬೆಳವಣಿಗೆ: ಶಾಸಕ ದೊಡ್ಡಮನಿ
ಲಕ್ಷ್ಮೇಶ್ವರ: ಕ್ರೀಡೆಯು ಕೇವಲ ದೈಹಿಕ ಬೆಳವಣಿಗೆಗೆ ಮಾತ್ರ ಸಹಕಾರಿಯಾಗಿರದೇ ಮಾನಸಿಕ ವಿಕಾಸಕ್ಕೂ ಉತ್ತೇಜನ ನೀಡುತ್ತದೆ ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಅವರು ಗುರುವಾರ ಸಮಿಪದ ಶಿಗ್ಲಿ ಗ್ರಾಮದ ಎಸ್.ಎಸ್. ಕೂಡ್ಲಮಠ ಪ್ರೌಢಶಾಲೆಯಲ್ಲಿ ಪ್ರಾರಂಭವಾದ 2013-14ನೇ ಸಾಲಿನ ಗ್ರಾಮೀಣ ಹಾಗೂ ದಸರಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್.ದೊಡ್ಡಗೌಡರ ಮಾತನಾಡಿ, ಗ್ರಾಮೀಣ ಕ್ರೀಡಾಕೂಟದಲ್ಲಿ ಗ್ರಾಮೀಣ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕ್ರೀಡೆಗೆ ಪ್ರೋತ್ಸಾಹ ನೀಡಬೇಕು. ಕ್ರೀಡೆಗಳು ಮಾನವನ ಅವಿಭಾಜ್ಯ ಅಂಗವಾಗಿವೆ. ಕ್ರೀಡೆಯಲ್ಲಿ ಸೋಲು ಗೆಲವು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ ಎಂದರು.
ತಾಪಂ ಸದಸ್ಯ ತಿಮ್ಮರೆಡ್ಡಿ ಅಳವಂಡಿ ಹಾಗೂ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷ ಡಿ.ವೈ. ಹುನಗುಂದ ಮುಂತಾದವರು ಮಾತನಾಡಿದರು. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ.ಆರ್. ಲಮಾಣಿಯವರನ್ನು ಸನ್ಮಾನಿಸಲಾಯಿತು. ತಾಪಂ ಅಧ್ಯಕ್ಷೆ ಸುನಂದಮ್ಮ ಬಿದರಳ್ಳಿ, ಜಿಪಂ ಸದಸ್ಯೆ ನಿರ್ಮಲಾ ಬರದೂರ, ಗ್ರಾಪಂ ಉಪಾಧ್ಯಕ್ಷ ಮನೋಹರ ಕರ್ಜಗಿ, ತಾಪಂ ಉಪಾಧ್ಯಕ್ಷೆ ಶಾರದಾ ಕವಲೂರ, ತಾಪಂ ಮಾಜಿ ಸದಸ್ಯ ರಾಜರತ್ನ ಹುಲಗೂರ, ಎಫ್.ಕೆ. ಕಾಳಪ್ಪನವರ. ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎನ್.ಎನ್. ನೆಗಳೂರ ಹಾಗೂ ಶಿಗ್ಲಿ ಗ್ರಾಪಂನ ಎಲ್ಲ ಸದಸ್ಯರು ಹಾಗೂ ಪಿಡಿಓ ಬಿ.ಟಿ. ಅಮ್ಮನವರ ಹಾಜರಿದ್ದರು.
ಸಹಾಯಕ ಯುವಜನ ಸೇವಾ ಹಾಗೂ ಕ್ರೀಡಾಧಿಕಾರಿ ಎಂ.ಡಿ. ತಳ್ಳಳ್ಳಿ ಸ್ವಾಗತಿಸಿದರು. ಶಿಕ್ಷಕ ಬಿ.ಬಿ. ಚಿಟಗಿ ನಿರೂಪಿಸಿದರು.