ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ದೇಶಿ ಕ್ರೀಡೆ ಸಂಘಟಿಸಿ ಗಣೇಶೋತ್ಸವ ವಿಭಿನ್ನಾಚರಣೆ

Lingaraj Badiger
Updated On : 13 Sept 2013, 11:35 am

ಮುಂಡರಗಿ: ಗಣೇಶೋತ್ಸವ ಸಂಭ್ರಮದಿಂದ ಜರುಗುತ್ತಿದ್ದು, ಇಲ್ಲಿನ ಬಸವ ಸಾಂಸ್ಕೃತಿಕ ವೇದಿಕೆ, ಗೆಳೆಯರ ಬಳಗ ಮತ್ತು ಗಣೇಶ ಯುವಶಕ್ತಿ ಸಂಘದಿಂದ ದೇಶಿ ಕ್ರೀಡಾಕೂಟ ಏರ್ಪಡಿಸಿ, ದೇಶಿ ಕ್ರೀಡೆಗಳಿಗೆ ಪ್ರೋತ್ಸಾಹಿಸುವ ಮೂಲಕ ಮುಂಡರಗಿಯಲ್ಲಿ ಗಣೇಶ ಹಬ್ಬವನ್ನು ವಿಭಿನ್ನವಾಗಿ ಆಚರಿಸಲಾಗುತ್ತಿದೆ.
ಪಟ್ಟಣವೂ ಸೇರಿದಂತೆ ತಾಲೂಕಿನ ವಿವಿಧೆಡೆ ಗಣೇಶ ಚತುರ್ಥಿ ವಿಜೃಂಭಣೆಯಿಂದ ನಡೆದಿದ್ದು, ಮುಂಡರಗಿ ಪಟ್ಟಣವೂ ಸೇರಿದಂತೆ ತಾಲೂಕಿನಾದ್ಯಂತ ಒಟ್ಟು 86 ಕಡೆಗಳಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಪಟ್ಟಣದ ವಿದ್ಯಾನಗರದಲ್ಲಿ ಗೌರಿಪುತ್ರ ತರುಣ ಸಂಘದ ಗೆಳೆಯಲ್ಲರೂ ಸೇರಿ ಪ್ರತಿಷ್ಠಾಪನೆ ಮಾಡಿರುವ ಗಣೇಶ 13.5 ಅಡಿ ಎತ್ತರವಿದ್ದು, ಇದು ಗದಗ ಜಿಲ್ಲೆಯಲ್ಲಿಯೇ ಅತಿ ಎತ್ತರದ ಗಣೇಶ ಮೂರ್ತಿ. ಪಟ್ಟಣದ ಶ್ರೀ ಗಣೇಶ ಯುವಶಕ್ತಿ ಸಂಘದಿಂದ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ ಸುಮಾರು 13 ಅಡಿ ಉದ್ದವಿದ್ದು, ಇದು ಜಿಲ್ಲೆಗೆ ಅತಿ ಎತ್ತರದ ಎರಡನೇ ಸ್ಥಾನದ ಗಣೇಶ ಮೂರ್ತಿಯಾಗಿದೆ ಎಂದು ಹೇಳಲಾಗುತ್ತಿದೆ.
ಆಕರ್ಷಕ ಗಣಪತಿ ಪ್ರತಿಷ್ಠಾಪನೆ: ಮುಂಡರಗಿ ಬೆಳ್ಳಟ್ಟಿ ಚಾಲಕರ ಹಾಗೂ ಮಾಲೀಕರ ಸಂಘ, ತುಫಾನ್ ಯುವಕರ ಸಂಘ, ವರಸಿದ್ಧಿ ವಿನಾಯಕ ಸಂಘ, ಏಕದಂತ ಗೆಳೆಯರ ಬಳಗ, ವಿನಾಯಕ ತರುಣ ಸಂಘ, ಮಂಜುನಾಥ ಯುವ ಸಂಘ, ಶ್ರೀ ಗಣೇಶ ಯುವ ಶಕ್ತಿ ಸಂಘ, ಹೂ ಮಾರಾಟಗಾರರ ಸಂಘ ಸೇರಿದಂತೆ ಅನೇಕ ಸಂಘಟನೆಗಳಿಂದ ಜೋಡು ಸಿಂಹದ ಮೇಲೆ ಕುಳಿತಿರುವ ಗಣಪ, ಇಲಿಯ ಮೇಲೆ ಕುಳಿತಿರುವ ಗಣಪ, ಸಿಂಹಾಸನದ ಮೇಲೆ ಕುಳಿತಿರುವ ಗಣಪ, ಮುತ್ತಿನ ಗಣಪ, ರು. 2 ಹಾಕಿದರೆ ಉಂಡಿ ನೀಡುವ ಗಣಪ, ಕೋಮು ಸೌಹಾರ್ದತೆ ಸಾರುವ ಕೆ.ಆರ್. ಬೆಲ್ಲದ ಕಾಲೇಜಿನ ಗಣಪ ಸೇರಿದಂತೆ ಅನೇಕ ಆಕರ್ಷಕ ಗಣಪತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಬಹುತೇಕ ಎಲ್ಲ ಸಾರ್ವಜನಿಕ ಗಣೇಶ ಸಮಿತಿಯವರು 5 ದಿನಗಳಲ್ಲಿ ಒಂದು ದಿನ ಉಚಿತ ಪ್ರಸಾದದ ವ್ಯವಸ್ಥೆ ಮಾಡುವುದು ಇಲ್ಲಿನ ವಿಶೇಷವಾಗಿದೆ.
ದೇಶಿ ಕ್ರೀಡೆಗಳಿಗೆ ಪ್ರೋತ್ಸಾಹ: ಗಣೇಶ ಮೂರ್ತಿಗಳನ್ನು ತಂದು ಪಟಾಕಿ ಸಿಡಿಸಿ ಹಬ್ಬ ಆಚರಿಸಿದರೆ ಸಾಲದು, ಒಂದು ಮನರಂಜನೆಯೂ ಇರಬೇಕೆನ್ನುವ ಉದ್ದೇಶದಿಂದ ಸ್ಥಳೀಯ ಬಸವ ಸಾಂಸ್ಕೃತಿಕ ವೇದಿಕೆ ಹಾಗೂ ಕ್ರಿಯಾಶೀಲ ಗೆಳೆಯರೆಲ್ಲರೂ ಸೇರಿ ದಕ್ಷಿಣ ಕನ್ನಡಕ್ಕೆ ಸೀಮಿತವಾದ ಕೆಸರುಗದ್ದೆ ಓಟ, ಕೆಸರಿನಲ್ಲಿ ಮಡಕೆ ಒಡೆಯುವುದು, ಕೆಸರಿನಲ್ಲಿ ವಾಲಿಬಾಲ್ ಆಡುವ ಕಾರ್ಯಕ್ರಮವನ್ನು ಪಟ್ಟಣದ ಹೆಸರೂರ ರಸ್ತೆಯಲ್ಲಿರುವ ನಾರಾಯಣಪ್ಪ ಇಲ್ಲೂರ ಅವರ ಜಾಗೆಯಲ್ಲಿ ಮಹಿಳೆ ಹಾಗೂ ಪುರುಷರಿಗಾಗಿ ಹಮ್ಮಿಕೊಳ್ಳಲಾಗಿದೆ. ಅದೇ ರೀತಿ ಇಲ್ಲಿನ ಶ್ರೀ ಗಣೇಶ ಯುವಶಕ್ತಿ ಸಂಘವು ಅಪ್ಪಟ ದೇಶಿ ಕಲೆಯನ್ನು ಉಳಿಸುವ ಉದ್ದೇಶದಿಂದ ಧಾರವಾಡ ಜಿಲ್ಲೆ ಹರ್ಲಾಪುರ ಗ್ರಾಮದ ವಿದ್ಯಾರ್ಥಿಗಳ ಮಲ್ಲಗಂಬ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಎರಡೂ ಸಂಘಟನೆಯವರು ಪಟ್ಟಣದ ಜನತೆ ಸೇರಿದಂತೆ ದೇಶಿ ಆಟಗಳ ಬಗ್ಗೆ ಎಲ್ಲರೂ ಮತ್ತೆ ಗಮನ ನೀಡುವಂತೆ ಮಾಡಿದ್ದಾರೆ.
ಸಾಂಸ್ಕೃತಿಕ ಹಬ್ಬ ಕಟ್ಟಿಕೊಟ್ಟ ಬಸವ ಸಾಂಸ್ಕೃತಿಕ ವೇದಿಕೆ
ಮುಂಡರಗಿ:  ನಾಟಕೋತ್ಸವ, ವಿವಿಧ ರೀತಿಯ ದೇಶಿ ಕ್ರೀಡೆಗಳ ಸಂಘಟಿಸುವುದು ಸೇರಿದಂತೆ ಅನೇಕ ಕಾರ್ಯಕ್ರಮಗಳ ಮೂಲಕ ಮುಂಡರಗಿ ಭಾಗದಲ್ಲಿ ಸಾಂಸ್ಕೃತಿಕ ಹಬ್ಬವನ್ನು ಕಟ್ಟಿಕೊಡುವಲ್ಲಿ ಬಸವ ಸಾಂಸ್ಕೃತಿಕ ವೇದಿಕೆ ಯಶಸ್ವಿಯಾಗಿದೆ ಎಂದು ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್. ಗೌಡರ ಹೇಳಿದರು.
ಅವರು ಗುರುವಾರ ಪಟ್ಟಣದಲ್ಲಿ ಗಣೇಶ ಹಬ್ಬದ ಅಂಗವಾಗಿ ಬಸವ ಸಾಂಸ್ಕೃತಿಕ ವೇದಿಕೆ ಹಾಗೂ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಕೆಸರು ಗದ್ದೆ ಓಟ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಬಸವ ಸಾಂಸ್ಕೃತಿ ವೇದಿಕೆ ಅಧ್ಯಕ್ಷ ಹೇಮಂತಗೌಡ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಿ.ಮೋಹನ್ ಮಾತನಾಡಿದರು. ನಾರಾಯಣಪ್ಪ ಇಲ್ಲೂರ, ಅಂದಪ್ಪ ಬೆಲ್ಲದ, ಗುಂಡಪ್ಪ ಅಂಗಡಿ, ಈಶ್ವರಪ್ಪ ಹಂಚಿನಾಳ, ರಮೇಶ ಭೂಮರಡ್ಡಿ, ಎಚ್.ಎಸ್. ಪಾಟೀಲ, ಕಾರ್ಯದರ್ಶಿ ಆನಂದಗೌಡ ಪಾಟೀಲ, ಧ್ರುವಕುಮಾರ ಹೊಸಮನಿ, ಡಿ.ಡಿ. ಮೋರನಾಳ, ರಾಮಣ್ಣ ಬಳ್ಳಾರಿ, ಸೊಲಬಣ್ಣ ಜೋಬಾಳಿ, ಪಾಲಾಕ್ಷಿ ಗಣದಿನ್ನಿ, ಶ್ರೀನಿವಾರ ಉಪ್ಪಿನಬೆಟಗೇರಿ, ಗುರುರಾಜ ಕಾಲವಾಡ, ಎನ್.ಟಿ. ಹುಬ್ಬಳ್ಳಿ, ಬಸವರಾಜ ರಾಮೇನಹಳ್ಳಿ, ಶಿವು ಬಾರಕೇರ, ಲಿಂಗರಾಜಗೌಡ ಪಾಟೀಲ, ಶೇಖರಾಜ ಹೊಸಮನಿ, ಶಿವು ನಾಡಗೌಡ್ರ ಸೇರಿದಂತೆ ಅನೇಕರು ಇದ್ದರು. ಎ.ಕೆ. ಮುಲ್ಲಾನವರ ಕಾರ್ಯಕ್ರಮ ನಿರೂಪಿಸಿದರು. ನಾಗೇಶ ಹುಬ್ಬಳ್ಳಿ ವಂದಿಸಿದರು.

ದಕ್ಷಿಣ ಕನ್ನಡಕ್ಕೆ ಸೀಮಿತವಾಗಿದ್ದು ಕೆಸರು ಗದ್ದೆಯ ವಿವಿಧ ಕ್ರೀಡೆಗಳನ್ನು ಬಸವ ಸಾಂಸ್ಕೃತಿಕ ವೇದಿಕೆ ಕಾರ್ಯದರ್ಶಿ ಆನಂದಗೌಡ ಪಾಟೀಲ ಹಾಗೂ ಎಲ್ಲ ಗೆಳೆಯರ ನೇತೃತ್ವದಲ್ಲಿ ಉತ್ತರ ಕರ್ನಾಟಕದ ಜನತೆಯ ಮೋಜಿಗಾಗಿ ಗಣೇಶ ಹಬ್ಬದ ಅಂಗವಾಗಿ ಪ್ರಾರಂಭಿಸಿ ಇದೀಗ ಎರಡೇ ವರ್ಷ. ಕೆಸರುಗದ್ದೆಯ ಓಟ, ಕೆಸರು ಗದ್ದೆಯಲ್ಲಿ ವಾಲಿಬಾಲ್, ಕೆಸರು ಗದ್ದೆಯಲ್ಲಿ ಗಡಿಗೆ ಒಡೆಯುವ ಸ್ಪರ್ಧೆ  ಹಮ್ಮಿಕೊಳ್ಳಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಕೆಸರಿನಲ್ಲಿ ಕಬಡ್ಡಿ, ಹಗ್ಗ ಜಗ್ಗುವ ಕಾರ್ಯಕ್ರಮವನ್ನೂ ಹಾಕಿಕೊಳ್ಳಲಾಗುವುದು.
-ಹೇಮಂತಗೌಡ ಪಾಟೀಲ

ಬಸವ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರು, ಮುಂಡರಗಿ
ಗಣೇಶ ಹಬ್ಬದ ಸಂಭ್ರಮದ ಜತೆಗೆ ಮರೆಯಾಗುತ್ತಿರುವ ದೇಶಿ ಕ್ರೀಡೆಗಳನ್ನು ಜನತೆಯ ಎದುರು ಪ್ರದರ್ಶನಕ್ಕೆ ಅವಕಾಶ ನೀಡುವ ಉದ್ದೇಶದಿಂದ ಮಲ್ಲಗಂಬ ಹಾಗೂ ರೂಪ್‌ಮಲ್ಲಗಂಬ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಿಂದ ಕ್ರೀಡೆಗೂ, ಕ್ರೀಡಾಪಟುಗಳಿಗೂ ಪ್ರೋತ್ಸಾಹ ದೊರೆಯಲಿದೆ.
-ಲೋಕೇಶ ದೊಡ್ಡಮನಿ
ಶ್ರೀ ಗಣೇಶ ಯುವಶಕ್ತಿ ಸಂಘದ ಪದಾಧಿಕಾರಿ, ಮುಂಡರಗಿ
-ಶರಣು ಸೊಲಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement