ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿ ವ್ಯಕ್ತಿ ಪತ್ತೆ
ರೋಣ: ಓಮಿನಿ ವಾಹನವೊಂದರಲ್ಲಿ ವ್ಯಕ್ತಿಯೋರ್ವ ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವ ಘಟನೆ ತಾಲೂಕಿನ ಹೊಸಳ್ಳಿ ಸಮೀಪದ ಹಳ್ಳದಲ್ಲಿ ಶುಕ್ರವಾರ ಬೆಳಗ್ಗೆ ಕಂಡು ಬಂದಿದೆ. ಘಟನೆಗೆ ಕಾರಣ ನಿಗೂಢವಾಗಿದ್ದು, ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ.
ಹೊಸಳ್ಳಿ ಹಳ್ಳದ ಸೇತುವೆ ಬಳಿ ಓಮಿನಿ ವಾಹನದಲ್ಲಿ ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವ ವ್ಯಕ್ತಿಯನ್ನು ನೋಡಿದ ದಾರಿಹೋಕರು ಪೊಲೀಸರಿಗೆ ಸುದ್ದಿ ತಿಳಿಸಿದ್ದಾರೆ. ಬಳಿಕ ಅಂಬ್ಯುಲೆನ್ಸ್ ಮೂಲಕ ರೋಣ ಪಟ್ಟಣದ ಪಂಡಿತ ಡಾ. ಭೀಮಸೇನ ಜೋಶಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡ ಎಸ್ಡಿಎಂಸಿ ಆಸ್ಪತ್ರೆಗೆ ಕಳುಹಿಸಲಾಯಿತು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ರೋಣ ಪಟ್ಟಣದ ಮಲ್ಲೇಶ ಚನ್ನಪ್ಪಗೌಡ್ರ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಶ್ವಾನ ದಳ ಮತ್ತು ಬೆರಳಚ್ಚು ತಜ್ಞ ತಂಡ ಭೇಟಿ ನೀಡಿದೆ. ಡಿಎಸ್ಪಿ ವಿ.ವಿ. ಕುಂಬಾರ, ರೋಣ ಸಿಪಿಐ ಮಲ್ಲನಗೌಡ ನಾಯ್ಕರ, ನರೇಗಲ್ ಪಿಎಸ್ಐ ಎಸ್.ಎನ್. ಅಂಬಿಗೇರ ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದಾರೆ. ಈ ಕುರಿತು ನರೇಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.