ರಸ್ತೆ ಅಪಘಾತ: ಮಾಜಿ ಶಾಸಕ ಲಮಾಣಿ ಪುತ್ರ ಸಾವು
ಲಕ್ಷ್ಮೇಶ್ವರ: ಸಮೀಪದ ರಾಮಗಿರಿ-ಬಸಾಪುರ ನಡುವೆ ಹುಬ್ಬಳ್ಳಿ ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಾಜಿ ಶಾಸಕ ರಾಮಣ್ಣ ಲಮಾಣಿ ಅವರ ಪುತ್ರ ಚಂದ್ರಶೇಖರ ರಾಮಣ್ಣ ಲಮಾಣಿ (34) ಸಾವಿಗೀಡಾದ ಘಟನೆ ಶನಿವಾರ ರಾತ್ರಿ ಸಂಭವಿಸಿದೆ. ಚಂದ್ರು ಲಮಾಣಿ ಅವರು ತಮ್ಮ ಬೊಲೆರೊ ವಾಹನದಲ್ಲಿ ಹುಬ್ಬಳ್ಳಿಯಿಂದ ಲಕ್ಷ್ಮೇಶ್ವರಕ್ಕೆ ಬರುತ್ತಿದ್ದ ವೇಳೆ ಅವರ ವಾಹನವು ಮುಂದೆ ಹೋಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಚಂದ್ರಶೇಖರ ಲಮಾಣಿ ಹಾಗೂ ಚಾಲಕ ರಾಕೇಶ ಲಮಾಣಿ ಅವರಿಗೆ ತೀವ್ರ ಗಾಯಗಳಾಗಿದ್ದು, ಗಾಯಾಳುಗಳನ್ನು ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ತಲೆಗೆ ತೀವ್ರ ಪೆಟ್ಟಾಗಿದ್ದ ಚಂದ್ರಶೇಖರ ಲಮಾಣಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಗಾಯಗೊಂಡ ಚಾಲಕ ರಾಕೇಶನಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತ ಚಂದ್ರಶೇಖರ ಮಾಜಿ ಶಾಸಕ ರಾಮಣ್ಣ ಲಮಾಣಿ ಅವರ ಜೇಷ್ಠ ಪುತ್ರರಾಗಿದ್ದು, ಮೃತರು ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅವರಿಗೆ ಪತ್ನಿ, ಓರ್ವ ಪುತ್ರ, ತಂದೆ-ತಾಯಿ, ಸಹೋದರ ಸಹೋದರಿಯರು ಇದ್ದರು.
ಸೌಲಭ್ಯಕ್ಕೆ ಆಗ್ರಹಿಸಿ ಅನಿರ್ದಿಷ್ಟ ಧರಣಿ
ಗಜೇಂದ್ರಗಡ: ಮನೆ, ನಿವೇಶನ, ಸಮರ್ಪಕ ಪಡಿತರ ಚೀಟಿ ವಿತರಣೆ ಜತೆಗೆ ಕುಡಿವ ನೀರು ಪೂರೈಕೆ ಸೇರಿದಂತೆ ಮೂಲ ಸೌಲಭ್ಯ ಈಡೇರಿಕೆಗೆ ಒತ್ತಾಯಿಸಿ ಸಿಪಿಐ (ಎಂ) ನಗರ ಸಮಿತಿ ವತಿಯಿಂದ ಪಟ್ಟಣದ ಸಾರ್ವಜನಿಕ ಗ್ರಂಥಾಲಯ ಎದುರಿನ ಆವರಣದಲ್ಲಿ ಸೆ. 18ರಿಂದ ಹಗಲು ರಾತ್ರಿ ಅನಿರ್ದಿಷ್ಟಾವಧಿ ಧರಣಿ ನಡೆಯಲಿದೆ ಎಂದು ಸಿಪಿಐ (ಎಂ) ಮುಖಂಡ ಹಾಗೂ ಪುರಸಭೆ ಸದಸ್ಯ ಎಂ.ಎಸ್. ಹಡಪದ ಹೇಳಿದರು. ಅವರು ಶನಿವಾರ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸ್ಥಳೀಯ ಪುರಸಭೆಯಿಂದ ವಾಜಪೇಯಿ ವಸತಿ ವಸತಿ ಯೋಜನೆ ಅಡಿಯಲ್ಲಿ ಆಯ್ಕೆಗೊಂಡ ಫಲಾನುಭವಿಗಳಿಗೆ ಮಾಜಿ ಮತ್ತು ಹಾಲಿ ಶಾಸಕರು ಪ್ರತ್ಯೇಕವಾಗಿ ಕಾರ್ಯಕ್ರಮ ನಡೆಸಿ ಫಲಾನುಭವಿಗಳಿಗೆ ಆದೇಶ ಪತ್ರ ನೀಡಿ ಹಲವು ತಿಂಗಳು ಕಳೆದರೂ ಈವರೆಗೂ ಯಾವೊಬ್ಬ ಫಲಾನುಭವಿಗೆ ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇಲಾಖೆಯಿಂದ ಹಣ ಬಿಡುಗಡೆ ಮಾಡಿಲ್ಲ. ನೀರಿನ ಸಮಸ್ಯೆ ನಿವಾರಣೆಗೆ ಆಗ್ರಹಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಸಿಪಿಐ (ಎಂ) ಕಾರ್ಯದರ್ಶಿ ಮಾರುತಿ ಚಿಟಗಿ ಮಾತನಾಡಿದರು. ಬಾಲು ರಾಠೋಡ, ಬಸವರಾಜ ಶೀಲವಂತರ, ಫಯಾಜ ತೋಟದ, ಪೀರು ರಾಠೋಡ, ರಜಾಕ ಗೊಡೇಕಾರ, ಎಂ.ಬಿ. ಸೋಂಪೂರ, ಮೈಬು ಹವಾಲ್ದಾರ್, ಕಳಕೇಶ ಉಕ್ಕಿಸಲ, ಶಿವು ಚವ್ಹಾಣ ಉಪಸ್ಥಿತರಿದ್ದರು.
16ರಿಂದ ಕವಿವಿ ಖೋಖೋ ಪಂದ್ಯಾವಳಿ
ನರೇಗಲ್ಲ: ಸ್ಥಳೀಯ ಅನ್ನದಾನೇಶ್ವರ ಮಹಾವಿದ್ಯಾಲಯದಲ್ಲಿ ಸೆ. 16 ಹಾಗೂ 17ರಂದು ಕರ್ನಾಟಕ ವಿಶ್ವವಿದ್ಯಾಲಯದ ಮಹಿಳೆಯರ ಏಕವಲಯ ಮಟ್ಟದ ಖೋ-ಖೋ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ. ಸೆ. 16ರ ಬೆಳಗ್ಗೆ 9 ಗಂಟೆಗೆ ಖೋ-ಖೋ ಪಂದ್ಯಾವಳಿಯ ಉದ್ಘಾಟನೆ ಜರುಗಲಿದ್ದು, ಸಾನ್ನಿಧ್ಯವನ್ನು ಹಾಲಕೆರೆಯ ಅನ್ನದಾನ ಶ್ರೀಗಳು ವಹಿಸುವರು. ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ. ಅರವಿಂದ ಸಜ್ಜನ ವಹಿಸುವರು. ಉದ್ಘಾಟನೆಯನ್ನು ಸ್ಥಳೀಯ ಪಿಎಸ್ಐ ಎಸ್.ಎನ್. ಅಂಬಿಗೇರ ನೆರವೇರಿಸುವರು. ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ದೈಹಿಕ ನಿರ್ದೇಶಕ ಕೆ.ಆರ್. ಪಾಟೀಲ, ಕವಿವಿ ಖೋ-ಖೋ ತಂಡದ ಮಾಜಿ ನಾಯಕಿ ಮಧುಮತಿ ಶಿರಹಟ್ಟಿ ಉಪಸ್ಥಿತರಿರುವರು. ಕಾರಣ ಸೆ. 17ರ ಸಂಜೆ 4 ಗಂಟೆಗೆ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭವು ಕಾಲೇಜು ಆವರಣದಲ್ಲಿ ಜರುಗಲಿದೆ ಎಂದು ಜಿ.ಕೆ. ಸರ್ವಮಂಗಳಾ ಹಾಗೂ ಎಸ್.ಬಿ. ಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಕ್ಕಳ ಸೃಜನಶೀಲತೆ ಹೆಚ್ಚಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದು: ಎಸ್ಪಿ
ಗದಗ: ಮಕ್ಕಳ ಮನಸ್ಸು ಮುಗ್ಧತೆಯಿಂದ ಕೂಡಿದ್ದು, ಅವರ ಸುಪ್ತಾವಸ್ತೆಯಲ್ಲಿರುವ ಪ್ರತಿಭೆ ಗುರುತಿಸಿ ಸೃಜನಶೀಲತೆ ಹೆಚ್ಚಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದಾದದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಎಸ್.ಡಿ. ಹೇಳಿದರು. ಅವರು ಶುಕ್ರವಾರ ನಗರದ ಸರ್ಕಾರಿ ಮಾದರಿಯ ಕನ್ನಡ ಗಂಡು ಮಕ್ಕಳ ಶಾಲೆ ಸೆಂಟ್ರಲ್ ಸ್ಕೂಲ್ನಲ್ಲಿ ಗಜಾನನೋತ್ಸವ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪಾರಿತೋಷಕ ವಿತರಿಸಿ ಮಾತನಾಡಿದರು. ನವೋದಯ ಶಾಲೆಗಳಂತೆ ಶಿಕ್ಷಣ ನೀಡುವಲ್ಲಿ ಸರ್ಕಾರಿ ಶಾಲೆಗಳು ಕೂಡಾ ಬದಲಾವಣೆಯತ್ತ ಸಾಗಲಿ. ವಿದ್ಯಾರ್ಥಿಗಳು ಶಿಕ್ಷಕರು ನೀಡುವ ಉತ್ತಮ ಶಿಕ್ಷಣವನ್ನು ಪಡೆದುಕೊಂಡು ಜೀವನದಲ್ಲಿ ಯಶಸ್ಸು ಕಾಣುವಂತೆ ಹಾರೈಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಜೀವ ನಾಯಕ ಮಾತನಾಡಿ, ಶಿಕ್ಷಕರು ಗಣೇಶ ಹಬ್ಬದ ಮಹತ್ವ ತಿಳಿಸುವುದರೊಂದಿಗೆ ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಗುರುತಿಸುವಂತಹ ಕಾರ್ಯಕ್ರಮ ಹಮ್ಮಿಕೊಂಡು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದರು. ಶಾಲಾ ಮುಖ್ಯೋಪಾಧ್ಯಾಯ ಎಸ್.ಎನ್. ಬಳ್ಳಾರಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಎಸ್.ಎ. ಚಂದಪ್ಪನವರ ಹಾಗೂ ಎಸ್.ಎಂ. ಕರಡಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬಿಇಓ ಐ.ಬಿ. ಬೆನಕೊಪ್ಪ, ಶಿಕ್ಷಕ ಸಂಘದ ಅಧ್ಯಕ್ಷ ಬಿ.ಬಿ. ಕುಂದಗೋಳ, ಡಿ.ಎಸ್. ತಳವಾರ, ಎಸ್.ಕೆ. ಮಂಗಳಗುಡ್ಡ, ನವಲಗುಂದ, ಎಸ್ಡಿಎಂಸಿ ಅಧ್ಯಕ್ಷ ಉಮೇಶ ಬಾರಕೇರ, ಎಸ್.ಆರ್. ಹಲಕುರ್ಕಿ, ಎನ್.ಸಿ ಹದ್ಲಿ, ಜಿ.ಎಸ್.ಜತ್ತಿ ಉಪಸ್ಥಿತರಿದ್ದರು. ಎಸ್.ಎಸ್. ಗೌಡರ ಪ್ರಾರ್ಥಿಸಿದರು. ಜೆ.ಜಿ. ಬಿಸರಳ್ಳಿ ಸ್ವಾಗತಿಸಿದರು. ಎಸ್.ಸಿ ಹಾನಗಲ್ಲ ನಿರೂಪಿಸಿದರು. ಹಟ್ಟಿ ಗುರುಗಳು ಉಪಸ್ಥಿತರಿದ್ದರು.
ವಿದ್ಯುತ್ ತಗುಲಿ ಸಾವು
ಗದಗ: ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಜರುಗಿದೆ. ಮೃತನನ್ನು ಶಂಕರ (30) ಎಂದು ಗುರುತಿಸಲಾಗಿದ್ದು, ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿವೃತ್ತ ಶಿಕ್ಷಕ ಅಂದಾನಪ್ಪ ತೋಟಗಂಟಿ ನಿಧನ
ರೋಣ: ತಾಲೂಕು ಸೇರಿದಂತೆ ವಿವಿಧೆಡೆ ಅಪಾರ ಸಂಖ್ಯೆಯಲ್ಲಿ ಶಿಷ್ಯ ಬಳಗವನ್ನು ಹೊಂದಿದ್ದ ಪಟ್ಟಣದ ಬಸವೇಶ್ವರ ನಗರ ನಿವಾಸಿಯಾದ ನಿವೃತ್ತ ಶಿಕ್ಷಕ ಅಂದಾನಪ್ಪ ತೋಟಗಂಟಿ ಇವರು ತಮ್ಮ 83ನೇ ವಯಸ್ಸಿನಲ್ಲಿ ಶುಕ್ರವಾರ ನಿಧನರಾದರು. ಮೃತರು ಐವರು ಪುತ್ರರು, ನಾಲ್ವರು ಪುತ್ರಿಯರು ಅಪಾರ ಬಂಧು ಬಳಗ ಹೊಂದಿದ್ದರು.
ಸಂತಾಪ : ಶಾಸಕ ಜಿ.ಎಸ್. ಪಾಟೀಲ, ರೋಣ ತಾಲೂಕು ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಐ.ಎಸ್.ಪಾಟೀಲ, ಮಿಥುನ ಪಾಟೀಲ, ಧಶರಥ ಗಾಣಿಗೇರ, ವಿ.ಬಿ. ಸೋಮನಕಟ್ಟಿಮಠ ಸೇರಿದಂತೆ ರೋಣ ಪಟ್ಟಣ ತಾಲೂಕಿನ ಅರಹುಣಸಿ, ಕೃಷ್ಣಾಪುರ ಗ್ರಾಮದ ಗಣ್ಯರು ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.