ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗಣೇಶೋತ್ಸವಕ್ಕೆ ದೇಸಿ ಸೊಗಡು ನೀಡಿದ ಗ್ರಾಮೀಣ ಕ್ರೀಡೆಗಳು

Lingaraj Badiger
Updated On : 13 Sept 2013, 11:42 am

-ಶರಣು ಸೊಲಗಿ
ಮುಂಡರಗಿ: ಗಣೇಶೋತ್ಸವ ಸಂಭ್ರಮದಿಂದ ಜರುಗುತ್ತಿದ್ದು, ಇಲ್ಲಿನ ಬಸವ ಸಾಂಸ್ಕೃತಿಕ ವೇದಿಕೆ, ಗೆಳೆಯರ ಬಳಗ ಮತ್ತು ಗಣೇಶ ಯುವಶಕ್ತಿ ಸಂಘದಿಂದ ದೇಶಿ ಕ್ರೀಡಾಕೂಟ ಏರ್ಪಡಿಸಿ, ದೇಶಿ ಕ್ರೀಡೆಗಳಿಗೆ ಪ್ರೋತ್ಸಾಹಿಸುವ ಮೂಲಕ ಮುಂಡರಗಿಯಲ್ಲಿ ಗಣೇಶ ಹಬ್ಬವನ್ನು ವಿಭಿನ್ನವಾಗಿ ಆಚರಿಸಲಾಗುತ್ತಿದೆ.
ಪಟ್ಟಣವೂ ಸೇರಿದಂತೆ ತಾಲೂಕಿನ ವಿವಿಧೆಡೆ ಗಣೇಶ ಚತುರ್ಥಿ ವಿಜೃಂಭಣೆಯಿಂದ ನಡೆದಿದ್ದು, ಮುಂಡರಗಿ ಪಟ್ಟಣ ಹಾಗೂ ತಾಲೂಕಿನಾದ್ಯಂತ ಒಟ್ಟು 86 ಕಡೆಗಳಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಪಟ್ಟಣದ ವಿದ್ಯಾನಗರದಲ್ಲಿ ಗೌರಿಪುತ್ರ ತರುಣ ಸಂಘದ ಗೆಳೆಯರೆಲ್ಲರೂ ಸೇರಿ ಪ್ರತಿಷ್ಠಾಪನೆ ಮಾಡಿರುವ ಗಣೇಶ 13.5 ಅಡಿ ಎತ್ತರವಿದ್ದು, ಇದು ಗದಗ ಜಿಲ್ಲೆಯಲ್ಲಿಯೇ ಅತಿ ಎತ್ತರದ ಗಣೇಶ ಮೂರ್ತಿ. ಪಟ್ಟಣದ ಶ್ರೀ ಗಣೇಶ ಯುವಶಕ್ತಿ ಸಂಘದಿಂದ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ ಸುಮಾರು 13 ಅಡಿ ಉದ್ದವಿದ್ದು, ಜಿಲ್ಲೆಯ ಎರಡನೇ ಅತಿ ಎತ್ತರದ ಗಣೇಶ ಮೂರ್ತಿ ಎಂದು ಹೇಳಲಾಗುತ್ತಿದೆ.
ಆಕರ್ಷಕ ಗಣಪತಿ ಪ್ರತಿಷ್ಠಾಪನೆ
ಮುಂಡರಗಿ ಬೆಳ್ಳಟ್ಟಿ ಚಾಲಕರ ಹಾಗೂ ಮಾಲೀಕರ ಸಂಘ, ತುಫಾನ್ ಯುವಕರ ಸಂಘ, ವರಸಿದ್ಧಿ ವಿನಾಯಕ ಸಂಘ, ಏಕದಂತ ಗೆಳೆಯರ ಬಳಗ, ವಿನಾಯಕ ತರುಣ ಸಂಘ, ಮಂಜುನಾಥ ಯುವ ಸಂಘ, ಶ್ರೀ ಗಣೇಶ ಯುವ ಶಕ್ತಿ ಸಂಘ, ಹೂ ಮಾರಾಟಗಾರರ ಸಂಘ ಸೇರಿದಂತೆ ಅನೇಕ ಸಂಘಟನೆಗಳಿಂದ ಜೋಡು ಸಿಂಹದ ಮೇಲೆ ಕುಳಿತಿರುವ ಗಣಪ, ಇಲಿಯ ಮೇಲೆ ಕುಳಿತಿರುವ ಗಣಪ, ಸಿಂಹಾಸನದ ಮೇಲೆ ಕುಳಿತಿರುವ ಗಣಪ, ಮುತ್ತಿನ ಗಣಪ, ರು. 2 ಹಾಕಿದರೆ ಉಂಡಿ ನೀಡುವ ಗಣಪ, ಕೋಮು ಸೌಹಾರ್ದ ಸಾರುವ ಕೆ.ಆರ್. ಬೆಲ್ಲದ ಕಾಲೇಜಿನ ಗಣಪ ಸೇರಿದಂತೆ ಅನೇಕ ಆಕರ್ಷಕ ಗಣಪತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಬಹುತೇಕ ಎಲ್ಲ ಸಾರ್ವಜನಿಕ ಗಣೇಶ ಸಮಿತಿಯವರು ಐದು ದಿನಗಳಲ್ಲಿ ಒಂದು ದಿನ ಉಚಿತ ಪ್ರಸಾದದ ವ್ಯವಸ್ಥೆ ಮಾಡುವುದು ವಿಶೇಷವಾಗಿದೆ.
ದೇಶಿ ಕ್ರೀಡೆಗಳಿಗೆ ಪ್ರೋತ್ಸಾಹ
ಗಣೇಶ ಮೂರ್ತಿಗಳನ್ನು ತಂದು ಪಟಾಕಿ ಸಿಡಿಸಿ ಹಬ್ಬ ಆಚರಿಸಿದರೆ ಸಾಲದು, ಒಂದು ಮನರಂಜನೆಯೂ ಇರಬೇಕೆನ್ನುವ ಉದ್ದೇಶದಿಂದ ಸ್ಥಳೀಯ ಬಸವ ಸಾಂಸ್ಕೃತಿಕ ವೇದಿಕೆ ಹಾಗೂ ಕ್ರಿಯಾಶೀಲ ಗೆಳೆಯರೆಲ್ಲರೂ ಸೇರಿ ದಕ್ಷಿಣ ಕನ್ನಡಕ್ಕೆ ಸೀಮಿತವಾದ ಕೆಸರುಗದ್ದೆ ಓಟ, ಕೆಸರಿನಲ್ಲಿ ಮಡಕೆ ಒಡೆಯುವುದು, ಕೆಸರಿನಲ್ಲಿ ವಾಲಿಬಾಲ್ ಆಡುವ ಕಾರ್ಯಕ್ರಮವನ್ನು ಪಟ್ಟಣದ ಹೆಸರೂರ ರಸ್ತೆಯಲ್ಲಿರುವ ನಾರಾಯಣಪ್ಪ ಇಲ್ಲೂರ ಅವರ ಜಾಗೆಯಲ್ಲಿ ಮಹಿಳೆ ಹಾಗೂ ಪುರುಷರಿಗಾಗಿ ಹಮ್ಮಿಕೊಳ್ಳಲಾಗಿತ್ತು.
ಶ್ರೀ ಗಣೇಶ ಯುವಶಕ್ತಿ ಸಂಘ ಅಪ್ಪಟ ದೇಶಿ ಕಲೆಯನ್ನು ಉಳಿಸುವ ಉದ್ದೇಶದಿಂದ ಧಾರವಾಡ ಜಿಲ್ಲೆ ಹರ್ಲಾಪುರ ಗ್ರಾಮದ ವಿದ್ಯಾರ್ಥಿಗಳ ಮಲ್ಲಗಂಬ ಪ್ರದರ್ಶನ ಹಮ್ಮಿಕೊಳ್ಳುವ ಮೂಲಕ ಎರಡೂ ಸಂಘಟನೆಯವರು ಪಟ್ಟಣದ ಜನತೆ ಸೇರಿದಂತೆ ದೇಶಿ ಆಟಗಳ ಬಗ್ಗೆ ಎಲ್ಲರೂ ಮತ್ತೆ ಗಮನ ನೀಡುವಂತೆ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement